ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ರನ್ ದಾಖಲೆ ಮುರಿಯಲು ‘ಈ ಇಬ್ಬರು’ ಭಾರತೀಯರಿಂದ ಸಾಧ್ಯ ಎಂದ ಲಾರಾ: ಯಾರವರು?

ಇನಿಂಗ್ಸ್‌ವೊಂದರಲ್ಲಿ ಹೆಚ್ಚು ರನ್‌ ಸಾಧನೆ
Last Updated 10 ಡಿಸೆಂಬರ್ 2019, 11:57 IST
ಅಕ್ಷರ ಗಾತ್ರ

ಇತ್ತೀಚೆಗೆ ಪಾಕಿಸ್ತಾನ ಎದುರಿನ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅಜೇಯ 335 ರನ್‌ ಗಳಿಸಿದ್ದರು. ನಿರಾಯಾಸವಾಗಿ ಆಡುತ್ತಿದ್ದ ವಾರ್ನರ್‌ ಬ್ಯಾಟಿಂಗ್‌ ನೋಡಿದ ಕ್ರಿಕೆಟ್‌ ಪಂಡಿತರು, ಇನಿಂಗ್ಸ್‌ವೊಂದರಲ್ಲಿ 400 ರನ್‌ ಗಳಿಸಿದ್ದ ಬ್ರಯನ್‌ ಲಾರಾ ಅವರ ದಾಖಲೆ ಇಂದು ಮುರಿದು ಬೀಳಲಿದೆ ಎಂದು ಅಂದಾಜಿಸಿದ್ದರು. ಆದರೆ, ಅದು ಸುಳ್ಳಾಯಿತು.

ಪಂದ್ಯಕ್ಕೆ ಮಳೆಯ ಭೀತಿ ಇದ್ದುದರಿಂದ ಆಸ್ಟ್ರೇಲಿಯಾ ನಾಯಕ ಟಿಮ್‌ ಪೇನ್‌ ಇನಿಂಗ್ಸ್‌ ಡಿಕ್ಲೇರ್‌ ಘೋಷಿಸಿದ್ದರು. ಹೀಗಾಗಿ ವಾರ್ನರ್‌ಗೆ ಅತಿ ಅಪರೂಪದ ದಾಖಲೆ ಬರೆಯುವ ಅವಕಾಶ ತಪ್ಪಿಹೋಗಿತ್ತು.

ಪೇನ್‌ ನಿರ್ಧಾರವನ್ನು ಹಲವರು ಟೀಕಿಸಿದ್ದರು. ಇನ್ನೂ ಕೆಲವರು ತಂಡದ ಹಿತ ಮುಖ್ಯ ಎಂದು ಸಮರ್ಥಿಸಿಕೊಂಡಿದ್ದರು. ವಾರ್ನರ್‌ ತಮ್ಮ ದಾಖಲೆ ಮುರಿಯಲಿದ್ದಾರೆ ಎಂದು ನಿರೀಕ್ಷಿಸಿ ಅವರನ್ನು ಹಾರೈಸಲು ಸ್ವತಃ ಸಿದ್ಧರಾಗಿದ್ದಲಾರಾ ಬೇಸರವನ್ನೂ ವ್ಯಕ್ತಪಡಿಸಿದ್ದರು.

ಆದರೆ, ಈ ಬಗ್ಗೆ ಸಂಯಮದಿಂದ ಪ್ರತಿಕ್ರಿಯಿಸಿದ್ದ ವಾರ್ನರ್‌ ಮಾತ್ರ, ‘ಲಾರಾ ಅವರ ದಾಖಲೆಯನ್ನು ಮರಿಯಲು ನನಗೆ ಇನ್ನೊಂದು ಅವಕಾಶ ಸಿಗಬಹುದು’ ಎಂದು ಆಶಾಭಾವನೆ ವ್ಯಕ್ತಪಡಿಸಿ ಅಭಿಮಾನಿಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರು. ಮಾತ್ರವಲ್ಲದೆ, ‘ಆ ಮಹತ್ವದ ದಾಖಲೆಯನ್ನು ಸರಿಗಟ್ಟಲು ಭಾರತ ಕ್ರಿಕೆಟ್‌ ತಂಡದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಅವರಿಗೆ ಸಾಧ್ಯವಿದೆ’ ಎಂದು ಭವಿಷ್ಯ ನುಡಿದಿದ್ದಾರೆ.

ಇದೀಗ ಸ್ವತಃ ಬ್ರಯನ್‌ ಲಾರಾ ಅವರೂ ವಾರ್ನರ್‌ ಮಾತನ್ನು ಪುನರುಚ್ಛರಿಸಿದ್ದಾರೆ. ರೋಹಿತ್‌ಗೆ ಇದು ಸಾಧ್ಯವಾಗಲಿದೆ ಎಂದಿರುವ ಅವರು, ಮತ್ತೊಬ್ಬ ಭಾರತೀಯನ ಹೆಸರನ್ನೂ ಉಲ್ಲೇಖಿಸಿದ್ದಾರೆ. ಆ ಹೆಸರು ಯಾರದು ಗೊತ್ತೇ? ಭಾರತ ಪರ ಕೇವಲ ಎರಡೇಎರಡು ಟೆಸ್ಟ್‌ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಪೃಥ್ವಿ ಶಾ ಅವರದ್ದು.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಲಾರಾ, ‘ರೋಹಿತ್‌ ಶರ್ಮಾ ಅವರನ್ನು ನೋಡಿದರೆ ನಿಮಗೆಈತ ಟೆಸ್ಟ್‌ ಕ್ರಿಕೆಟಿಗನೇ ಅಲ್ಲವೇ ಎಂದು ಅಚ್ಚರಿಯಾಗಬಹುದು. ರೋಹಿತ್‌ ಇದೇ ರೀತಿಯ ಆಟ ಮುಂದುವರಿಸಿದರೆ, ಒಂದು ಒಳ್ಳೆಯ ದಿನ, ಒಂದು ಒಳ್ಳೆಯ ಪಿಚ್‌ನಲ್ಲಿ, ಒಂದು ಒಳ್ಳೆಯ ಸಂದರ್ಭದಲ್ಲಿ ಈ ಸಾಧನೆ ಮಾಡಬಲ್ಲ. ಅದಕ್ಕಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಅಂತಹದೇ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯನ್ನು ಪೃಥ್ವಿ ಶಾ ಅಳವಡಿಸಿಕೊಂಡಿದ್ಧಾರೆ. ಪೃಥ್ವಿಗೆ ಇನ್ನೂ 19 ವರ್ಷ. ಕ್ರಿಕೆಟ್‌ ಜಗತ್ತು ಆತನ ಮುಂದಿದೆ. ಖಂಡಿತಾ ಅವರಿಗೂ ಇದು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

2015ರ ಫೆಬ್ರವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಲಾರಾ ಈ ದಾಖಲೆ ಬರೆದಿದ್ದರು. ಕ್ರಿಕೆಟ್‌ನಲ್ಲಿ ಪ್ರತಿದಿನಸಾಕಷ್ಟು ದಾಖಲೆಗಳು ಸೃಷ್ಟಿಯಾಗುತ್ತಿವೆ ಮತ್ತು ಮುರಿದು ಬೀಳುತ್ತಿವೆ. ಆದರೆ, ಲಾರಾ ದಾಖಲೆಗೆ 15 ವರ್ಷವಾದರೂ, ಅದನ್ನು ಮುಟ್ಟಲು ಇನ್ನೂ ಯಾರಿಗೂ ಸಾದ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT