ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND v ENG Test | ಜೈಸ್ವಾಲ್ ’ಡಬಲ್‘ ಬೂಮ್ರಾ ’ಸಿಕ್ಸರ್’

ಭಾರತ ತಂಡಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ; ಭಾರತದ ವೇಗಿಯ ಆರ್ಭಟ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಒಂದು ಕಡೆ ಯಶಸ್ವಿ ಜೈಸ್ವಾಲ್ ದ್ವಿಶತಕದ ಭರಾಟೆ, ಮತ್ತೊಂದೆಡೆ ಜಸ್‌ಪ್ರೀತ್ ಬೂಮ್ರಾ ವೇಗದ ದಾಳಿಯ ಮುಂದೆ ಇಂಗ್ಲೆಂಡ್ ತಂಡವು ತತ್ತರಿಸಿತು.

ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 396 ರನ್‌ ಮೊತ್ತಕ್ಕೆ ಪ್ರತ್ಯುತ್ತರ ನೀಡುವ ಹಾದಿಯಲ್ಲಿ ಇಂಗ್ಲೆಂಡ್ ಕುಸಿಯಿತು. ಅರ್ಧಡಜನ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡ ಬೂಮ್ರಾ ಅವರು ಅತಿಥೇಯ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆಯ ಕಾಣಿಕೆ ನೀಡಿದರು. ಪ್ರವಾಸಿ ಬಳಗವು 253 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

ಎರಡನೇ ದಿನವಾದ ಶನಿವಾರ ಸಂಜೆಯ ಹೊತ್ತಿಗೆ ಮತ್ತೆ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಬಳಗವು 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿದೆ. 

ಮೊದಲ ದಿನವಾದ ಶುಕ್ರವಾರ 6 ವಿಕೆಟ್‌ಗಳಿಗೆ 336 ರನ್ ಗಳಿಸಿದ್ದ ಭಾರತ ತಂಡವು ಎರಡನೇ ದಿನದಾಟದಲ್ಲಿ 400ರ ಗಡಿ ಮುಟ್ಟಲಿಲ್ಲ. ಆದರೆ 179 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಯಶಸ್ವಿ ದ್ವಿಶತಕ (209; 290ಎ) ಪೂರೈಸಿ ಸಂಭ್ರಮಿಸಿದರು. ಒಟ್ಟು 19 ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಅವರು ಸಿಡಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕಕ್ಕೆ ದ್ವಿಶತಕದ ರಂಗು ತುಂಬಿದರು. ಲಯಬದ್ಧ ಪದಚಲನೆ, ಸುಂದರ ಡ್ರೈವ್‌ಗಳ ಆಟದ ಮೂಲಕ ದಿಗ್ಗಜ ಕ್ರಿಕೆಟಿಗರಿಂದ ಮೆಚ್ಚುಗೆ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಆಟಕ್ಕೆ ಶ್ಲಾಘನೆಗಳು ಅಪಾರ ಸಂಖ್ಯೆಯಲ್ಲಿ ಹರಿದುಬರುತ್ತಿವೆ. 

ಇಂಗ್ಲೆಂಡ್ ತಂಡದ ಮೂವರು ಸ್ಪಿನ್ನರ್‌ಗಳು ಸೇರಿ ಏಳು ವಿಕೆಟ್ ಗಳಿಸಿದರು. ವೇಗಿ ಆ್ಯಂಡರ್ಸನ್ ಮೂರು ವಿಕೆಟ್ ಗಳಿಸಿದರು.

ಬೂಮ್ರಾ ಬಿರುಗಾಳಿ

ಸ್ಪಿನ್ನರ್‌ಗಳಿಗೆ ನೆರವಾಗುವಂತೆ ಕಾಣುತ್ತಿದ್ದ ಪಿಚ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ವಿಜೃಂಭಿಸಿದರು. ಭಾರತದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರು ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ವಿಕೆಟ್‌ಗಳನ್ನು ಗಳಿಸಿ ಮೊದಲ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು. ಕ್ರಾಲಿ (76 ರನ್) ಮತ್ತು ಬೆನ್ ಡಕೆಟ್ ಅವರು ಮೊದಲ ವಿಕೆಟ್‌ಗೆ 59 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.

ಇದರ ನಂತರ ಬೂಮ್ರಾ ದಾಳಿ ರಂಗೇರಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಕಾಡಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಓಲಿ ಪೋಪ್, ಅನುಭವಿ ಜೋ ರೂಟ್, ಜಾನಿ ಬೆಸ್ಟೊ, ನಾಯಕ ಬೆನ್ ಸ್ಟೋಕ್ಸ್ (47; 54ಎ) ಮತ್ತು ಟಾಮ್ ಹಾರ್ಟ್ಲಿ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

‘ವಿಕೆಟ್ ಟು ವಿಕೆಟ್’ ಬೌಲಿಂಗ್ ಮಾಡಿದ ಅವರ ಎಸೆತಗಳನ್ನು ಎದುರಿಸುವಲ್ಲಿ ಬ್ಯಾಟರ್‌ಗಳು ಎಡವಿದರು. ಸ್ಟೋಕ್ಸ್ ಮಾತ್ರ ಸ್ವಲ್ಪ ವಿಶ್ವಾಸಭರಿತ ಅಟವಾಡಿದರು. ಅರ್ಧಶತಕದ ಸನಿಹ ಸಾಗಿದ್ದ ಅವರೂ ಬೂಮ್ರಾ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು. 

ಜಸ್‌ಪ್ರೀತ್ ಬೂಮ್ರಾ ಅವರನ್ನು ಅಭಿನಂದಿಸಿದ ಸಹ ಆಟಗಾರರು  –ಎಎಫ್‌ಪಿ ಚಿತ್ರ
ಜಸ್‌ಪ್ರೀತ್ ಬೂಮ್ರಾ ಅವರನ್ನು ಅಭಿನಂದಿಸಿದ ಸಹ ಆಟಗಾರರು  –ಎಎಫ್‌ಪಿ ಚಿತ್ರ

‘ಯಶಸ್ವಿ ಸಾಧನೆ ಬೇಡ ಅತಿರಂಜನೆ‘

ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಉತ್ತಮವಾಗಿ ಆಡುತ್ತಿದ್ದಾರೆ. ಅವರನ್ನು ಆಡಲು ಬಿಡಿ. ಈಗ ಅವರು ಮಾಡುತ್ತಿರುವ ಸಾಧನೆಗಳನ್ನು ಅತಿರಂಜಿತಗೊಳಿಸಬಾರದು ಎಂದು ವೀಕ್ಷಕ ವಿವರಣೆಗಾರ ಗೌತಮ್ ಗಂಭೀರ್ ಹೇಳಿದ್ದಾರೆ. ‘ಯಶಸ್ವಿ ಅವರ ಸಾಧನೆಗೆ ಅಭಿನಂದನೆಗಳು. ಅವರ ಆಮೋಘವಾಗಿತ್ತು. ಆದರೆ ಯಾರಾದರೂ ಇಂತಹ ಸಾಧನೆ ಮಾಡಿದಾಗ ಅವರನ್ನು ಹೊಗಳಿ ಅಟ್ಟಕ್ಕೇರಿಸಿಬಿಡುವ ಚಾಳಿ ನಮ್ಮಲ್ಲಿದೆ. ಅದು ಸಲ್ಲದು. ಇದರಿಂದ ಆಟಗಾರನ ಮೇಲೆ ಒತ್ತಡ  ಹೆಚ್ಚಬಹುದು. ಸಾಮರ್ಥ್ಯ ಕುಗ್ಗಬಹುದು. ಆದ್ದರಿಂದ ಯಶಸ್ವಿ ತನ್ನ ನೈಜ ಸಾಮರ್ಥ್ಯವನ್ನು ಹೊರಹಾಕಲು ಮುಕ್ತ ವಾತಾವರಣ  ಇರಬೇಕು. ಅವರ ಸಾಧನೆಗಳನ್ನು ಗೌರವಿಸೋಣ ಅತಿರಂಜಿತಗೊಳಿಸುವುದು ಬೇಡ’ ಎಂದರು.

ಎರಡನೇ ಎಡಗೈ ಬ್ಯಾಟರ್

ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಭಾರತದ ಎರಡನೇ ಎಡಗೈ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾದರು. 2008ರಲ್ಲಿ ಗೌತಮ್ ಗಂಭೀರ್  ಆಸ್ಟ್ರೇಲಿಯಾ ಎದುರು ದ್ವಿಶತಕ ಗಳಿಸಿದ್ದರು. ಅದಾದ ನಂತರ ಇಲ್ಲಿಯವರೆಗೆ ಯಾರೂ ಆ ಸಾಧನೆಯನ್ನು ಮಾಡಿರಲಿಲ್ಲ. ಇದೀಗ ಜೈಸ್ವಾಲ್ ಯಶಸ್ವಿಯಾಗಿದ್ದಾರೆ. ಶೇ 50ರಷ್ಟು ರನ್: ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 396 ರನ್‌ಗಳ ಮೊತ್ತದಲ್ಲಿ ಯಶಸ್ವಿ ಜೈಸ್ವಾಲ್ ಅವರ ಪಾಲು ಶೇ. 50ಕ್ಕಿಂತಲೂ ಹೆಚ್ಚು. ಅವರು ದ್ವಿಶತಕ ಹೊಡೆದರು. ಉಳಿದಂತೆ ಶುಭಮನ್ ಗಿಲ್ 34 ಮತ್ತು ರಜತ್ ಪಾಟೀದಾರ್  32 ರನ್ ಗಳಿಸಿದರು. ಬೇರೆ ಬ್ಯಾಟರ್‌ಗಳು ಅದಕ್ಕಿಂತಲೂ ಕಡಿಮೆ ಮೊತ್ತ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT