ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಚ್ ಬಿಹಾರ್ ಟ್ರೋಫಿ: ಕರ್ನಾಟಕಕ್ಕೆ ಭಾರಿ ಮುನ್ನಡೆ

ಪ್ರಖರ್ ಚತುರ್ವೇದಿ ಅಜೇಯ ದ್ವಿಶತಕ
ವೆಂಕಟೇಶ ಜಿ.ಎಚ್‌.
Published 14 ಜನವರಿ 2024, 22:38 IST
Last Updated 14 ಜನವರಿ 2024, 22:38 IST
ಅಕ್ಷರ ಗಾತ್ರ

ಶಿವಮೊಗ್ಗ: ಅಜೇಯ ಶತಕ ಗಳಿಸುವ ಮೂಲಕ ಶನಿವಾರ ಉತ್ತಮ ಆರಂಭ ಒದಗಿಸಿದ್ದ ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ (ಔಟಾಗದೇ 256:451 ಎಸೆತ, 4x20, 6x1) ಹಾಗೂ ಮೂರನೇ ಕ್ರಮಾಂಕದ ಬ್ಯಾಟರ್‌ ಹರ್ಷಿಲ್ ಧರ್ಮಾನಿ (169 , 228 ಎಸೆತ, 4x19, 6x5) ಇಲ್ಲಿ ಮುಂಬೈ ವಿರುದ್ಧ ನಡೆದಿರುವ ಕೂಚ್‌ ಬಿಹಾರ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಕರ್ನಾಟಕಕ್ಕೆ ಭಾರಿ ಮುನ್ನಡೆ ದೊರಕಿಸುವಲ್ಲಿ ನೆರವಾದರು.‌

ಪಂದ್ಯದ ಮೂರನೇ ದಿನವಾದ ಭಾನುವಾರದ ಅಂತ್ಯಕ್ಕೆ ಕರ್ನಾಟಕ ತಂಡ 6 ವಿಕೆಟ್ ನಷ್ಟಕ್ಕೆ 626 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದು, 246 ರನ್‌ಗಳ ಮುನ್ನಡೆ ಪಡೆದಿದೆ.

ಪ್ರಖರ್ ಚತುರ್ವೇದಿ (110) ಹಾಗೂ ಹರ್ಷಿಲ್ ಧರ್ಮಾನಿ (102) ಶನಿವಾರ ಶತಕ ಸಿಡಿಸಿ ಸಂಭ್ರಮಿಸಿದ್ದರು. ಭಾನುವಾರವೂ ಅದೇ ಆಟ ಮುಂದುವರಿಸಿದ ಈ ಇಬ್ಬರೂ, ಒಟ್ಟು 290 ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ಬಿರುಸಿನ ಬ್ಯಾಟಿಂಗ್‌ ಮೂಲಕ ವೈಯಕ್ತಿಕ ಖಾತೆಗೆ ಮತ್ತೆ 67 ರನ್‌ ಪೇರಿಸಿದ ಹರ್ಷಿಲ್ ಅವರು ಆಕಾಶ್ ಪವಾರ್ ಎಸೆತದಲ್ಲಿ ಬೌಲ್ಡ್ ಆದರು.

‌ನಂತರ ಬಂದ ಕೆ.ಪಿ.ಕಾರ್ತಿಕೇಯ ಪ್ರಖರ್‌ಗೆ ಉತ್ತಮ ಸಾಥ್ ನೀಡಿ ತಂಡದ ಮೊತ್ತ ಹೆಚ್ಚಲು ನೆರವಾದರು. ಇವರಿಬ್ಬರ ಜೊತೆಯಾಟದಲ್ಲಿ 152 ರನ್ ಬಂದವು.

ಇನ್ನಿಂಗ್ಸ್‌ ಉದ್ದಕ್ಕೂ ತಾಳ್ಮೆಯ ಆಟಕ್ಕೆ ಮೊರೆ ಹೋದ ಪ್ರಖರ್ ಮುಂಬೈ ತಂಡದ ಎಲ್ಲ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡರು. 72 ರನ್ ಗಳಿಸಿದ್ದ ಕಾರ್ತಿಕೇಯ (107 ಎಸೆತ, 4x7, 6x2) ಮನನ್ ಭಟ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಸಮಿತ್ ದ್ರಾವಿಡ್ 22 (46 ಎಸೆತ, 4x2, 6x1) ರನ್ ಗಳಿಸಿದ್ದಾಗ ನೂತನ್ ಬೌಲಿಂಗ್‌ನಲ್ಲಿ ಮನನ್ ಭಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಧ್ರುವ ಪ್ರಭಾಕರ್ 3 ರನ್ (8 ಎಸೆತ) ಗಳಿಸಿ ಮನನ್ ಭಟ್‌ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ನಾಯಕ ಧೀರಜ್‌ ಗೌಡ 7 ರನ್ (17 ಎಸೆತ, 4x1) ಹೆಚ್ಚು ಹೊತ್ತು ನಿಲ್ಲದೆ ನೂತನ್ ಬೌಲಿಂಗ್‌ನಲ್ಲಿ ಪ್ರೇಮ್ ದೇವಕರ್‌ಗೆ ಕ್ಯಾಚಿತ್ತು ಔಟಾದರು.

ದ್ವಿಶತಕ ದಾಖಲಿಸಿ ಆಟ ಮುಂದುವರಿಸಿರುವ ಪ್ರಖರ್ ಚತುರ್ವೇದಿ ಅವರಿಗೆ ದಿನದ ಅಂತ್ಯಕ್ಕೆ ಹಾರ್ದಿಕ್ ರಾಜ್ ಔಟಾಗದೇ 5 (24 ಎಸೆತ, 4x1) ಉತ್ತಮ ಸಾಥ್‌ ನೀಡಿದರು.

ಮುಂಬೈ ತಂಡದ ಪರ ಮನನ್ ಭಟ್ 121 ರನ್ ನೀಡಿ 2 ವಿಕೆಟ್ ಹಾಗೂ ನೂತನ್ 22 ರನ್ ನೀಡಿ 2 ವಿಕೆಟ್ ಪಡೆದರು. ಪ್ರೇಮ್ ದೇವಕರ್ ಹಾಗೂ ಆಕಾಶ್ ಪವಾರ್ ತಲಾ ಒಂದು ವಿಕೆಟ್ ಪಡೆದರು. ಮೊದಲು ಬ್ಯಾಟಿಂಗ್‌ ಮಾಡಿರುವ ಮುಂಬೈ 380 ರನ್‌ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT