ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಇನಿಂಗ್ಸ್‌ಗೆ ಬಲ ತುಂಬಿದ ಶುಭಮನ್ ಆಟಕ್ಕೆ ಹಿರಿಯ ಕ್ರಿಕೆಟಿಗರ ಮೆಚ್ಚುಗೆ

Last Updated 19 ಜನವರಿ 2021, 6:04 IST
ಅಕ್ಷರ ಗಾತ್ರ

ಬ್ರಿಸ್ಬೇನ್: ಭಾರತ ಕ್ರಿಕೆಟ್‌ ತಂಡದ ಯುವ ಹಾಗೂ ಭರವಸೆಯ ಆಟಗಾರ ಶುಭಮನ್‌ ಗಿಲ್‌ ಅವರ ಆಟಕ್ಕೆ ಹಿರಿಯ ಕ್ರಿಕೆಟಿಗರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಭಾರತ ವಿರುದ್ಧ ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 328 ರನ್‌ಗಳ ಸವಾಲಿನ ಗುರಿ ನೀಡಿದೆ. ಈ ಮೊತ್ತದೆದುರು ಬ್ಯಾಟಿಂಗ್ ಆರಂಭಿಸಿದ ಅಜಿಂಕ್ಯ ರಹಾನೆ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಗಿಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಅನುಭವಿ ರೋಹಿತ್‌ ಶರ್ಮಾ ಕೇವಲ 7 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಈ ವೇಳೆ ಕ್ರೀಸ್‌ಗೆ ಬಂದ ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಜೊತೆಗೂಡಿ ದಿಟ್ಟ ಆಟವಾಡಿದ ಗಿಲ್‌, ಎರಡನೇ ವಿಕೆಟ್‌ ಜೊತೆಯಾಟದಲ್ಲಿ 114 ರನ್‌ ಕೂಡಿಸಿದರು.

ಆಸಿಸ್‌ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಗಿಲ್‌ 146 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 91 ರನ್‌ ಗಳಿಸಿದರು. ಹೀಗಾಗಿ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 369 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಭಾರತ 336 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ 294 ರನ್‌ಗಳಿಗೆ ಸರ್ವಪತನ ಕಂಡಿದೆ.

ಸದ್ಯ ಕೊನೆಯ ದಿನದಾಟ ನಡೆಯುತ್ತಿದ್ದು, ಟೀ ವಿರಾಮದ ವೇಳೆಗೆ ಭಾರತ 3 ವಿಕೆಟ್‌ ಕಳೆದುಕೊಂಡು 183 ರನ್‌ ಗಳಿಸಿದೆ. ಕೊನೆಯ ಅವಧಿಯ ಆಟ ಬಾಕಿ ಇದ್ದು, ಉಳಿದಿರುವ 7 ವಿಕೆಟ್‌ಗಳಿಂದ ಗೆಲ್ಲಲು 145 ರನ್‌ ಗಳಿಸಬೇಕಿದೆ.ಪೂಜಾರ (43) ಮತ್ತು ರಿಷಭ್‌ ಪಂತ್‌ (10) ಕ್ರೀಸ್‌ನಲ್ಲಿದ್ದಾರೆ.

ಗಿಲ್‌ ಕೇವಲ 9 ರನ್‌ಗಳಿಂದ ಶತಕ ತಪ್ಪಿಸಿಕೊಂಡರೂ ಅವರ ಆಟಕ್ಕೆ ಹಿರಿಯ ಆಟಗಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ಗಿಲ್‌ ಭಾರತ ತಂಡದ ಭರವಸೆಯ ಬ್ಯಾಟ್ಸ್‌ಮನ್‌’ ಎಂದು ಶ್ಲಾಘಿಸಿದ್ದಾರೆ.

ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌ ಅವರು, ‘ನಾಲ್ಕನೇ ಇನಿಂಗ್ಸ್‌ ಮತ್ತು 5ನೇ ದಿನದಾಟದಲ್ಲಿ 300ಕ್ಕಿಂತ ಹೆಚ್ಚಿನ ಗುರಿ. ಆದರೆ ನೀವು ಒತ್ತಡದ ಯಾವುದೇ ಲಕ್ಷಣವನ್ನೂ ತೋರಲಿಲ್ಲ. ಚೆನ್ನಾಗಿ ಆಡಿದ್ದೀರಿ ಯಂಗ್‌ ಮ್ಯಾನ್‌’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಖಾಲಿ ಪುಟದ ಚಿತ್ರ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್‌, ‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಶುಭಮನ್‌ ಗಿಲ್‌ ಯಶಸ್ವಿಯಾಗಲಾರರು ಎಂದು ಭಾವಿಸಿದ್ದ ಕ್ರಿಕೆಟ್‌ ಪ್ರೇಮಿಗಳ ಪಟ್ಟಿ ಇಲ್ಲಿದೆ. ಎಂಥಾ ಅದ್ಭುತ ಪ್ರತಿಭೆ’ ಎಂದು ಬರೆದುಕೊಂಡಿದ್ದಾರೆ.

ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ, ‘ಖಚಿತವಾಗಿ ಗಿಲ್‌ ಭವಿಷ್ಯದ ಆಟಗಾರ. ಆದರೆ, ಈಗ ಅವರನ್ನು ಭಾರತ ತಂಡದಲ್ಲಿ ಉಳಿಸುವುದು ಆಯ್ಕೆದಾರರು/ ತಂಡದ ನಿರ್ವಹಣೆಗೆ ಬಿಟ್ಟ ವಿಚಾರ. ಎಲ್ಲ ಸ್ವರೂಪದ ಕ್ರಿಕೆಟ್‌ಗೆ ಆತ ಉತ್ತಮ ಆಟಗಾರ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶತಕದ ಹೊಸ್ತಿಲಿಲ್ಲ ಎಡವಿದ್ದು ದುರದೃಷ್ಟ ಎಂದಿರುವ ಮೊಹಮ್ಮದ್‌ ಕೈಫ್‌, ‘ತಾವು ಭವಿಷ್ಯದ ಆಟಗಾರರಲ್ಲಿ ಒಬ್ಬರು ಎಂಬುದನ್ನು ಶುಭಮನ್‌ ಗಿಲ್‌ ತೋರಿಸಿಕೊಟ್ಟಿದ್ದಾರೆ. ಚೆನ್ನಾಗಿ ಆಡಿದ್ದೀಯ ಯಂಗ್‌ ಮ್ಯಾನ್‌’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಶುಭಮನ್‌ ಗಿಲ್‌ ಇಂದ ಎಂಥಾ ಇನಿಂಗ್ಸ್!’ ಎಂದು ರುದ್ರ ಪ್ರತಾಪ್‌ ಸಿಂಗ್‌ ಉದ್ಘರಿಸಿದ್ದಾರೆ.

ಭಾರತ ಮಾತ್ರವಲ್ಲದೆ ವೆಸ್ಟ್‌ ಇಂಡೀಸ್‌ನ ಕಾರ್ಲೋಸ್‌ ಬ್ರಾಥ್‌ವೇಟ್‌, ಬ್ಯಾಟ್ಸ್‌ಮನ್‌ ಶಾಯ್‌ ಹೋಪ್‌ ಹಾಗೂ ಇಂಗ್ಲೆಂಡ್‌ನ ಸ್ಯಾಮ್‌ ಬಿಲ್ಲಿಂಗ್ಸ್‌ ಅವರೂ ಶುಭಮನ್‌ಗೆ ಬೆನ್ನು ತಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT