ಸೋಮವಾರ, ಸೆಪ್ಟೆಂಬರ್ 20, 2021
24 °C

ಭಾರತ–ಪಾಕಿಸ್ತಾನ ನಡುವಣ ಕ್ರಿಕೆಟ್‌ ಸದ್ಯಕ್ಕೆ ಸಾಧ್ಯವಿಲ್ಲ: ರಮೀಜ್ ರಾಜಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಆಯೋಜಿಸುವುದು ಸದ್ಯಕ್ಕೆ ಸಾಧ್ಯವಿಲ್ಲ. ಈ ಕುರಿತು ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ನೂತನ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ. ಈ ಹಂತದಲ್ಲಿ ದೇಶಿ ಕ್ರಿಕೆಟ್‌ನತ್ತ ಮಾತ್ರ ಗಮನಹರಿಸುವುದಾಗಿ ಅವರು ತಿಳಿಸಿದ್ದಾರೆ.

ಪಿಸಿಬಿ ಅಧ್ಯಕ್ಷ ಹುದ್ದೆಗೆ ಸರ್ವಾನುಮತದಿಂದ ಆಯ್ಕೆಯಾದ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಪಿಸಿಬಿ ಅಧ್ಯಕ್ಷ ಹುದ್ದೆ ನಿಭಾಯಿಸುವುದು ಸವಾಲಿನ ಕೆಲಸಗಳಲ್ಲಿ ಒಂದಾಗಿದೆ ಎಂದು 59 ವರ್ಷದ ರಮೀಜ್‌ ಹೇಳಿದ್ದಾರೆ.

‘ಭಾರತ– ಪಾಕಿಸ್ತಾನ ತಂಡಗಳ ನಡುವಣ ಕ್ರಿಕೆಟ್‌ ಪುನರಾರಂಭ ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ ರಾಜಕೀಯದ ನಡುವೆ ಕ್ರಿಕೆಟ್‌ ನಲುಗಿದೆ‘ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಅವರು ತಿಳಿಸಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ನಾಯಕ ರಮೀಜ್, ದೇಶದ ಪರ ಒಟ್ಟು 255 ಅಂತರರಾಷ್ಟ್ರೀಯ ಪಂದ್ಯಗಳನ್ನು (ಟೆಸ್ಟ್ ಹಾಗೂ ಏಕದಿನ) ಆಡಿದ್ದು 8,674 ರನ್‌ ಕಲೆಹಾಕಿದ್ದರು. 1984–1997ರ ಅವಧಿಯಲ್ಲಿ ತಂಡದಲ್ಲಿದ್ದರು.

ಪಾಕ್ ಕೋಚಿಂಗ್‌ ತಂಡಕ್ಕೆ ಹೇಡನ್‌, ಫಿಲಾಂಡರ್‌: ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್‌ ಮ್ಯಾಥ್ಯು ಹೇಡನ್‌ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ವೆರ್ನಾನ್‌ ಫಿಲಾಂಡರ್‌ ಅವರು ಟಿ20 ವಿಶ್ವಕಪ್‌ ಟೂರ್ನಿಗಾಗಿ ಪಾಕಿಸ್ತಾನ ತಂಡದ ಕೋಚಿಂಗ್‌ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ. ಅವರ ನಿರ್ದಿಷ್ಠ ಹುದ್ದೆಯನ್ನು ಬಹಿರಂಗಪಡಿಸಿಲ್ಲ.

ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರು ಈ ಕುರಿತು ಪ್ರಕಟಣೆ ನೀಡಿದ್ದಾರೆ. ಮುಖ್ಯ ಕೋಚ್‌ಅನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಂಡದ ಮುಖ್ಯ ಕೋಚ್‌ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್‌ ಕೋಚ್‌ ವಕಾರ್‌ ಯೂನಿಸ್‌ ಅವರು ಇತ್ತೀಚೆಗೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು