ಭಾನುವಾರ, ಆಗಸ್ಟ್ 25, 2019
20 °C

ಕಾಮನ್‌ವೆಲ್ತ್‌ ಗೇಮ್ಸ್‌ ನಲ್ಲಿ ಮಹಿಳಾ ಟ್ವೆಂಟಿ–20

Published:
Updated:
Prajavani

ನವದೆಹಲಿ (ರಾಯಿಟರ್ಸ್): ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ಸೇರ್ಪಡೆ ಮಾಡಲಾಗುವುದು ಎಂದು ಅಯೋಜಕರು ಖಚಿತಪಡಿಸಿದ್ದಾರೆ.

ಈ ಬಾರಿ ಬೀಚ್ ವಾಲಿಬಾಲ್ ಮತ್ತು ಪ್ಯಾರಾ ಟೇಬಲ್ ಟೆನಿಸ್‌ ಕೂಡ ಸೇರ್ಪಡೆಯಾಗಲಿದೆ. ಆದ್ದರಿಂದ ಶೂಟಿಂಗ್ ಕ್ರೀಡೆಗೆ ಅವಕಾಶ ಸಿಗುವುದು ಖಚಿತವಿಲ್ಲ ಎಂದು  ಆಯೋಜಕರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜಕರ ನಡೆಯನ್ನು ಸ್ವಾಗತಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್, ‘ವಿಶ್ವಮಟ್ಟದಲ್ಲಿ ಕ್ರಿಕೆಟ್‌ ಬೆಳವಣಿಗೆ ಇದು ಸಹಕಾರಿಯಾಗಲಿದೆ. ಅದರಲ್ಲಿಯೂ ಮಹಿಳೆಯರು ಕ್ರಿಕೆಟ್‌ನತ್ತ ಆಕರ್ಷಿತರಾಗಲೂ ಕಾರಣವಾಗುತ್ತದೆ’ ಎಂದಿದ್ದಾರೆ.

1998ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಇತ್ತು. 50–50 ಓವರ್‌ ಕ್ರಿಕೆಟ್‌ ಪಂದ್ಯಗಳು ನಡೆದಿದ್ದವು. ಜ್ಯಾಕ್ ಕಾಲಿಸ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಪ್ರಶಸ್ತಿ ಗೆದ್ದಿತ್ತು.

‘ಯಾವುಧೇ ಮಹತ್ವದ ಕ್ರೀಡಾಕೂಟದಲ್ಲಿ  ಪುರುಷರಿಗಿಂತ ಮಹಿಳೆಯರ ವಿಭಾಗಗಳಿಗೆ ಹೆಚ್ಚು ಪದಕಗಳನ್ನು ಕೊಡುವಾಗ ಹೆಮ್ಮೆಯೆನಿಸುತ್ತದೆ. ಇದರಿಂದಾಗಿ ಮಹಿಳಾ ವಿಭಾಗದ ಕ್ರೀಡೆಗಳು ಬೆಳವಣಿಗೆ ಆಗುತ್ತವೆ’ ಎಂದು ಬ್ರಿಟನ್ ಕ್ರೀಡಾ ಸಚಿವ ನಿಗೆಲ್ ಆ್ಯಡಮ್ಸ್‌ ಹೇಳಿದ್ದಾರೆ.

2021ರಲ್ಲಿ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಆತಿಥ್ಯ ವಹಿಸಲಿರುವ ನ್ಯೂಜಿಲೆಂಡ್ ತಂಡದ ನಾಯಕಿ ಆ್ಯಮಿ ಸೆಟರ್ಥ್‌ವೇಟ್ ಅವರೂ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಕ್ರಿಕೆಟ್‌ ಸೇರ್ಪಡೆಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಕಾಮನ್‌ವೆಲ್ತ್‌ ಕೂಟವು 2022ರ ಜುಲೈ 27ರಿಂದ ಆಗಸ್ಟ್‌ 7ರವೆಗೆ ನಡೆಯಲಿದೆ. 4500ಕ್ಕೂ ಹೆಚ್ಚು ಕ್ರೀಡಾಪಟುಗಳು 19 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ಧಾರೆ.

Post Comments (+)