ಶನಿವಾರ, ಮೇ 15, 2021
26 °C

ಕ್ರಿಕೆಟ್: ಭ್ರಷ್ಟಾಚಾರಕ್ಕೆ ಬಿಟ್‌ಕಾಯಿನ್ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರಿಕೆಟ್‌ ಭ್ರಷ್ಟಾಚಾರದಲ್ಲಿ ಬಿಟ್‌ ಕಾಯಿನ್ ಬಳಕೆಯಾಗುತ್ತಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭ್ರಷ್ಟಾಚಾರ ತಡೆ ಘಟಕವು ಬಹಿರಂಗಪಡಿಸಿದೆ.

ಜಿಂಬಾಬ್ವೆ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಐಸಿಸಿಯು ಎಂಟು ವರ್ಷಗಳ ಅವಧಿಗೆ ನಿಷೇಧಿಸಿದೆ. ಅವರು ಜಿಂಬಾಬ್ವೆ, ಬಾಂಗ್ಲಾದೇಶ, ಐಪಿಎಲ್‌ ಮತ್ತು ಅಫ್ಗಾನಿಸ್ತಾನ ಪ್ರೀಮಿಯರ್ ಲೀಗ್‌ ನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುವಾಗ ಬುಕ್ಕಿಗಳಿಗೆ ಮಾಹಿತಿ ನೀಡುತ್ತಿದ್ದರು.

ಈ ಪ್ರಕರಣದ ತನಿಖೆ ನಡೆಸುವ ಸಂದರ್ಭದಲ್ಲಿ ಐಸಿಸಿಯ ಎಸಿಯುಗೆ ಹಲವು ಅಚ್ಚರಿಯ ಮಾಹಿತಿಗಳು ಲಭಿಸಿವೆ. ಅದರಲ್ಲಿ ಬಿಟ್‌ಕಾಯಿನ್‌ ವಿಷಯವೂ ಒಂದಾಗಿದೆ.

ಬುಕ್ಕಿಗಳು ನಗದು ವ್ಯವಹಾರಕ್ಕೆ ಒತ್ತುಕೊಡುತ್ತಿದ್ದರು. ಅಲ್ಲದೇ ಆಮಿಷಗಳ ರೂಪದಲ್ಲಿ ಕಾರು, ದುಬಾರಿ ಆಭರಣಗಳು ಮತ್ತು ದುಬಾರಿ ಫೋನ್‌ಗಳನ್ನು ನೀಡುತ್ತಿದ್ದರು. ಆದರೆ ಇದೀಗ ಅವರು ಕ್ರಿಪ್ಟೊಕರೆನ್ಸಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

2018ರಲ್ಲಿ ಹೀತ್ ಸ್ಟ್ರೀಕ್ 35 ಸಾವಿರ ಡಾಲರ್‌ ಮೌಲ್ಯದ ಎರಡು ಬಿಟ್‌ಕಾಯಿನ್‌ಗಳನ್ನು ಪಡೆದಿದ್ದರು.

‘ಇದೊಂದು ಹೊಸ ರೀತಿಯ ತಂತ್ರದ ಅರಿವು ನಮಗಾಗಿದೆ. ಆದರೆ ನಮ್ಮ ತನಿಖಾ ತಂಡವೂ ಇಂತಹ ಹೊಸ ದುರ್ಮಾರ್ಗಗಳನ್ನು ಪತ್ತೆಹಚ್ಚುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದೆ. ಹವಾಲಾ ಮಾದರಿಯಲ್ಲಿಯೇ ಬಿಟ್‌ಕಾಯಿನ್  ವ್ಯವಹಾರವನ್ನು ಪತ್ತೆ ಹಚ್ಚುವುದೂ ಸವಾಲಿನದ್ದಾಗಿದೆ‘ ಎಂದು ಐಸಿಸಿಯ ಎಸಿಯು ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.