ಗುರುವಾರ , ಸೆಪ್ಟೆಂಬರ್ 23, 2021
27 °C
ಎಂಟನೇ ಬಾರಿ ಪ್ರಶಸ್ತಿ ಸುತ್ತಿಗೆ ಚೆನ್ನೈ

ಪ್ಲೆಸಿ–ವಾಟ್ಸನ್‌ ಅಬ್ಬರದ ಅರ್ಧಶತಕ: ಡೆಲ್ಲಿ ಫೈನಲ್ ಕನಸು ಭಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ಐಪಿಎಲ್‌ನಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕನಸು ಶುಕ್ರವಾರ ಭಗ್ನಗೊಂಡಿತು.

ಇಲ್ಲಿನ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಕ್ವಾಲಿಫೈಯರ್‌ ಹೋರಾಟದಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ 6 ವಿಕೆಟ್‌ಗಳಿಂದ ಶ್ರೇಯಸ್‌ ಅಯ್ಯರ್‌ ಪಡೆಯನ್ನು ಮಣಿಸಿತು.

ಈ ಗೆಲುವಿನೊಂದಿಗೆ ಧೋನಿ ಬಳಗವು ದಾಖಲೆಯ ಎಂಟನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತು. ಮೂರು ಸಲ ಚಾಂಪಿಯನ್‌ ಆಗಿರುವ ಈ ತಂಡವು ನಾಲ್ಕು ಬಾರಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದೆ.

ಭಾನುವಾರ ನಡೆಯುವ ಫೈನಲ್‌ನಲ್ಲಿ ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗಲಿವೆ.

ಮೊದಲು ಬ್ಯಾಟ್‌ ಮಾಡಿದ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 147ರನ್‌ ಸೇರಿಸಿತು. ಸುಲಭ ಗುರಿಯನ್ನು ಹಾಲಿ ಚಾಂಪಿಯನ್‌ ಚೆನ್ನೈ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಅಬ್ಬರದ ಆರಂಭ: ಮಹತ್ವದ ಹಣಾಹಣಿಯಲ್ಲಿ ಫಾಫ್‌ ಡು ಪ್ಲೆಸಿ (50; 39ಎ, 7ಬೌಂ, 1ಸಿ) ಮತ್ತು ಶೇನ್‌ ವಾಟ್ಸನ್‌ (50; 32ಎ, 3ಬೌಂ, 4ಸಿ) ತಂಡಕ್ಕೆ ಅಬ್ಬರದ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 81ರನ್‌ ಗಳಿಸಿ ಜಯದ ಹಾದಿ ಸುಗಮ ಮಾಡಿತು.

ಹಿಂದಿನ ಪಂದ್ಯಗಳಲ್ಲಿ ರನ್‌ ಬರ ಎದುರಿಸಿದ್ದ ಪ್ಲೆಸಿ ಮತ್ತು ವಾಟ್ಸನ್‌ ನಿರ್ಣಾಯಕ ಹಣಾಹಣಿಯಲ್ಲಿ ಲಯ ಕಂಡುಕೊಂಡರು. ಈ ಜೋಡಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದಾಗಲೆಲ್ಲಾ ಅಭಿಮಾನಿಗಳ ಸಂತಸ ಮುಗಿಲು ಮುಟ್ಟುತ್ತಿತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಚೆನ್ನೈ ಧ್ವಜಗಳು ರಾರಾಜಿಸುತ್ತಿದ್ದವು.

ತಾವೆದುರಿಸಿದ 37ನೇ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ಪೂರೈಸಿದ ಪ್ಲೆಸಿ, ಟ್ರೆಂಟ್‌ ಬೌಲ್ಟ್‌ ಹಾಕಿದ 11ನೇ ಓವರ್‌ನ ಎರಡನೇ ಎಸೆತದಲ್ಲಿ ಕೀಮೊ ಪಾಲ್‌ಗೆ ಕ್ಯಾಚಿತ್ತರು.

ಆರಂಭದಲ್ಲಿ ಮಂದಗತಿಯಲ್ಲಿ ಬ್ಯಾಟಿಂಗ್‌ ಮಾಡಿದ ವಾಟ್ಸನ್‌, ಆಟಕ್ಕೆ ಕುದುರಿಕೊಂಡ ಬಳಿಕ ರಟ್ಟೆ ಅರಳಿಸಿ ಆಡಿದರು. ಕೀಮೊ ಪಾಲ್‌ ಹಾಕಿದ 12ನೇ ಓವರ್‌ನಲ್ಲಿ ಅವರು ತಲಾ ಎರಡು ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿದ್ದು ಇದಕ್ಕೆ ಸಾಕ್ಷಿ. ಈ ಓವರ್‌ನಲ್ಲಿ ಚೆನ್ನೈ ಖಾತೆಗೆ 25ರನ್‌ಗಳು ಸೇರ್ಪಡೆಯಾದವು. ಅರ್ಧಶತಕ ಗಳಿಸಿದ ಬೆನ್ನಲ್ಲೇ ವಾಟ್ಸನ್‌, ಅಮಿತ್‌ ಮಿಶ್ರಾಗೆ ವಿಕೆಟ್‌ ನೀಡಿ ಹೊರ ನಡೆದರು.

ಸುರೇಶ್‌ ರೈನಾ (11; 13ಎ) ಮತ್ತೊಮ್ಮೆ ವಿಫಲರಾದರು. ನಂತರ ಅಂಬಟಿ ರಾಯುಡು (ಔಟಾಗದೆ 20; 20ಎ, 3ಬೌಂ) ಮತ್ತು ನಾಯಕ ಧೋನಿ (9; 9ಎ, 1ಬೌಂ) ತಂಡದ ಮೊತ್ತ ಹೆಚ್ಚಿಸಿದರು. ಗೆಲುವಿಗೆ ಎರಡು ರನ್‌ ಬೇಕಿದ್ದಾಗ ಮಹಿ ಔಟಾದರು. ನಂತರ ರಾಯುಡು ‘ಜಯದ ಶಾಸ್ತ್ರ’ ಮುಗಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಪೃಥ್ವಿ ಶಾ (5) ಮತ್ತು ಶಿಖರ್ ಧವನ್‌ (18; 14ಎ, 3ಬೌಂ) ವಿಕೆಟ್‌ ಬೇಗನೆ ಕಳೆದುಕೊಂಡಿತು. ನಾಯಕ ಶ್ರೇಯಸ್ (13)  ಕೂಡ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಕಾಲಿನ್ ಮನ್ರೊ (27; 24ಎ, 4ಬೌಂ) ಔಟಾದ ನಂತರ ರಿಷಭ್ ಪಂತ್ ಜೊತೆಗೂಡಿದ ಶ್ರೇಯಸ್‌ ಕೇವಲ 18 ರನ್ ಜೋಡಿಸಿದರು.

ರಿಷಭ್ ಏಕಾಂಗಿಯಾಗಿ ಹೋರಾಡಿದರು. 25 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 38 ರನ್‌ ಗಳಿಸಿದರು. ಆದರೆ ಅವರ ವಿಕೆಟ್ ಕಬಳಿಸಿದ ಚಾಹರ್ ಸಂಭ್ರಮಿಸಿದರು. ಡೆಲ್ಲಿ ತಂಡದ ಒಟ್ಟು ಐದು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಟಲಾಗದೆ ವಾಪಸಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು