ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಶತಕವಂಚಿತ ಆಟಗಾರ ಮರೆಯಾದಾಗ

Last Updated 17 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌ಗೆ ಬಲಿಯಾದ ಚೇತನ್‌ ಚೌಹಾಣ್‌ (73) ಅವರನ್ನು ಕ್ರಿಕೆಟ್‌ ಪ್ರೇಮಿಗಳು ನೆನಪಿನಲ್ಲಿಟ್ಟುಕೊಳ್ಳುವುದು ಸುನಿಲ್‌ ಗಾವಸ್ಕರ್‌ ಅವರ ದೀರ್ಘ ಕಾಲದ ಟೆಸ್ಟ್‌ ಕ್ರಿಕೆಟ್‌ ಆರಂಭ ಜೊತೆಯಾಟಗಾರನೆಂದು. ದೊಡ್ಡ ಜೊತೆಯಾಟಗಳಿಂದ ಗಾವಸ್ಕರ್‌– ಚೌಹಾಣ್‌ ಜೋಡಿ 1970ರ ದಶಕದ ಕೊನೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಿತು. ಆಗಿನ ಕಾಲದ ಪ್ರಬಲ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ಉತ್ತಮ ಹೋರಾಟ ತೋರಲು ಇವರಿಬ್ಬರು ಹಾಕುತ್ತಿದ್ದ ಅಡಿಪಾಯ ಪ್ರಮುಖಪಾತ್ರ ವಹಿಸುತಿತ್ತು.

ಚೌಹಾಣ್‌ 13 ವರ್ಷಗಳ (1969 ರಿಂದ 1981) ಕ್ರಿಕೆಟ್‌ ಜೀವನದಲ್ಲಿ 40 ಟೆಸ್ಟ್‌ಗಳಲ್ಲಿ ಆಡಿದ್ದರೂ, ಕೊನೆಯ ಐದು ವರ್ಷಗಳಲ್ಲಿ ಅವರು ಹೆಚ್ಚು ಗಮನ ಸೆಳೆದರು. ಹತ್ತು ಬಾರಿ ಮೊದಲ ವಿಕೆಟ್‌ಗೆ ಶತಕದ (ಒಮ್ಮೆ ದ್ವಿಶತಕದ) ಜೊತೆಯಾಟ ಸೇರಿದಂತೆ ಹಲವು ಬಾರಿ ಉಪಯುಕ್ತ ಆಟವಾಡಿದರೂ ಒಂದು ಶತಕವನ್ನೂ ಗಳಿಸಲಾಗದ ಬೇಸರದಲ್ಲಿ ಚೌಹಾಣ್‌ ನಿವೃತ್ತರಾಗಬೇಕಾಯಿತು.

ಇನ್ನೊಂದೆಡೆ ಅವರ ದೀರ್ಘ ಕಾಲದ ಜೊತೆಗಾರ ಸುನೀಲ್‌ ಗಾವಸ್ಕರ್‌ ನಿವೃತ್ತರಾದಾಗ, ವಿಶ್ವದಲ್ಲೇ ಅತಿ ಹೆಚ್ಚು ಶತಕಗಳನ್ನು (34) ಹೊಡೆದ ಗೌರವಕ್ಕೆ ಪಾತ್ರರಾದರು.

ಚೇತನ್‌ ಚೌಹಾಣ್‌ ಅವರ ಟೆಸ್ಟ್‌ ಜೀವನದ ಆರಂಭ ನೆನಪಿನಲ್ಲಿ ಇಟ್ಟುಕೊಳ್ಳುವಂತಿರಲಿಲ್ಲ. 1969ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಚೌಹಾಣ್‌, ಹಿನ್ನಡೆಗಳಿಂದಾಗಿ ಕೇವಲ ಮೂರು ಟೆಸ್ಟ್‌ಗಳ ನಂತರ ತಂಡದಿಂದ ಹೊರಬಿದ್ದರು. 1973ರಲ್ಲಿ ಮತ್ತೆ ಪುನರಾಗಮನ. ಮತ್ತೆ ಕೆಲವು ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. ಹೆಚ್ಚಿನ ಮೊತ್ತ ಗಳಿಸದಿದ್ದರೂ ಅವರು ಸುಲಭವಾಗಿ ವಿಕೆಟ್‌ ಬಿಟ್ಟುಕೊಡುತ್ತಿರಲಿಲ್ಲ. ಏಕದಿನ ಪಂದ್ಯಗಳು ಆಗಿನ್ನೂ ಇರದ ಕಾರಣ ಆಕ್ರಮಣಕಾರಿಯಾಗಿ ಆಡುವ ಆಟಗಾರರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು. ಚೌಹಾಣ್‌ ಕೂಡ ಕ್ರೀಸ್‌ನಲ್ಲಿದ್ದಾಗ ಸಾಹಸಕಾರಿ ಹೊಡೆತಗಳಿಗೆ ಹೋಗುವ ಜಾಯಮಾನ ತೋರಲಿಲ್ಲ. ಎರಡನೇ ಯತ್ನದಲ್ಲೂ ಅವರು ಆಡಿದ್ದು ಕೆಲವೇ ಪಂದ್ಯಗಳನ್ನು.

ಫರೂಕ್‌ ಎಂಜಿನಿಯರ್‌ ಮತ್ತು ಅಂಶುಮನ್‌ ಗಾಯಕವಾಡ್‌ ಅವರ ಪೈಪೋಟಿಯೂ ಚೌಹಾಣ್‌ಗೆ ಎದುರಾಗಿತ್ತು. ನಾಲ್ಕು ವರ್ಷಗಳ ನಂತರ, 1977–78 ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ತಂಡಕ್ಕೆ ಆಯ್ಕೆಯಾದರು. ಈ ಬಾರಿ ಮಾತ್ರ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವರಲ್ಲಿ ಯಶಸ್ವಿಯಾದರು. ಹತ್ತು ಶತಕದ ಜೊತೆಯಾಟಗಳು ಬಂದಿದ್ದು ಇದೇ ಅವಧಿಯಲ್ಲಿ. ಇದರಲ್ಲಿ ಇಂಗ್ಲೆಂಡ್‌ ವಿರುದ್ಧ ದ್ವಿಶತಕದ ಜೊತೆಯಾಟವೂ (ಓವಲ್‌ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 213) ಒಳಗೊಂಡಿತ್ತು. ಆ ಪಂದ್ಯದಲ್ಲಿ ಚೌಹಾಣ್‌ 80 ರನ್‌ ಗಳಿಸಿದರೆ, ಗಾವಸ್ಕರ್‌ ದ್ವಿಶತಕ ಬಾರಿಸಿದ್ದರು.

ಈ ಜೋಡಿ ಎರಡು ಬಾರಿ 192 ರನ್‌ ಜೊತೆಯಾಟದಲ್ಲಿ ಪಾಲ್ಗೊಂಡಿತ್ತು. ಒಮ್ಮೆ ಲಾಹೋರ್‌ನಲ್ಲಿ ಪಾಕ್‌ ವಿರುದ್ಧ (1978–79), ಮತ್ತೊಮ್ಮೆ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ (1979–80) ಈ ಸಾಧನೆ ಮಾಡಿತ್ತು.

ಆಗಿನ ಕಾಲದ ವೇಗದ ಬೌಲರ್‌ಗಳೂ ಎದುರಾಳಿ ಆಟಗಾರರಲ್ಲಿ ನಡುಕ ಹುಟ್ಟಿಸುವವರೇ ಆಗಿದ್ದರು. ಆಸ್ಟ್ರೇಲಿಯಾದ ಜೆಫ್‌ ಥಾಮ್ಸನ್‌, ಡೆನಿಸ್‌ ಲಿಲೀ, ಹಾಗ್‌, ಇಂಗ್ಲೆಂಡ್‌ನ ಬಾಬ್‌ ವಿಲಿಸ್‌, ವೆಸ್ಟ್‌ ಇಂಡೀಸ್‌ನ ಜೋಲ್‌ ಗಾರ್ನರ್‌, ಆ್ಯಂಡಿ ರಾಬರ್ಟ್ಸ್‌ ಮೊದಲಾದ ಬೌಲರ್‌ಗಳನ್ನು ಅವರು ವಿಶ್ವಾಸದಿಂದ ಎದುರಿಸಿದ್ದರು.

ಅನಾರೋಗ್ಯಕ್ಕೆ ಒಳಗಾಗುವ ಕೆಲವು ವರ್ಷಗಳ ಹಿಂದಿನವರೆಗೂ ಅವರು ದೆಹಲಿ ಕ್ರಿಕೆಟ್‌ ಸಂಸ್ಥೆ ಪದಾಧಿಕಾರಿಯಾಗಿ ಕೆಲಸ ಮಾಡಿ್ದ್ದರು. ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುವ ಪ್ರಮುಖ ಪಂದ್ಯಗಳಿಗೆ ಹಾಜರಾಗುತ್ತಿದ್ದರು. ರಾಜಕೀಯ ಕ್ಷೇತ್ರಕ್ಕೆ ಇಳಿದು ಎರಡು ಬಾರಿ (1991, 1998) ಉತ್ತರ ಪ್ರದೇಶದ ಅಮ್ರೋಹ ಕ್ಷೇತ್ರದಿಂದ ಸಂಸತ್‌ ಸದಸ್ಯರಾದರು. 2017ರ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು ಕೊನೆಗಾಲದವರೆಗೆ ಸಚಿವರಾಗಿದ್ದು ಕಡಿಮೆ ಸಾಧನೆಯಲ್ಲ. ಒಳಜಗಳಗಳಿಗೆ ಹೆಸರಾಗಿರುವ ದೆಹಲಿ ಕ್ರಿಕೆಟ್‌ ಸಂಸ್ಥೆಯಲ್ಲಿ ಅವರು ಕೊನೆಯವರೆಗೂ ವಿವಾದಗಳಿಂದ ದೂರ ಉಳಿದಿದ್ದರು.

ಅಂಕಿ ಅಂಶಗಳು (ಕೃಪೆ: ಚನ್ನಗಿರಿ ಕೇಶವಮೂರ್ತಿ)

* ಗಾವಸ್ಕರ್‌ ಮತ್ತು ಚೇತನ್‌ ಚೌಹಾಣ್‌ ಜೋಡಿ 36 ಟೆಸ್ಟ್‌ಗಳಲ್ಲಿ (59 ಇನಿಂಗ್ಸ್‌) ಒಟ್ಟು 3,010 ರನ್‌ ಪೇರಿಸಿದೆ. ಹತ್ತು ಶತಕದ ಜೊತೆಯಾಟಗಳಲ್ಲಿ ಇವರಿಬ್ಬರು ಭಾಗಿಯಾಗಿದ್ದಾರೆ. ಚೌಹಾನ್‌ ಅವರು ಅಬಿದ್‌ ಅಲಿ (4 ಬಾರಿ), ಅಶೋಕ್‌ ಮಂಕಡ್‌ (2), ಫರೂಕ್‌ ಎಂಜಿನಿಯರ್‌ (1), ರೋಜರ್‌ ಬಿನ್ನಿ (1) ಜೊತೆಯೂ ಇನಿಂಗ್ಸ್‌ ಆರಂಭಿಸಿದ್ದಾರೆ.

* ಒಂದೂ ಶತಕವಿಲ್ಲದೇ 2000ಕ್ಕೂ ಅಧಿಕ ಟೆಸ್ಟ್‌ ರನ್‌ಗಳನ್ನು ಹೊಡೆದ ಭಾರತದ ಮೊದಲ ಆಟಗಾರ ಇವರು. ಇದರಲ್ಲಿ ವಿಶ್ವ ದಾಖಲೆ ಶೇನ್ ವಾರ್ನ್‌ ಹೆಸರಿನಲ್ಲಿದೆ. ಶೇನ್‌ ವಾರ್ನ್‌ ಅವರು ಟೆಸ್ಟ್‌ಗಳಲ್ಲಿ 3,154 ರನ್‌ ಗಳಿಸಿದ್ದು ಇದರಲ್ಲಿ ಒಂದೂ ಶತಕವಿಲ್ಲ.

* ಚೇತನ್‌ ಚೌಹಾಣ್‌ (ಜನನ: ಉತ್ತರಪ್ರದೇಶದ ಬರೇಲಿಯಲ್ಲಿ 1947ರ ಜುಲೈ 21) ಅವರ ಪೂರ್ಣ ಹೆಸರು ಚೇತೇಂದ್ರ ಪ್ರತಾಪ್‌ ಸಿಂಗ್‌ ಚೌಹಾಣ್‌. ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದು, 1969ರ ಸೆಪ್ಟೆಂಬರ್‌ನಲ್ಲಿ. 40 ಟೆಸ್ಟ್‌ಗಳ 67 ಇನಿಂಗ್ಸ್‌ಗಳಿಂದ 2,084 ರನ್‌ ಗಳಿಸಿದ್ದಾರೆ. 1981ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 97 ಅತ್ಯಧಿಕ. ಏಳು ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.

* ವಿವಿಧ ಮಾದರಿಯ 179 ಪ್ರಥಮ ದರ್ಜೆ ಪಂದ್ಯಗಳಿಂದ ಚೌಹಾಣ್‌ ಒಟ್ಟು 11,143 ರನ್‌ ಗಳಿಸಿದ್ದಾರೆ. ಇದರಲ್ಲಿ 59 ಅರ್ಧ ಶತಕ, 21 ಶತಕಗಳಿವೆ. ಮೊದಲ ಮಹಾರಾಷ್ಟ್ರ ಪರ ರಣಜಿ ಆಡುತ್ತಿದ್ದ ಅವರು ನಂತರ ದೆಹಲಿ ತಂಡಕ್ಕೆ ಆಡಿದರು.

* 1981ರ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಗಾವಸ್ಕರ್‌, ವೇಗಿ ಡೆನಿಸ್‌ ಲಿಲೀ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ತೀರ್ಪು ಪಡೆದರು. ಈ ವಿವಾದಾತ್ಮಕ ತೀರ್ಪಿಗೆ ತೀವ್ರ ಅಸಮಾಧಾನ ಸೂಚಿಸಿದ ಗಾವಸ್ಕರ್‌, ನಾನ್‌ಸ್ಟ್ರೈಕರ್‌ ಆಗಿದ್ದ ಚೌಹಾಣ್‌ ಅವರನ್ನೂ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲು ಮುಂದಾಗಿದ್ದರು. ಆದರೆ ಟೀಮ್‌ ಮ್ಯಾನೇಜರ್‌ ಆಗಿದ್ದ ವಿಂಗ್‌ ಕಮಾಂಡರ್‌ ಎಸ್‌.ಕೆ. ದುರಾನಿ ಅವರು ಮನವೊಲಿಸಿದ್ದರಿಂದ ಪರಿಸ್ಥಿತಿ ತಿಳಿಯಾಯಿತು. ಕ್ರೀಸ್‌ಗೆ ಮರಳಿದ ಚೌಹಾಣ್‌ 85 ರನ್‌ ಗಳಿಸಿದರು. ಪಂದ್ಯದಲ್ಲಿ ಭಾರತ ಜಯ ಗಳಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT