ಗುರುವಾರ , ಏಪ್ರಿಲ್ 15, 2021
28 °C

ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ; ಭಾರತಕ್ಕೆ ಗೆಲುವಿನ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಭರ್ಜರಿ ಆಲ್‌ರೌಂಡ್ ಆಟದ ಮೂಲಕ ಜಯದ ಲಯಕ್ಕೆ ಮರಳಿರುವ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಮಹಿಳೆಯರ ಎದುರಿನ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಭರವಸೆಯಿಂದ ಕಣಕ್ಕೆ ಇಳಿಯಲಿದೆ. ಏಕಾನ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಮುನ್ನಡೆ ಸಾಧಿಸಲು ಮಿಥಾಲಿ ರಾಜ್ ಬಳಗ ಪ್ರಯತ್ನಿಸಲಿದೆ. 

ಕೋವಿಡ್‌–19ರಿಂದಾಗಿ ಒಂದು ವರ್ಷ ಕಣಕ್ಕೆ ಇಳಿಯದೇ ಇದ್ದ ಭಾರತ ತಂಡ ಸರಣಿಯ ಮೊದಲ ಪಂದ್ಯದಲ್ಲಿ ನೀರಸ ಆಟವಾಡಿ ಎಂಟು ವಿಕೆಟ್‌ಗಳಿಂದ ಸೋತಿತ್ತು. ಆದರೆ ಎರಡನೇ ಪಂದ್ಯದಲ್ಲಿ ಪುಟಿದೆದ್ದು ಒಂಬತ್ತು ವಿಕೆಟ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿತ್ತು. 

ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಬಳಗ ನಿರೀಕ್ಷಿತ ಸಾಮರ್ಥ್ಯ ತೋರಿರಲಿಲ್ಲ. ಬೌಲರ್‌ಗಳು ಧಾರಾಳತನ ಮೆರೆದಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡೂ ಸುಧಾರಿಸಿಕೊಂಡಿದ್ದವು. ಎದುರಾಳಿಗಳನ್ನು 157 ರನ್‌ಗಳಿಗೆ ನಿಯಂತ್ರಿಸುವಲ್ಲಿ ಬೌಲರ್‌ಗಳು ಯಶಸ್ವಿಯಾಗಿದ್ದರು. ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ನಾಲ್ಕು ವಿಕೆಟ್‌ ಕಬಳಿಸಿದ್ದರು. ಎಡಗೈ ಸ್ಪಿನ್ನರ್, ಕರ್ನಾಟಕದ ರಾಜೇಶ್ವರಿ ಗಾಯಕವಾಡ್ (37ಕ್ಕೆ3) ಮತ್ತು ಮಧ್ಯಮ ವೇಗಿ ಮಾನಸಿ ಜೋಶಿ (23ಕ್ಕೆ2) ಕೂಡ ಮಿಂಚಿದ್ದರು. ಇವರ ಅಮೋಘ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ 41 ಓವರ್‌ಗಳಲ್ಲಿ ಪತನ ಕಂಡಿತ್ತು.

ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಲಯ ಕಂಡುಕೊಂಡಿರುವುದು ಭಾರತ ಪಾಳಯದಲ್ಲಿ ಭರವಸೆ ಮೂಡಿಸಿದೆ. 64 ಎಸೆತಗಳಲ್ಲಿ 80 ರನ್ ಸಿಡಿಸಿದ್ದ ಅವರಿಗೆ ಪೂನಂ ರಾವತ್ ಅರ್ಧಶತಕ ಗಳಿಸಿ ಉತ್ತಮ ಸಹಕಾರ ನೀಡಿದ್ದರು. ಇವರಿಬ್ಬರು ಎರಡನೇ ವಿಕೆಟ್‌ಗೆ 138 ರನ್ ಸೇರಿಸಿ ಸುಲಭ ಜಯ ತಂದುಕೊಟ್ಟಿದ್ದರು. 30 ಓವರ್‌ಗಳ ಒಳಗೇ ತಂಡಕ್ಕೆ ಗೆಲುವಿನ ನಗೆ ಬೀರಲು ಸಾಧ್ಯವಾಗಿತ್ತು.

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಒಳಗೊಂಡಿರುವ ದಕ್ಷಿಣ ಆಫ್ರಿಕಾವನ್ನು ನಿಯಂತ್ರಿಸಲು ಜೂಲನ್ ಗೋಸ್ವಾಮಿ ಉತ್ತಮ ಫಾರ್ಮ್‌ನಲ್ಲಿರಬೇಕಾಗಿರುವುದು ಅನಿವಾರ್ಯ. ಮೊದಲ ಪಂದ್ಯದಲ್ಲಿ ಆ ತಂಡದ ಆಟಗಾರ್ತಿಯರು ನಿರಾಯಾಸವಾಗಿ ರನ್ ಕಲೆ ಹಾಕಿದ್ದರು. ಎರಡನೇ ಪಂದ್ಯದಲ್ಲಿ ನಾಯಕಿ ಸುನೆ ಲೂಜ್ ಮತ್ತು ಮಧ್ಯಮ ಕ್ರಮಾಂಕದ ಲಾರಾ ಗೊಡಾಲ್ ಉತ್ತಮ ಆಟ ಆಡಿದ್ದರು. ಮೂರನೇ ವಿಕೆಟ್‌ಗೆ ಇವರಿಬ್ಬರು 60 ರನ್ ಸೇರಿಸಿದ್ದರಿಂದಾಗಿ ತಂಡ ಕಡಿಮೆ ರನ್ ಸೇರಿಸುವ ಆತಂಕದಿಂದ ಪಾರಾಗಿತ್ತು.

ಭಾರತದ ಜೆಮಿಮಾ ರಾಡ್ರಿಗಸ್‌, ಸ್ಮೃತಿ ಮಂದಾನ, ಪೂನಂ ರಾವತ್, ಹರ್ಮನ್‌ಪ್ರೀತ್ ಕೌರ್ ಮತ್ತು ನಾಯಕಿ ಮಿಥಾಲಿ ರಾಜ್ ಎದುರಾಳಿ ಬೌಲರ್‌ಗಳಿಗೆ ಸವಾಲೊಡ್ಡಬಲ್ಲರು. ಹಿಂದಿನ ಪಂದ್ಯದಲ್ಲಿ ಸ್ಮೃತಿ ತಮ್ಮ ಸ್ಫೋಟಕ ಶೈಲಿಯ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಅವರ ಬ್ಯಾಟ್‌ನಿಂದ ಮೂರು ಸಿಕ್ಸರ್ ಮತ್ತು 10 ಬೌಂಡರಿಗಳು ಸಿಡಿದಿದ್ದವು. ಅವರು ಅದೇ ಲಯದಲ್ಲಿ ಆಡಿದರೆ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಂಗಾಲು ಮಾಡಬಲ್ಲರು. 

ತಂಡಗಳು
ಭಾರತ:
ಮಿಥಾಲಿ ರಾಜ್‌ (ನಾಯಕಿ), ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ಪೂನಂ ರಾವತ್‌, ಪ್ರಿಯಾ ಪೂನಿಯಾ, ಯಸ್ಟಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್‌, ಡಿ.ಹೇಮಲತಾ, ದೀಪ್ತಿ ಶರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್‌), ಶ್ವೇತಾ ವರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕವಾಡ್, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಪೂನಂ ಯಾದವ್, ಸಿ.ಪ್ರತ್ಯೂಷಾ, ಮೋನಿಕಾ ಪಟೇಲ್‌.

ದಕ್ಷಿಣ ಆಫ್ರಿಕಾ: ಸುನೆ ಲೂಜ್ (ನಾಯಕಿ), ಅಯಬೊಂಗಾ ಖಾಕ, ಶಬ್ನಿಮ್ ಇಸ್ಮಾಯಿಲ್, ಲೌರಾ ವೊಲ್ವಾರ್ಟ್‌, ತ್ರಿಶಾ ಚೆಟ್ರಿ, ಸಿನಾಲೊ ಜಾಫ್ತಾ, ತಸ್ಮಿನ್ ಬ್ರಿಟ್ಜ್‌, ಮರಿಜನೆ ಕಾಪ್, ನೊಂಡುಮಿಸೊ ಶಂಗಾಸೆ, ಲಿಜೆಲಿ ಲೀ, ಅನೆಕೆ ಬೋಶ್‌, ಫೇ ಟನಿಕ್ಲಿಫ್‌, ನೊಂಕುಲುಲೆಕೊ ಮಾಬಾ, ಮಿಗ್ನನ್ ಡು ಪ್ರೀಜ್‌, ನಾಡಿನ್ ಡಿ ಕ್ಲರ್ಕ್‌, ಲಾರಾ ಗೊಡಾಲ್‌, ತೂಮಿ ಸೇಖುಖುನ್.

ಪಂದ್ಯ ಆರಂಭ: ಬೆಳಿಗ್ಗೆ 9.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು