ಗುರುವಾರ , ಜೂನ್ 24, 2021
22 °C
ಅಂತರರಾಷ್ಟ್ರೀಯ ಕ್ರಿಕೆಟ್

ಕಳೆದ ದಶಕದಲ್ಲಿ ಅತಿ ಹೆಚ್ಚು ಗೆಲುವು ಕಂಡ ನಾಯಕ ಧೋನಿ: ಕೊಹ್ಲಿಗೆ ಎರಡನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಕಳೆದ ಒಂದು ದಶಕದ (2010–2019) ಅವಧಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವುಗಳನ್ನು ಕಂಡ ನಾಯಕ ಎನಿಸಿದ್ದಾರೆ. ಐಸಿಸಿಯ ಮೂರು ಪ್ರಮುಖ ಪ್ರಶಸ್ತಿಗಳಾದ ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎನಿಸಿರುವ ಧೋನಿ ನಾಯಕತ್ವದಲ್ಲಿ ಭಾರತ ತಂಡ ಕಳೆದ 10 ವರ್ಷಗಳಲ್ಲಿ ಹಲವು ಸ್ಮರಣೀಯ ಗೆಲುವುಗಳನ್ನು ಸಾಧಿಸಿದೆ.

ಕಳೆದ ದಶಕದ ಅವಧಿಯಲ್ಲಿ ಧೋನಿ ಒಟ್ಟು 233 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅದರಲ್ಲಿ 123 ಗೆಲುವು ಮತ್ತು 88 ಸೋಲು ಕಂಡಿದ್ದಾರೆ. ಸದ್ಯ ಭಾರತ ತಂಡದ ನಾಯಕರಾಗಿರುವ ವಿರಾಟ್‌ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, 166 ಪಂದ್ಯಗಳಿಂದ 111 ಗೆಲುವು ಮತ್ತು 41 ಸೋಲು ಕಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌ ಇದ್ದು, ಅವರ ನಾಯಕತ್ವದಲ್ಲಿ ಆಂಗ್ಲರು 154 ಪಂದ್ಯಗಳನ್ನು ಆಡಿ 91 ಗೆಲುವು ಸಾಧಿಸಿದ್ದಾರೆ. 53 ಪಂದ್ಯಗಳಲ್ಲಿ ಸೋಲು ಎದುರಾಗಿದೆ.

ನಾಯಕನಾಗಿ ಒಟ್ಟಾರೆ 332 ಪಂದ್ಯಗಳನ್ನು ಆಡಿರುವ ಧೋನಿ, ಅತಿ ಹೆಚ್ಚು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ ದಾಖಲೆ ಹೊಂದಿದ್ದಾರೆ. ಅವುಗಳಲ್ಲಿ 178 ಗೆಲುವು ಮತ್ತು 120 ಸೋಲು ಅನುಭವಿಸಿರುವ ಅವರ ಗೆಲುವಿನ ಸರಾಸರಿ 53.61 ಆಗಿದೆ.

ಅತಿ ಹೆಚ್ಚು ಪಂದ್ಯಗಳಿಗೆ ತಂಡ ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಎರಡನೇ ಸ್ಥಾನದಲ್ಲಿದ್ದಾರೆ. 324 ಪಂದ್ಯಗಳಲ್ಲಿ ಆಸಿಸ್‌ ಪಡೆಯನ್ನು ಮುನ್ನಡೆಸಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಸ್ಟೀಫನ್‌ ಪ್ಲೆಮಿಂಗ್‌ ಇದ್ದು, 303 ಪಂದ್ಯಗಳಿಗೆ ತಂಡ ಮುನ್ನಡೆಸಿದ್ದಾರೆ. ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌ (286), ಆಸ್ಟ್ರೇಲಿಯಾದ ಅಲನ್‌ ಬಾರ್ಡರ್‌ (271) ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು