ಸೋಮವಾರ, ಆಗಸ್ಟ್ 2, 2021
23 °C

ಕೂಲ್‌ ಕ್ಯಾಪ್ಟನ್‌ ಕೇನ್ ಹೋರಾಟದ ಕೆಚ್ಚು

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಅದು, ಕಲಾತ್ಮಕ ಮತ್ತು ದಿಟ್ಟತನದ ಆಟಕ್ಕೆ ಹೆಸರಾಗಿರುವ ಬ್ಯಾಟ್ಸ್‌ಮನ್ ಸ್ಟೀಫನ್ ಫ್ಲೆಮಿಂಗ್ ಕಾಲ. ದಿಗ್ಗಜ ಆಟಗಾರರಾದ ಜೆಫ್‌ ಹೊವರ್ತ್‌, ಕೆನ್ ರೂಥರ್‌ಫಾರ್ಡ್‌, ಜೆಫ್‌ ಕ್ರೊವ್, ಜಾನ್ ರೈಟ್‌ ಮುಂತಾದವರ ಸಾರಥ್ಯದಲ್ಲಿ ಮುನ್ನಡೆದಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದ ಕೊರಗನ್ನು ಫ್ಲೆಮಿಂಗ್ ನೀಗಿಸುವರು ಎಂದೇ ಕ್ರಿಕೆಟ್ ಜಗತ್ತು ನಂಬಿದ್ದ ಸಂದರ್ಭ.

ಆದರೆ 10 ವರ್ಷ ತಂಡವನ್ನು ಮುನ್ನಡೆಸಿದ ಸ್ಟೀಫನ್ ಫ್ಲೆಮಿಂಗ್ ಅವಧಿಯಲ್ಲೂ ತಂಡದ ಹಣೆಬರಹ ಬದಲಾಗಲಿಲ್ಲ. 2019ರ ವಿಶ್ವಕಪ್‌ ಟೂರ್ನಿಯಲ್ಲೂ ತಂಡ ಅಂತಿಮ ಕ್ಷಣದಲ್ಲಿ ಮುಗ್ಗರಿಸಿ ಪ್ರಶಸ್ತಿ ಕೈಚೆಲ್ಲಿತು. ಆದರೆ ಆ ವಿಶ್ವಕಪ್‌ನಲ್ಲಿ ತೋರಿದ ಸಾಮರ್ಥ್ಯ, ವಿಶೇಷವಾಗಿ ರೋಚಕ ಸೂಪರ್‌ ಓವರ್‌ ಮತ್ತು ಬೌಂಡರಿ ಕೌಂಟ್‌ವರೆಗೆ ಸಾಗಿದ ಫೈನಲ್‌ನಲ್ಲಿ ಕೊನೆಯವರೆಗೂ ನರ ಬಿಗಿಹಿಡಿದುಕೊಂಡು ಕಾದಾಡಿದ ರೀತಿ ಅದ್ಭುತವಾಗಿತ್ತು. ಅದರ ಹಿಂದಿನ ಶಕ್ತಿ ಕೇನ್ ವಿಲಿಯಮ್ಸನ್.

ಹೊರಗೆ ಸೌಮ್ಯವಾಗಿ ಕಂಡರೂ ಒಳಗೆ ಹೋರಾಟದ ಕೆಚ್ಚು ತುಂಬಿರುವ ಕೇನ್‌ ವಿಲಿಯಮ್ಸನ್ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ ತಂಡವನ್ನು ಮುನ್ನಡೆಸಿದ ರೀತಿ ಅಮೋಘ. ಮಳೆ ಕಾಡಿದ್ದರಿಂದ ಫಲಿತಾಂಶ ಹೊರಹೊಮ್ಮುವ ಸಾಧ್ಯತೆಯೇ ಇಲ್ಲ ಎಂದುಕೊಂಡಿದ್ದ ಫೈನಲ್‌ ಪಂದ್ಯದಲ್ಲಿ ಅವರು ತಂಡಕ್ಕೆ ಐತಿಹಾಸಿಕ ಪ್ರಶಸ್ತಿಯನ್ನು ಕಾಣಿಕೆಯಾಗಿ ನೀಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಆರಂಭದಿಂದಲೇ ಸರಿಯಾದ ಲೆಕ್ಕಾಚಾರದೊಂದಿಗೆ ಕೇನ್ ಕಣಕ್ಕೆ ಇಳಿದಿದ್ದರು. ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದರೂ ಕೇನ್ ಬಳಗ ಪುಟಿದೆದ್ದು ಎರಡನೇ ಪಂದ್ಯದಲ್ಲಿ ಅದೇ ತಂಡಕ್ಕೆ ಇನಿಂಗ್ಸ್ ಸೋಲಿನ ಹೊಡೆತ ನೀಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಪ್ರಖರ ಹೊಡೆತ ತಿಂದ ತಂಡ ಚೇತರಿಸಿಕೊಂಡದ್ದು ಭಾರತ ಎದುರಿನ ಎರಡು ಪಂದ್ಯಗಳ ಸರಣಿಯಲ್ಲಿ. ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ತಂಡ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ವಿರುದ್ಧವೂ ಜಯದ ನಾಗಾಲೋಟ ಮುಂದುವರಿಸಿತ್ತು. ಫೈನಲ್‌ಗೂ ಮೊದಲು ಇಂಗ್ಲೆಂಡ್‌ನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ‘ಅಭ್ಯಾಸದ ಬಲ’ವೂ ಭಾರತದ ಎದುರಿನ ಫೈನಲ್‌ನಲ್ಲಿ ಕಾದಾಡಲು ಬೇಕಾದ ಕಸುವು ತುಂಬಿತ್ತು.

ಕ್ರಿಕೆಟ್ ಆಟಗಾರ ತಂದೆ ಮತ್ತು ವಾಲಿಬಾಲ್ ಆಟಗಾರ್ತಿ ತಾಯಿಯ ಛಲವನ್ನು ನೋಡುತ್ತ ಬೆಳೆದ ಕೇನ್ 17ನೇ ವಯಸ್ಸಿನಲ್ಲಿ ಕ್ರಿಕೆಟ್ ಅಂಗಣಕ್ಕೆ ಇಳಿದವರು. ಹೀಗಾಗಿ ಈ ಕ್ರೀಡೆಯ ಒಳ–ಹೊರಗು ಅವರಿಗೆ ಚೆನ್ನಾಗಿ ಗೊತ್ತು. ಯಶಸ್ವಿ ನಾಯಕತ್ವಕ್ಕೆ ಅದು ಪೂರಕವಾಗಿ ಕೆಲಸ ಮಾಡಿದೆ. 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿ ಅಪರೂಪದ ಸರಣಿ ಜಯಕ್ಕೆ ಕಾರಣವಾಗಿದ್ದ ಕೇನ್, ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ಧ ಶತಕ ಗಳಿಸಿರುವ ಗರಿಮೆಯನ್ನೂ ನ್ಯೂಜಿಲೆಂಡ್‌ ಪರವಾಗಿ ಅತಿ ಹೆಚ್ಚು ಟೆಸ್ಟ್ ಶತಕ ಗಳಿಸಿದ ಆಟಗಾರ ಎಂಬ ದಾಖಲೆಯನ್ನೂ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು