ಸೋಮವಾರ, ಜನವರಿ 27, 2020
27 °C
ಟೆಸ್ಟ್‌ ಕ್ರಿಕೆಟ್

AUS vs NZ | ಮತ್ತೆ ಮಿಂಚಿದ ಲಯನ್: ಕ್ಲೀನ್ ಸ್ವೀ‍ಪ್ ಸಾಧಿಸಿದ ಆಸಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ: ಆಫ್‌ ಸ್ಪಿನ್ನರ್‌ ನೇಥನ್‌ ಲಯನ್‌, ಸಿಡ್ನಿ ಮೈದಾನದಲ್ಲಿ ಸೋಮವಾರವೂ ಗರ್ಜಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಉರುಳಿಸಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲೂ ಐದು ವಿಕೆಟ್‌ ಗೊಂಚಲು ಪಡೆದು ನ್ಯೂಜಿಲೆಂಡ್‌ ತಂಡದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು.

ಲಯನ್‌ (50ಕ್ಕೆ5) ಅವರ ಅಮೋಘ ಬೌಲಿಂಗ್‌ ಮತ್ತು ಡೇವಿಡ್‌ ವಾರ್ನರ್‌ (ಔಟಾಗದೆ 111; 159ಎ, 9ಬೌಂ) ಅವರ ಅಜೇಯ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್‌ ಪಂದ್ಯದಲ್ಲಿ 279ರನ್‌ಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ (3–0) ಸಾಧನೆ ಮಾಡಿತು.

ಎರಡನೇ ಇನಿಂಗ್ಸ್‌ನಲ್ಲಿ ಭಾನುವಾರ ವಿಕೆಟ್‌ ನಷ್ಟವಿಲ್ಲದೆ 40ರನ್‌ ಗಳಿಸಿದ್ದ ಆತಿಥೇಯ ತಂಡ ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲಿ ವೇಗವಾಗಿ ರನ್‌ ಗಳಿಸಿತು. ವಾರ್ನರ್‌ ಮತ್ತು ಜೋ ಬರ್ನ್ಸ್‌ (40; 79ಎ, 3ಬೌಂ, 2ಸಿ) ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದರು.

ನಂತರ ಬಂದ ಮಾರ್ನಸ್‌ ಲಾಬುಶೇನ್‌ (59; 74ಎ, 3ಬೌಂ) ಮತ್ತೊಂದು ಅರ್ಧಶತಕ ದಾಖಲಿಸಿ ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು. ವಾರ್ನರ್‌ ಜೊತೆ ಅವರು ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 110ರನ್ ಕಲೆಹಾಕಿದ್ದರಿಂದ ತಂಡದ ಮೊತ್ತ ದ್ವಿಶತಕದ ಗಡಿ ದಾಟಿತು.

52 ಓವರ್‌ಗಳಲ್ಲಿ 2 ವಿಕೆಟ್‌ಗೆ 217ರನ್‌ ಗಳಿಸಿದ್ದ ವೇಳೆ ಆತಿಥೇಯ ತಂಡದ ನಾಯಕ ಟಿಮ್‌ ಪೇನ್‌ ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿಕೊಂಡರು.

416ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಮಿಷೆಲ್‌ ಸ್ಟಾರ್ಕ್‌ ಆರಂಭದಲ್ಲೇ ಆಘಾತ ನೀಡಿದರು. ನಾಯಕ ಟಾಮ್‌ ಲಥಾಮ್‌ (1) ಮತ್ತು ಟಾಮ್‌ ಬ್ಲಂಡಲ್‌ (2) ವಿಕೆಟ್‌ ಪಡೆದ ಅವರು ಆತಿಥೇಯರ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

ನಂತರ ನೇಥನ್‌ ಲಯನ್‌ ಜಾದೂ ಮಾಡಿದರು. ಅವರು ಎದುರಾಳಿ ತಂಡದ ಮಧ್ಯಮ ಮತ್ತು ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಹೀಗಾಗಿ ನ್ಯೂಜಿಲೆಂಡ್‌ 47.5 ಓವರ್‌ಗಳಲ್ಲಿ 136ರನ್‌ಗಳಿಗೆ ಹೋರಾಟ ಮುಗಿಸಿತು.

 

ಸಂಕ್ಷಿಪ್ತ ಸ್ಕೋರ್‌
ಮೊದಲ ಇನಿಂಗ್ಸ್‌:
ಆಸ್ಟ್ರೇಲಿಯಾ:
150.1 ಓವರ್‌ಗಳಲ್ಲಿ 454 (ಡೇವಿಡ್‌ ವಾರ್ನರ್‌ ಔಟಾಗದೆ 111, ಜೋ ಬರ್ನ್ಸ್‌ 40, ಮಾರ್ನಸ್‌ ಲಾಬುಶೇನ್‌ 59; ಮ್ಯಾಟ್‌ ಹೆನ್ರಿ 54ಕ್ಕೆ1, ಟಾಡ್‌ ಆ್ಯಷ್ಲೆ 41ಕ್ಕೆ1).
ನ್ಯೂಜಿಲೆಂಡ್‌: 95.4 ಓವರ್‌ಗಳಲ್ಲಿ 251 (ಜೀತ್‌ ರಾವಲ್‌ 12, ರಾಸ್‌ ಟೇಲರ್‌ 22, ಬಿ.ಜೆ.ವಾಟ್ಲಿಂಗ್‌ 19, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 52, ಟಾಡ್‌ ಆ್ಯಷ್ಲೆ 17; ಮಿಷೆಲ್‌ ಸ್ಟಾರ್ಕ್‌ 25ಕ್ಕೆ3, ಪ್ಯಾಟ್‌ ಕಮಿನ್ಸ್‌ 29ಕ್ಕೆ1, ನೇಥನ್‌ ಲಯನ್‌ 50ಕ್ಕೆ5).

ಎರಡನೇ ಇನಿಂಗ್ಸ್‌
ಆಸ್ಟ್ರೇಲಿಯಾ: 52 ಓವರ್‌ಗಳಲ್ಲಿ 2 ವಿಕೆಟ್‌ಗೆ 217
ನ್ಯೂಜಿಲೆಂಡ್‌: 47.5 ಓವರ್‌ಗಳಲ್ಲಿ 136

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 279ರನ್‌ ಗೆಲುವು ಹಾಗೂ 3–0ರಿಂದ ಸರಣಿ. ಪಂದ್ಯ ಮತ್ತು ಸರಣಿ ಶ್ರೇಷ್ಠ: ಮಾರ್ನಸ್‌ ಲಾಬುಶೇನ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು