ಕಮ್‌ಬ್ಯಾಕ್ ಆಫ್ ಚಾಂಪಿಯನ್ಸ್‌; ಕೊಹ್ಲಿ ಪಡೆಗೆ ಎಚ್ಚರಿಕೆಯ ಗಂಟೆ

ಸೋಮವಾರ, ಮಾರ್ಚ್ 18, 2019
31 °C

ಕಮ್‌ಬ್ಯಾಕ್ ಆಫ್ ಚಾಂಪಿಯನ್ಸ್‌; ಕೊಹ್ಲಿ ಪಡೆಗೆ ಎಚ್ಚರಿಕೆಯ ಗಂಟೆ

Published:
Updated:

ಬೆಂಗಳೂರು: ‘ಮುಟ್ಟಿದ್ದೆಲ್ಲ ಚಿನ್ನ’ವೆಂಬಂತೆ  ಆಡಿದ ಬಹುತೇಕ ಟೂರ್ನಿಗಳಲ್ಲಿ ಗೆದ್ದು ಮೆರೆದಾಡುತ್ತಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ತನ್ನ ತವರಿನಲ್ಲಿಯೇ ಹಿಂದೆಂದೂ ಕಾಣದಂತಹ ಮುಖಭಂಗ ಅನುಭವಿಸಿದೆ.  ಆಸ್ಟ್ರೇಲಿಯಾ ತಂಡದ ಆಟಗಾರರು ಭಾರತ ತಂಡದ ದೌರ್ಬಲ್ಯಗಳನ್ನು ಬಹಿರಂಗಗೊಳಿಸಿದ್ದಾರೆ.

ಟ್ವೆಂಟಿ–20 ಮತ್ತು ಏಕದಿನ ಕ್ರಿಕೆಟ್‌ ಸರಣಿಗಳಲ್ಲಿ ಭಾರತ ತಂಡವನ್ನು ಸೋಲಿಸುವ ಮೂಲಕ ತಾನು ವಿಶ್ವಕಪ್ ಹಣಾಹಣಿಗೆ ಸಿದ್ಧ ಎಂದು ಎದೆತಟ್ಟಿ ಹೇಳಿಕೊಂಡಿದೆ ಕಾಂಗರೂ ನಾಡಿನ ಬಳಗ. ಬರೋಬ್ಬರಿ ಒಂದು ವರ್ಷದ ಹಿಂದೆ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ  ತಂಡದ ನಾಯಕ ಸ್ಟೀವನ್ ಸ್ಮಿತ್. ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಅವರು ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದರು.  ಈ ಹಠಾತ್ ಆಘಾತದಿಂದ ಚೇತರಿಸಿಕೊಳ್ಳಲು ಆಸ್ಟ್ರೇಲಿಯಾ ತಂಡವು ಪರದಾಡಿತ್ತು. ಕಂಡ ಕಂಡ ತಂಡಗಳ ಎದುರು ಸೋತಿತ್ತು.

ಇದನ್ನೂ ಓದಿ: ಕ್ರಿಕೆಟ್‌: ಭಾರತದ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ​

ಏಕದಿನ ಕ್ರಿಕೆಟ್‌ನ ಹಾಲಿ ಚಾಂಪಿಯನ್ ಕೂಡ ಆಗಿರುವ ತಂಡವು ನಿಗದಿಯ ಓವರ್‌ಗಳ ಆಟದಲ್ಲಿಯೂ ಲಯ ತಪ್ಪಿತ್ತು. ಭಾರತ ತಂಡವು ಹೋದ ನವೆಂಬರ್‌–ಡಿಸೆಂಬರ್‌ ನಲ್ಲಿ ಅಲ್ಲಿಗೆ ತೆರಳಿದ್ದಾಗ ಏಕದಿನ ಮತ್ತು ಟೆಸ್ಟ್‌ ಸರಣಿಗಳಲ್ಲಿ ಆಸ್ಟ್ರೇಲಿಯಾವನ್ನು ಹಣಿದಿತ್ತು. ಇತಿಹಾಸ ಬರೆದಿತ್ತು.   ಇದೀಗ ಭಾರತಕ್ಕೆ ಬಂದು ಹತ್ತು ವರ್ಷಗಳ ನಂತರ ಟ್ವೆಂಟಿ–20 ಮತ್ತು ಏಕದಿನ ಸರಣಿಗಳನ್ನು ಗೆದ್ದಿದೆ. ಮುಯ್ಯಿ ತೀರಿಸಿಕೊಂಡಿದೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಹೊಸ್ತಿಲಲ್ಲಿ ಟ್ರ್ಯಾಕ್‌ಗೆ ಮರಳಿದೆ. ಇನ್ನೇನು ಶಿಕ್ಷೆ ಮುಗಿಸಿರುವ ಸ್ಮಿತ್ ಮತ್ತು ವಾರ್ನರ್‌ ಕೂಡ ತಂಡ ಸೇರಿಕೊಳ್ಳಲಿದ್ದಾರೆ. ಇದು  ಆಸ್ಟ್ರೇಲಿಯಾ ಬಳಗದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆ ಮೂಲಕ ಉಳಿದೆಲ್ಲ ತಂಡಗಳಿಗೂ ಎಚ್ಚರಿಕೆಯ ಸಂದೇಶ ಕಳಿಸಿದೆ.

ಈ ಸರಣಿಯಲ್ಲಿ ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ ಕಂಬ್, ಆ್ಯಷ್ಟನ್ ಟರ್ನರ್, ಗ್ಲೆನ್‌ ಮ್ಯಾಕ್ಸ್‌ವೆಲ್ ಮತ್ತು ಆ್ಯರನ್ ಫಿಂಚ್ ತಮ್ಮ ಲಯಕ್ಕೆ  ಮರಳಿರುವುದು ತಂಡದ ಬ್ಯಾಟಿಂಗ್ ವಿಭಾಗಕ್ಕೆ  ಆನೆಬಲ ಬಂದಂತಾಗಿದೆ. ವೇಗಿಗಳಾದ ಪ್ಯಾಟ್ ಕಮಿನ್ಸ್‌, ಜೇ ರಿಚರ್ಡ್ಸನ್,  ನೇಥನ್ ಕೌಲ್ಟರ್‌ ನೈಲ್, ಜೇಸನ್ ಬೆಹ್ರನ್‌ಡಾರ್ಫ್‌ ಅವರು ಇಂಗ್ಲೆಂಡ್‌ ನೆಲದಲ್ಲಿ ಬಿರುಗಾಳಿ ಎಬ್ಬಿಸಲು ಸಿದ್ಧರಾಗಿದ್ದಾರೆ. ಸ್ಪಿನ್ನರ್ ಆ್ಯಡಂ ಜಂಪಾ  ವಿಶ್ವದ ಯಾವುದೇ ಪಿಚ್‌ನಲ್ಲಿಯೂ ಚೆಂಡನ್ನು ತಿರುಗಿಸಬಲ್ಲ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಭಾರತದ ಬ್ಯಾಟ್ಸ್‌ಮನ್‌ಗಳಿಗೇ ಚಳ್ಳೆಹಣ್ಣು ತಿನ್ನಿಸಿರುವ ಅವರು ಕೂಡ ಎಲ್ಲ ತಂಡದ ಬ್ಯಾಟಿಂಗ್‌ ಬಲಕ್ಕೆ ಕುತ್ತು ತರುವ ಬೌಲರ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರೊಂದಿಗೆ ಐದು ಬಾರಿಯ ವಿಶ್ವ ಚಾಂಪಿಯನ್ ತಂಡವು ಕಠಿಣ ಸವಾಲು ಒಡ್ಡಲು ಸಿದ್ಧವಾಗಿದೆ.

ಇದನ್ನೂ ಓದಿ: ‘ಧೋನಿ–ಪಂತ್ ಹೋಲಿಕೆ ಸರಿಯಲ್ಲ’

ಆದರೆ, 2015ರ ವಿಶ್ವಕಪ್  ಟೂರ್ನಿಯಲ್ಲಿ ಸೋತ ನಂತರ ಸಿದ್ಧತೆ ಆರಂಭಿಸಿರುವ ಭಾರತ ತಂಡವು ಸುತ್ತು ಬಳಸಿ ಆತಂಕದ ಅಂಚಿಗೆ ಬಂದು ನಿಂತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಬದಲಾವಣೆಗಳು ತಂಡದಲ್ಲಿ ಆಗಿವೆ. 2011ರ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಹೊಣೆಯನ್ನು  ವಿರಾಟ್ ಕೊಹ್ಲಿ ಗೆ ವಹಿಸಿಕೊಟ್ಟು ವಿಕೆಟ್‌ಕೀಪಿಂಗ್ ನಲ್ಲಿ ಮಿಂಚುತ್ತಿದ್ದಾರೆ. ವಿಕೆಟ್‌ ಹಿಂದಿನಿಂದಲೇ ಬೌಲರ್‌ಗಳಿಗೆ ಸಲಹೆಗಳನ್ನು ಕೊಡುತ್ತ ತಂಡದ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ.

2016ರಲ್ಲಿ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಗೆದ್ದ ಮೇಲೆ ಆಗ ನಾಯಕರಾಗಿದ್ದ ಧೋನಿ ಹೇಳಿದ್ದ ಮಾತು ಇಂದಿಗೂ ನೆನಪಿದೆ. ‘ನಮ್ಮ ವಿಶ್ವಕಪ್ ಟೂರ್ನಿಯ ಸಿದ್ಧತೆ ಇಲ್ಲಿಂದ ಆರಂಭವಾಗಿದೆ. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಹಾರ್ದಿಕ್ ಪಾಂಡ್ಯ (ಪಂದ್ಯಶ್ರೇಷ್ಠ ಕೂಡ ಆಗಿದ್ದರು) ಮಧ್ಯಮವೇಗದ ಆಲ್‌ರೌಂಡರ್ ಆಗಿ ಉತ್ತಮ ಭವಿಷ್ಯ ಹೊಂದಿದ್ದಾರೆ. ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಅವರು ಹೆಚ್ಚು ಅನುಭವ ಪಡೆದಂತೆ ಇಂಗ್ಲೆಂಡ್ ಹೋರಾಟಕ್ಕೆ ಪರಿಪಕ್ವಗೊಳ್ಳುವ ಭರವಸೆ ಇದೆ’ ಎಂದಿದ್ದರು.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲೂ ಫ್ರೀ ಹಿಟ್‌!​

ಅದೇ ರೀತಿಯ ಯೋಜನೆಯು ಅನುಷ್ಟಾನಗೊಂಡು ತಂಡವು ಇಲ್ಲಿಯವರೆಗೆ ರೂಪುಗೊಳ್ಳುತ್ತ ಬಂದಿದೆ. ವಿರಾಟ್ ಕೊಹ್ಲಿ ಅತ್ಯಮೋಘ ಫಾರ್ಮ್‌ನಲ್ಲಿದ್ದಾರೆ. ಎದುರಾಳಿ ಬೌಲರ್‌ಗಳಿಗೆ ವಿರಾಟ್ ವಿಕೆಟ್ ಎಂದರೆ ಪ್ರೈಜ್‌ ವಿಕೆಟ್‌ ಆಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಬಾರಿಸಿರುವ ರೋಹಿತ್ ಶರ್ಮಾ ಲಯದಲ್ಲಿಯೇ ಉಳಿದರೆ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾಗಿಬಿಡುತ್ತಾರೆ. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಆರು ತಿಂಗಳಿಗೊಮ್ಮೆ ಒಂದು ಶತಕ ಹೊಡೆದರೆ ಏನುಪ್ರಯೋಜನ? ತಂಡಕ್ಕೆ ಅಗತ್ಯವಿದ್ದಾಗ ಆಡಬೇಕಲ್ಲವೇ? ತಮ್ಮದೇ ತವರಾದ ದೆಹಲಿಯಲ್ಲಿ ಅವರು ಔಟಾದ ರೀತಿ ಅವರ ಫಾರ್ಮ್‌ ಬಗ್ಗೆ ಯೋಚಿಸುವಂತಾಗಿದೆ. ಏಕೆಂದರೆ ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಪಂದ್ಯ ನಡೆದ ಮೊಹಾಲಿಯಲ್ಲಿ ಆಕರ್ಷಕ ಶತಕ ಬಾರಿಸಿದ್ದ ಎಡಗೈ ಬ್ಯಾಟ್ಸ್‌ಮನ್  ಶಿಖರ್ ಧವನ್ ದೆಹಲಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಎಡವಿದ್ದರು. ಇಡೀ ಸರಣಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ತಮ್ಮ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳದ ಹೊರತು ದೊಡ್ಡ ಮೊತ್ತ ಗಳಿಸುವುದು ಸಾಧ್ಯವಿಲ್ಲ ಎಂಬುದನ್ನು ಮನಗಾಣುವ ಅವಶ್ಯಕತೆ ಇದೆ.

ಮಧ್ಯಮಕ್ರಮಾಂಕದಲ್ಲಿ ಅಂಬಟಿ ರಾಯುಡು ವಿಶ್ವಾಸ  ಉಳಿಸಿಕೊಳ್ಳುವಲ್ಲಿ ವಿಫರಾಗಿದ್ದಾರೆ. ವಿಜಯಶಂಕರ್ ಅವರಿಂದ ಅಪಾರ ನಿರೀಕ್ಷೆ ಇಡುವಂತಿಲ್ಲ. ಆದರೆ, ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜ,  ಹಾರ್ದಿಕ್, ಕೇದಾರ್ ಜಾಧವ್ (ಒಂದೊಮ್ಮೆ ಸ್ಥಾನ ಪಡೆದರೆ) ಅವರು ವಿಶ್ವಾಸ ಉಳಿಸಿಕೊಳ್ಳಬೇಕಿದೆ.

ಆದರೆ, ಅತ್ಯಂತ ಪ್ರಮುಖವಾದ ವಿಭಾಗವಾದ ವಿಕೆಟ್‌ ಕೀಪಿಂಗ್‌ನಲ್ಲಿ ತಂಡವು ಮಹೇಂದ್ರಸಿಂಗ್ ಧೋನಿ ಅವರನ್ನೇ ಹೆಚ್ಚು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ರಿಷಭ್ ಪಂತ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು. ಆದರೆ, ಹೋದ ಎರಡು ಏಕದಿನ ಪಂದ್ಯಗಳಲ್ಲಿ ಅವರ ವಿಕೆಟ್‌ ಕೀಪಿಂಗ್ ಪರಿಣಾಮಕಾರಿಯಾಗಿರಲಿಲ್ಲ.  ಧೋನಿಯ ಛಾಪನ್ನು ಮೀರಿ ನಿಲ್ಲುವತ್ತಲೇ ಅವರು ಹೆಚ್ಚು ಚಿತ್ತ ಹರಿಸುತ್ತಿರುವುದು ವೈಫಲ್ಯಕ್ಕೆ ಕಾರಣವಿರಬಹುದು. ತಮ್ಮದೇ ನೈಜ ಶೈಲಿಯನ್ನು ರೂಢಿಸಿಕೊಂಡು, ಚೆಂಡಿನ ಚಲನೆ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸುವ ಅಗತ್ಯ ಇದೆ.  ವಿಕೆಟ್‌ ಕೀಪಿಂಗ್ ಎಂದರೆ ‘ಥ್ಯಾಂಕ್‌ಲೆಸ್‌ ಜಾಬ್’ . ಇಲ್ಲಿ ಚೆನ್ನಾಗಿ ಆಡಿದರೆ  ಯಾರೂ ಹೊಗಳಲಿಕ್ಕಿಲ್ಲ. ಆದರೆ, ಒಂದು ಸಣ್ಣ ತಪ್ಪು ಕೂಡ ದೊಡ್ಡ ಟೀಕೆಗೆ ಗುರಿಯಾಗುವುದು ಖಚಿತ. ಆದ್ದರಿಂದ 22 ವರ್ಷದ ರಿಷಭ್ ತಮ್ಮ ಕೌಶಲಗಳ ಸುಧಾರಣೆಗೆ ಒತ್ತು ಕೊಟ್ಟರೆ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದರೆ ತಂಡಕ್ಕೆ ಆಸ್ತಿಯಾಗಬಲ್ಲರು.

ಬೌಲಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ನಲ್ಲಿ ಮಿಂಚಬಲ್ಲ ಬೌಲರ್‌ಗಳು ಇದ್ದಾರೆ. ಶಮಿ, ಭುವಿ, ಬೂಮ್ರಾ ಅವರನ್ನು ನಂಬಬಹುದು. ಆದರೆ, ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ಅವರ ಮುಂದಿದೆ. ಆತಿಥೇಯ ಇಂಗ್ಲೆಂಡ್ ತಂಡವು  ವಿಶ್ವಕಪ್ ತಂಡಗಳ ಪಟ್ಟಿಯಲ್ಲಿ  ಎಲ್ಲರಿಗಿಂತ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ವೆಸ್ಟ್ ಇಂಡೀಸ್ ಕೂಡ ಮೆಲ್ಲಗೆ ಲಯಕ್ಕೆ ಮರಳುತ್ತಿದೆ. ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ತಂಡಗಳೂ ಸಾಮಾನ್ಯವಲ್ಲ. ಆದ್ದರಿಂದ ಭಾರತ ತಂಡಕ್ಕೆ ವಿಶ್ವಕಪ್ ಗೆಲುವಿನ ಹಾದಿ ಸುಲಭವಲ್ಲ. ಎರಡು ವರ್ಷಗಳ ಹಿಂದೆ ಲಂಡನ್‌ನಲ್ಲಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಭಾರತ ತಂಡವು ಸೋತಿತ್ತು. ಆದ್ದರಿಂದ ಆ ಕಹಿಯನ್ನು ಅದೇ ಅಂಗಳದಲ್ಲಿ ಮರೆಸುವಂತಹ ಗೆಲುವನ್ನು ಸಾಧಿಸುವ ಸವಾಲು ಕೂಡ ವಿರಾಟ್ ಕೊಹ್ಲಿ ಮುಂದಿದೆ. ವಿಶ್ವಕಪ್‌ ಟೂರ್ನಿಯಂತಹ ಪೈಪೋಟಿಯಲ್ಲಿ ವಿರಾಟ್ ಅಥವಾ ಮತ್ತೊಬ್ಬ  ಆಟಗಾರ ಮಾತ್ರ ಮಿಂಚಿದರೆ ಸಾಲದು. ಅಲ್ಲಿ ತಂಡ ಸ್ಫೂರ್ತಿಯೇ ಮುಖ್ಯವಾಗುತ್ತದೆ. ಬ್ಯಾಟಿಂಬ್, ಬೌಲಿಂಗ್ ಮತ್ತು ಫೀಲ್ಡಿಂಗ್‌ ನಲ್ಲಿ  ತಂಡವು ಸಂಘಟಿತವಾಗಿ ಆಡಿದರೆ ಫೈನಲ್‌ವರೆಗೆ ತಲುಪಬಹುದು.  1983ರಲ್ಲಿ ಕಪಿಲ್‌ ದೇವ್ ಹೊಡೆದ 175 ರನ್ ಮತ್ತು ಪಡೆದ ವಿವಿಯನ್ ರಿಚರ್ಡ್ಸ್‌ ಕ್ಯಾಚ್‌ಗಳು ಭಾರತದ ವಿಶ್ವಕಪ್ ಗೆಲುವಿಗೆ ಬಲ ತುಂಬಿದ್ದವು. 2011ರಲ್ಲಿ ಯುವರಾಜ್ ಸಿಂಗ್ ಆಲ್‌ರೌಂಡ್  ಆಟ ಮತ್ತು ಧೋನಿಯ ನಾಯಕತ್ವ . ಫೈನಲ್‌ನಲ್ಲಿ ಬ್ಯಾಟಿಂಗ್ ವೈಭವಗಳು  ಕಿರೀಟ ತೊಡಿಸಿದ್ದವು. ಆದ್ದರಿಂದಲೇ ವಿರಾಟ್ ಮೇಲೆ ಕೋಟಿ ಕೋಟಿ ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆ ಇದೆ.

ಅದೀರಲಿ; ವಿಶ್ವಕಪ್ ಟೂರ್ನಿ ಸಮೀಪಿಸುತ್ತಿರುವ ಈ ಹಂತದಲ್ಲಿ ತಂಡವು ಸೋತಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಎಂದು ಕೆಲವು ಹಿರಿಯ ಕ್ರಿಕೆಟಿಗರು ಹೇಳುತ್ತಾರೆ. ಇದೊಂದು ಪಾಠ. ಹತಾಶೆಪಡುವ ಸಮಯವಲ್ಲ. ಆತ್ಮವಲೋಕನದ ಸಮಯವಂತೂ ಹೌದು. ವಿಶ್ವಕಪ್ ಟೂರ್ನಿಗೆ ಸಿದ್ಧತೆ ಇಲ್ಲಿಂದ ಆರಂಭವಾಗಬೇಕು.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !