ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ಸ್ಥಿರ ಸಾಮರ್ಥ್ಯ ತೋರುವುದು ಅವಶ್ಯ: ಬ್ರಯನ್‌ ಲಾರಾ

ಹಿರಿಯ ಆಟಗಾರ ಅನಿಸಿಕೆ
Last Updated 9 ಏಪ್ರಿಲ್ 2019, 15:50 IST
ಅಕ್ಷರ ಗಾತ್ರ

ಮುಂಬೈ: ‘ಈ ಬಾರಿಯ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ವೆಸ್ಟ್‌ ಇಂಡೀಸ್‌ ತಂಡಕ್ಕೂ ಇದೆ. ಎಲ್ಲರೂ ಸ್ಥಿರ ಸಾಮರ್ಥ್ಯ ತೋರಿದರಷ್ಟೇ ಈ ಕನಸು ಸಾಕಾರಗೊಳ್ಳಲಿದೆ’ ಎಂದು ವೆಸ್ಟ್‌ ಇಂಡೀಸ್‌ ತಂಡದ ಹಿರಿಯ ಕ್ರಿಕೆಟಿಗ ಬ್ರಯನ್‌ ಲಾರಾ ಅಭಿಪ್ರಾಯಪಟ್ಟಿದ್ದಾರೆ.

‘ಐಪಿಎಲ್‌ ಅಥವಾ ವಿಶ್ವದ ಇತರೆ ಯಾವುದೇ ಕ್ರಿಕೆಟ್‌ ಲೀಗ್ ಅನ್ನು ತೆಗೆದುಕೊಳ್ಳಿ, ಅಲ್ಲಿ ವಿಂಡೀಸ್‌ ಆಟಗಾರರಿಗೆ ಹೆಚ್ಚಿನ ಬೇಡಿಕೆ ಇದೆ. ಎಲ್ಲಾ ಲೀಗ್‌ಗಳಲ್ಲೂ ನಮ್ಮ ಆಟಗಾರರು ಮಿಂಚುತ್ತಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆದ್ದುಕೊಡಬಲ್ಲ ಆಟಗಾರರು ತಂಡದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಸ್ಥಿರ ಸಾಮರ್ಥ್ಯ ತೋರಿದ ತಂಡವೇ ಯಶಸ್ಸು ಗಳಿಸಲಿದೆ’ ಎಂದು ಲಾರಾ ಹೇಳಿದ್ದಾರೆ.

‘ನಮ್ಮ ತಂಡ ನಾಕೌಟ್‌ನಲ್ಲಿ ತುಂಬಾ ಚೆನ್ನಾಗಿ ಆಡುತ್ತದೆ. ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಮಣಿಸಿ ಮುನ್ನುಗ್ಗುತ್ತದೆ. ಹಿಂದಿನ ಟೂರ್ನಿಗಳಲ್ಲಿ ಮೂಡಿಬಂದ ಸಾಮರ್ಥ್ಯ ಗಮನಿಸಿದರೆ ಇದು ಮನದಟ್ಟಾಗುತ್ತದೆ’ ಎಂದಿದ್ದಾರೆ.

‘ಹೋದ ವರ್ಷ ನಡೆದಿದ್ದ ಭಾರತ ಮತ್ತು ಬಾಂಗ್ಲಾದೇಶ ಎದುರಿನ ಸರಣಿಗಳಲ್ಲಿ ನಾವು ನಿರಾಸೆ ಕಂಡಿದ್ದೆವು. ಆದರೆ ಈ ವರ್ಷದ ಆರಂಭದಲ್ಲಿ ಆಯೋಜನೆಯಾಗಿದ್ದ ಇಂಗ್ಲೆಂಡ್‌ ಎದುರಿನ ಸರಣಿಯನ್ನು 2–1ರಿಂದ ಕೈವಶ ಮಾಡಿಕೊಂಡಿದ್ದೆವು. ಆ ಗೆಲುವು ತಂಡದ ಆಟಗಾರರ ಮನೋಬಲವನ್ನು ಹೆಚ್ಚಿಸಿದೆ’ ಎಂದು 49 ವರ್ಷದ ಆಟಗಾರ ನುಡಿದಿದ್ದಾರೆ.

ವಿಂಡೀಸ್‌ ತಂಡ 1975 ಮತ್ತು 1979ರಲ್ಲಿ ವಿಶ್ವಕಪ್‌ ಜಯಿಸಿತ್ತು. ಈ ಸಲ ತಂಡ ಅರ್ಹತಾ ಟೂರ್ನಿಯಲ್ಲಿ ಆಡಿ ವಿಶ್ವಕಪ್‌ಗೆ ಅರ್ಹತೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT