ಶನಿವಾರ, ಡಿಸೆಂಬರ್ 14, 2019
25 °C
‘ಬೆಳಗಾವಿ ಪ್ಯಾಂಥರ್ಸ್’ ತಂಡದ ತರಬೇತುದಾರನ ಮನೆಯಲ್ಲಿ ದಾಖಲೆ ವಶ

ಮ್ಯಾಚ್ ಫಿಕ್ಸಿಂಗ್: ಸುಧೀರ್ ಶಿಂಧೆ ಮನೆ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಕ್ರಿಕೆಟ್‌ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಕೋಚ್ ಸುಧೀಂದ್ರ ಶಿಂಧೆ ಅವರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ಸೋಮವಾರ ದಾಳಿ ಮಾಡಿದ್ದಾರೆ.

ದೊಮ್ಮಲೂರು ಮುಖ್ಯ ರಸ್ತೆಯಲ್ಲಿರುವ ಶಿಂಧೆ ಅವರ ಮನೆಗೆ ಬೆಳಿಗ್ಗೆ ಹೋಗಿದ್ದ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ಸಂಜೆಯವರೆಗೂ ಪರಿಶೀಲನೆ ನಡೆಸಿತು. ಮನೆಯಲ್ಲಿದ್ದ ಕೆಲವು ದಾಖಲೆ ಹಾಗೂ ಪೆನ್‌ಡ್ರೈವ್‌ಗಳನ್ನು ಸುಪರ್ದಿಗೆ ಪಡೆಯಿತು.

‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಆಡಳಿತ ಮಂಡಳಿ ಸದಸ್ಯರೂ ಆಗಿರುವ ಶಿಂಧೆ ಅವರಿಗೆ ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಮೊದಲೇ ಮಾಹಿತಿ ಗೊತ್ತಿತ್ತು. ಪ್ರಕರಣದ ಬಂಧಿತ ಆರೋಪಿಯೊಬ್ಬ ಆ ಬಗ್ಗೆ ಹೇಳಿಕೆಯಲ್ಲಿ ತಿಳಿಸಿದ್ದ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಪ್ರಕರಣದಲ್ಲಿ ಸುಧೀಂದ್ರ ಶಿಂಧೆ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿಸಲಾಗಿತ್ತು. ವಿಚಾರಣೆಗೆ ಬರುವಂತೆಯೂ ಅವರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ, ವಿಚಾರಣೆಗೆ ಬಂದಿರಲಿಲ್ಲ. ಹೀಗಾಗಿ, ನ್ಯಾಯಾಲಯದ ಅನುಮತಿ ಪಡೆದು ಅವರ ಮನೆಯ ಮೇಲೆ ದಾಳಿ ಮಾಡಲಾಯಿತು’ ಎಂದು ಮೂಲಗಳು ಹೇಳಿವೆ.

‘ಮ್ಯಾಚ್ ಫಿಕ್ಸಿಂಗ್ ಸಂಬಂಧ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಮಾಲೀಕ ಅಲಿ ಅಶ್ಫಕ್ ತಾರ್ ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಅವರ ವಿಚಾರಣೆಯಲ್ಲೂ ಸುಧೀಂದ್ರ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿತ್ತು’ ಎಂದು ಮೂಲಗಳು ತಿಳಿಸಿವೆ.

ಬುಕ್ಕಿ ಆಗಿರುವ ಶಂಕೆ ? ‘ಸುಧೀರ್ ಅವರು ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದ ಕೋಚ್ ಸಹ ಆಗಿದ್ದಾರೆ. ಕೆಪಿಎಲ್ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಅವರು ಬುಕ್ಕಿ ಆಗಿ ಕೆಲಸ ಮಾಡಿದ್ದರು ಎಂಬ ಅನುಮಾನವಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು