ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಸ್ಟೊಯಿನಿಸ್ ಶತಕ; ಚೆನ್ನೈ ಎದುರು ಲಖನೌಗೆ 6 ವಿಕೆಟ್ ಜಯ

Published 23 ಏಪ್ರಿಲ್ 2024, 18:11 IST
Last Updated 23 ಏಪ್ರಿಲ್ 2024, 18:11 IST
ಅಕ್ಷರ ಗಾತ್ರ

ಚೆನ್ನೈ: ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮಿಂಚಿನ ಶತಕದ ಬಲದಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಆರು ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಚೆನ್ನೈ ತಂಡವು ಋತುರಾಜ್ ಗಾಯಕವಾಡ ಶತಕ ಹಾಗೂ ಶಿವಂ ದುಬೆ ಅವರ ಬೀಸಾಟದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ಗಳ ಮೊತ್ತ ದಾಖಲಿಸಿತು. ‌

ಅದಕ್ಕುತ್ತರವಾಗಿ ಲಖನೌ ತಂಡವು 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 213 ರನ್ ಗಳಿಸಿ ಗೆದ್ದಿತು. ಲಖನೌ ತಂಡವು 11 ಓವರ್‌ಗಳಲ್ಲಿ 88 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಚೆನ್ನೈ ಸುಲಭ ಜಯ ಸಾಧಿಸುವಂತೆ ಕಂಡಿತ್ತು. ಆದರೆ, ಸ್ಟೊಯಿನಿಸ್ (ಔಟಾಗದೇ 124, 63ಎ, 4X13, 6X6) ಮತ್ತು ನಿಕೊಲಸ್‌ ಪೂರನ್ (34, 15ಎ, 4X3, 6X2) ಎಲ್ಲವನ್ನೂ ಬುಡಮೇಲು ಮಾಡಿದರು. ಚೆನ್ನೈ ತಂಡದ ಕೈಯಿಂದ ಗೆಲುವು ಕಸಿದುಕೊಂಡರು.

ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ ಬೇಗನೇ ಔಟಾದರು. ಕ್ವಿಂಟನ್ ಖಾತೆ ತೆರೆಯಲು ಚಾಹರ್‌ ಬಿಡಲಿಲ್ಲ. ಸ್ಟೊಯಿನಿಸ್‌ ಅವರೊಂದಿಗೆ ಸೇರಿಕೊಂಡ ಪೂರನ್ ಚೆನ್ನೈ ತಂಡದ ಬೌಲರ್‌ಗಳನ್ನು ಕಾಡಿದರು.

ಮಥೀಶ್ ಪಥಿರಾಣ ಬೌಲಿಂಗ್‌ನಲ್ಲಿ ಪೂರನ್ ಅವರು ಠಾಕೂರ್‌ಗೆ ಕ್ಯಾಚಿತ್ತರು. ಬಳಿಕ ಬಂದ ದೇವದತ್ತ ಪಡಿಕ್ಕಲ್ 19 ಎಸೆತಗಳಲ್ಲಿ 13 ರನ್‌ ಗಳಿಸಿ, ಪಥಿರಾಣಗೆ ವಿಕೆಟ್ ಒಪ್ಪಿಸಿದರು.

ಸ್ಟೊಯಿನಿಸ್ ಜತೆಗೂಡಿದ ದೀಪಕ್ ಹೂಡಾ 6 ಎಸೆತಗಳಲ್ಲಿ 17 ರನ್ ಗಳಿಸಿದರು. ಇದರಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್‌ ಸೇರಿತು.

ಮುಸ್ತಫಿಜುರ್‌ ರೆಹಮಾನ್ 3.3 ಓವರ್‌ಗಳಲ್ಲಿ 51 ರನ್ ನೀಡಿ ದುಬಾರಿ ಎನಿಸಿದರು.

ಋತುರಾಜ್ ಶತಕ, ದುಬೆ ಬೀಸಾಟ: ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಮ್ಯಾಟ್ ಹೆನ್ರಿ ಆಘಾತ ನೀಡಿದರು. ಕೇವಲ 1 ರನ್ ಗಳಿಸಿದ ಅಜಿಂಕ್ಯ ರಹಾನೆ ಅವರು ಹೆನ್ರಿ ಎಸೆತ ಆಡುವ ಪ್ರಯತ್ನದಲ್ಲಿ ರಾಹುಲ್‌ಗೆ ಕ್ಯಾಚಿತ್ತರು.

ಆದರೆ ನಾಯಕನಿಗೆ ತಕ್ಕ ಆಟವಾಡಿದ ಋತುರಾಜ್ (ಔಟಾಗದೆ 108; 60ಎ, 4X12, 6X3) ತಂಡಕ್ಕೆ ಆಸರೆಯಾದರು. ಡ್ಯಾರಿಲ್ ಮಿಚೆಲ್ (11; 10ಎ) ಹೆಚ್ಚು ಹೊತ್ತು ಆಡಲಿಲ್ಲ.

ಎರಡನೇ ಓವರ್‌ನಲ್ಲಿ ಲಭಿಸಿದ್ದ ಜೀವದಾನವನ್ನು ಮಿಚೆಲ್ ಬಳಸಿಕೊಳ್ಳಲಿಲ್ಲ. ಆದರೆ ಋತುರಾಜ್ ಮತ್ತು ರವೀಂದ್ರ ಜಡೇಜ (16; 19ಎ) ಆವರು 3ನೇ ವಿಕೆಟ್ ಜೊತೆಯಾಟದಲ್ಲಿ 52 ರನ್‌ ಸೇರಿಸಿದರು.

ಮೊಹಸಿನ್ ಖಾನ್ ಬೌಲಿಂಗ್‌ನಲ್ಲಿ ಜಡೇಜ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಆಗ ಕ್ರೀಸ್‌ಗೆ ಬಂದ ಶಿವಂ ದುಬೆ ಬೀಸಾಟಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಋತುರಾಜ್ ಕೂಡ ತಮ್ಮ ಆಟದ ವೇಗ ಹೆಚ್ಚಿಸಿದರು. 4ನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರೂ 104 (46ಎಸೆತ) ರನ್ ಸೇರಿಸಿದರು.

ಋತುರಾಜ್ ಐಪಿಎಲ್‌ನಲ್ಲಿ ಎರಡನೇ ಶತಕ ದಾಖಲಿಸಿದರು. 56 ಎಸೆತಗಳಲ್ಲಿ ಅವರು ನೂರರ ಗಡಿ ಮುಟ್ಟಿದರು. ಅವರ ಆಟದ ರಭಸಕ್ಕೆ ಲಖನೌ ಬೌಲರ್‌ಗಳು ಬಸವಳಿದರು. 19ನೇ ಓವರ್‌ನಲ್ಲಿ ಮೊಹಸಿನ್ ಎಸತದಲ್ಲಿ ಶಿವಂ ದುಬೆ ಕ್ಯಾಚ್‌ ಕೈಚೆಲ್ಲಿದ ಕ್ವಿಂಟನ್ ಡಿಕಾಕ್ ಜೀವದಾನ ನೀಡಿದರು.

ಆದರೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಕ್ವಿಂಟನ್ ಮತ್ತು ಸ್ಟೋಯಿನಿಸ್ ಅವರ ಚುರುಕಾದ ಫೀಲ್ಡಿಂಗ್‌ನಿಂದ ದುಬೆ ರನ್‌ಔಟ್ ಆದರು. ಕ್ರೀಸ್‌ಗೆ ಬಂದ ಮಹೇಂದ್ರಸಿಂಗ್ ಧೋನಿ ಎದುರಿಸಿದ ಏಕೈಕ ಎಸೆತವನ್ನೂ ಬೌಂಡರಿಗೆ ಕಳಿಸಿದರು.

ಸಂಕ್ಷಿಪ್ತ ಸ್ಕೋರ್

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 (ಋತುರಾಜ್ ಗಾಯಕವಾಡ ಔಟಾಗದೆ 108, ಶಿವಂ ದುಬೆ 66, ಮ್ಯಾಟ್ ಹೆನ್ರಿ 28ಕ್ಕೆ1, ಮೊಹಸಿನ್ ಖಾನ್ 50ಕ್ಕೆ1, ಯಶ್ ಠಾಕೂರ್ 47ಕ್ಕೆ1)

ಲಖನೌ ಸೂಪರ್ ಜೈಂಟ್ಸ್‌: 19.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213. (ಮಾರ್ಕಸ್ ಸ್ಟೊಯಿನಿಸ್ ಔಟಾಗದೆ 124, ನಿಕೊಲಸ್ ಪೂರನ್ 34, ಮಥೀಶ್‌ ಪಥಿರಾಣ 35ಕ್ಕೆ2, ದೀಪಕ್ ಚಾಹರ್ 11ಕ್ಕೆ1)

‍‍ಪಂದ್ಯದ ಆಟಗಾರ: ಮಾರ್ಕಸ್ ಸ್ಟೊಯಿನಿಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT