ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ vs ಭಾರತ ಟೆಸ್ಟ್ ಕ್ರಿಕೆಟ್: ಹರಿಣಗಳ ನಾಡಲ್ಲಿ ಗೆಲುವಿನ ಗುರಿ

Published 25 ಡಿಸೆಂಬರ್ 2023, 20:05 IST
Last Updated 25 ಡಿಸೆಂಬರ್ 2023, 20:05 IST
ಅಕ್ಷರ ಗಾತ್ರ

ಸೆಂಚುರಿಯನ್: ಸರಿಯಾಗಿ 36 ದಿನಗಳ ಹಿಂದೆ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಅನುಭವಿಸಿದ ಸೋಲಿನ ಆಘಾತದಿಂದ ರೋಹಿತ್‌ ಶರ್ಮಾ ಹೊರಬಂದಿರಬಹುದು. ಆದರೆ ಈಗ ಅವರ ಗುರಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಸರಣಿ ಜಯಿಸುವತ್ತ ನೆಟ್ಟಿದೆ.

ಎರಡು ಟೆಸ್ಟ್‌ಗಳ ಸರಣಿಯ ಮೊದಲನೆಯ ಪಂದ್ಯ ‘ಬಾಕ್ಸಿಂಗ್‌ ಡೇ ದಿನ’ವಾದ ಮಂಗಳವಾರ (ಡಿ. 26) ಆರಂಭವಾಗಲಿದೆ. ಇದು 1992ರ ನಂತರ ಭಾರತಕ್ಕೆ, ಸ್ಪ್ರಿಂಗ್‌ಬಾಕ್ ಹರಿಣ ಗಳ ನಾಡಿನಲ್ಲಿ ಒಂಬತ್ತನೇ ಸರಣಿ. ಭಾರತ ಈ ಹಿಂದೆ ಇಲ್ಲಿ ಯಾವುದೇ ಸರಣಿಯನ್ನು ಗೆದ್ದಿಲ್ಲ. ಭಾರತ, ದಕ್ಷಿಣ ಆಫ್ರಿಕಾ ಹೊರತುಪಡಿಸಿ ಇತರ ಎಲ್ಲ ಟೆಸ್ಟ್‌ ಆಡುವ ತಂಡಗಳನ್ನು ಅವರದೇ ನೆಲದಲ್ಲಿ ಸೋಲಿಸಿ ಸರಣಿ ಜಯಿಸಿದೆ.

ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ಆರಂಭವಾಗುವ ಟೆಸ್ಟ್‌ನ ಮೊದಲ ಎರಡು ದಿನ ಭಾರಿ ಮಳೆಯ ಮುನ್ಸೂಚನೆಯಿದೆ. ಇಲ್ಲಿನ ಪಿಚ್‌ ವೇಗದ ಬೌಲರ್‌ಗಳಿಗೆ ನೆರವಾಗುವುದು ಸಾಮಾನ್ಯ. ಬೌನ್ಸ್‌ ಕೂಡ ಅಸಮಾನ. ವರ್ಷದ ಈ ಅವಧಿಯಲ್ಲಿ ತಂಪಾದ ಗಾಳಿ ಇಲ್ಲಿ ಸಾಮಾನ್ಯ.

ಇಲ್ಲಿ ಸರಣಿ ಗೆದ್ದಲ್ಲಿ ರೋಹಿತ್‌ ಆ ಸಾಧನೆ ಮಾಡಿದ ಮೊದಲಿಗರೆನಿಸುತ್ತಾರೆ. ಮೊಹಮ್ಮದ್ ಅಜರುದ್ದೀನ್ (1992), ಸಚಿನ್ ತೆಂಡೂಲ್ಕರ್ (1996) ಮತ್ತು ಸೌರವ್ ಗಂಗೂಲಿ ನಾಯಕರಾಗಿ ಪ್ರವಾಸ ಕೈಗೊಂಡಾಗ ಟೆಸ್ಟ್‌ ಗೆಲ್ಲಲು ವಿಫಲರಾಗಿದ್ದರು. ರಾಹುಲ್ ದ್ರಾವಿಡ್‌ (2006–07), ಧೋನಿ (2010–11 ಮತ್ತು 2013–14), ವಿರಾಟ್‌ ಕೊಹ್ಲಿ (2018–19 ಮತ್ತು 2021–22) ನೇತೃತ್ವದ ತಂಡ ಇಲ್ಲಿ ಟೆಸ್ಟ್ ಪಂದ್ಯ ಜಯಿಸಿತು. ಆದರೆ ಯಾರಿಗೂ ಸರಣಿ ಕೈಗೆಟಕಿಲ್ಲ. ಹೀಗಾಗಿ ರೋಹಿತ್ ಪಡೆಯ ಮುಂದೆ ಸವಾಲಿನ ಹಾದಿಯಿದೆ.

‌ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಉತ್ತಮ ವೇಗದ ಪಡೆಯನ್ನು ಹೊಂದಿದ್ದು, ಭಾರತದ ಯುವ ಬ್ಯಾಟರ್‌ಗಳಿಗೆ ಸತ್ವಪರೀಕ್ಷೆ ಎದುರಾಗಲಿದೆ. ಯಶಸ್ವಿ ಜೈಸ್ವಾಲ್ ಅವರಿಗೆ ಮೊದಲ ದೊಡ್ಡ ಪರೀಕ್ಷೆ ಎದುರಾಗಿದ್ದು, ಕಗಿಸೊ ರಬಾಡ, ಲುಂಗಿ ಗಿಡಿ, ಮಾರ್ಕೊ ಯಾನ್ಸೆನ್ ಮತ್ತು ಜೆರಾಲ್ಡ್‌ ಕೋಝಿ ಅವರನ್ನು ಒಳಗೊಂಡ ಗುಣಮಟ್ಟದ ದಾಳಿಯನ್ನು ಸವಾಲಿನ ಪಿಚ್‌ನಲ್ಲಿ ಹೇಗೆ ಎದುರಿಸುವರೆಂಬ ಕುತೂಹಲ ಇದೆ. ಉಪಖಂಡದ ಪಿಚ್‌ನಲ್ಲಿ ಯಶಸ್ವಿಯಾಗಿರುವ ಶುಭಮನ್ ಗಿಲ್ ಮತ್ತು ಶ್ರೇಯಸ್‌ ಅಯ್ಯರ್ ಅವರ ನಿರ್ವಹಣೆಯ ಮೇಲೂ ಕಣ್ಣಿದೆ. ಶಾರ್ಟ್‌ಪಿಚ್‌ ಎಸೆತಗಳ ಎದುರು ಅಯ್ಯರ್‌ ದೌರ್ಬಲ್ಯ ಗುಟ್ಟೇನಲ್ಲ.

ಆಟಗಾರರು ಶೈಲಿ ಬದಲಾಯಿಸಬೇಕೆಂಬುದು ಕೋಚ್‌ ರಾಹುಲ್ ದ್ರಾವಿಡ್ ನಿಲುವಲ್ಲ. ಆದರೆ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದನ್ನು ಅವರು ಬಯಸುತ್ತಾರೆ. ‘ಆಟಗಾರರು ತಮಗೆ ಅನುಕೂಲವೆನಿಸುವ ಶೈಲಿಯಲ್ಲಿ ಆಡುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಅಂತಿಮವಾಗಿ ಅವರು ಯಾವ ರೀತಿಯ ಫಲಿತಾಂಶ ನೀಡುತ್ತಾರೆಂಬುದು ಮುಖ್ಯ. ಅವರಿಗೂ ಅದರ ಅರಿವಿದೆ’ ಎಂದಿದ್ದಾರೆ ದ್ರಾವಿಡ್.

ತಂಡದ ಅನುಭವಿ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರ ಆಟ, ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯನ್ನು ಇತರ ಬೌಲರ್‌ಗಳು ಎಷ್ಟರ ಮಟ್ಟಿಗೆ ಸರಿದೂಗಿಸುವರು ಎಂಬುದರ ಮೇಲೆಯೂ ಭಾರತದ ಯಶಸ್ಸು ಅಡಗಿದೆ. ಕೆ.ಎಲ್‌.ರಾಹುಲ್ ಅವರು ಬ್ಯಾಟಿಂಗ್‌ ಜೊತೆ ಇಲ್ಲಿ ವಿಕೆಟ್‌ ಕೀಪಿಂಗ್‌ ಹೊಣೆಯನ್ನು ನಿಭಾಯಿಸಲಿದ್ದಾರೆ. ಎಡಗಾಲಿನ ಹಿಮ್ಮಡಿ ಗಾಯದಿಂದಾಗಿ ಶಮಿ ತಂಡದಲ್ಲಿಲ್ಲ.

ಮುಕೇಶ್‌ ನೆಟ್ಸ್‌ನಲ್ಲಿ ಉತ್ತಮ ಬೌಲರ್‌ ರೀತಿ ಕಂಡರೂ, ಹೆಚ್ಚು ಬೌನ್ಸ್‌ ನೀಡುವ ಪಿಚ್‌ ಪ್ರಸಿದ್ಧ ಕೃಷ್ಣ ಶೈಲಿಗೆ ಹೊಂದಬಹುದು ಎನ್ನುವ ಚರ್ಚೆಯೂ ಇದೆ.

ಬವುಮಾ ಜೊತೆ ಕೊನೆಯ ಸರಣಿ ಆಡುತ್ತಿರುವ ಡೀನ್ ಎಲ್ಗರ್‌, ಮಾರ್ಕರಂ, ಭರವಸೆ ಮೂಡಿಸಿರುವ ಟೋನಿ ಡಿ ಜೋರ್ಝಿ ಮತ್ತು ಬೇರೂರಿ ಆಡುವ ಕೀಗನ್ ಪೀಟರ್ಸನ್ ಅವರಿರುವ ಆತಿಥೇಯರ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸುವ ಸವಾಲು ಭಾರತದ ಬೌಲರ್‌ಗಳಿಗಿದೆ. ಪಿಚ್‌ನ ಸ್ವಭಾವ ನೋಡಿದರೆ, ಅನುಭವಿ ರವಿಚಂದ್ರನ್ ಅಶ್ವಿನ್ ಅವರು ಸ್ಥಾನ ಕಳೆದುಕೊಳ್ಳಬಹುದು.

ತಂಡಗಳು

ಭಾರತ: ರೋಹಿತ್‌ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್ (ಕೀಪರ್) ಶ್ರೇಯಸ್‌ ಅಯ್ಯರ್‌, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್‌, ಜಸ್‌ಪ್ರೀತ್‌  ಬೂಮ್ರಾ, ಮೊಹಮ್ಮದ್ ಸಿರಾಜ್‌, ಮುಕೇಶ್ ಕುಮಾರ್, ಪ್ರಸಿದ್ಧಕೃಷ್ಣ, ಕೆ.ಎಸ್‌.ಭರತ್‌ (ವಿಕೆಟ್‌ ಕೀಪರ್‌).

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಏಡನ್ ಮಾರ್ಕರಂ, ಟೋನಿ ಡಿ ಜೋರ್ಝಿ, ಡೀನ್ ಎಲ್ಗಾರ್, ಕೀಗನ್ ಪೀಟರ್ಸನ್, ಕೈಲ್‌ ವೆರಿಯನ್ (ವಿಕೆಟ್‌ ಕೀಪರ್), ಟ್ರಿಸ್ಟನ್ ಸ್ಟಬ್ಸ್‌ (ವಿಕೆಟ್‌ ಕೀಪರ್), ನ್ಯಾಂಡ್ರೆ ಬರ್ಗರ್‌, ಮಾರ್ಕೊ ಯಾನ್ಸೆನ್‌, ವಿಯಾನ್ ಮುಲ್ಡರ್‌, ಜೆರಾಲ್ಡ್‌ ಕೋಝಿ, ಕೇಶವ ಮಹಾರಾಜ್, ಕಗಿಸೊ ರಬಾಡ, ಲುಂಗಿ ಗಿಡಿ, ಡೇವಿಡ್‌ ಬೆಡಿಂಗಮ್.

ಅಂಪೈರ್ಸ್‌: ಪಾಲ್ ರೀಫೆಲ್ (ಆಸ್ಟ್ರೇಲಿಯಾ), ಲಾಂಗ್ಟನ್ ರುಸೆರೆ (ಜಿಂಬಾಬ್ವೆ). ಟಿವಿ ಅಂಪೈರ್‌: ಅಹ್ಸಾನ್ ರಝಾ (ಪಾಕಿಸ್ತಾನ). ಮ್ಯಾಚ್‌ ರೆಫ್ರಿ: ಕ್ರಿಸ್‌ ಬ್ರಾಡ್‌ (ಇಂಗ್ಲೆಂಡ್‌)

ಪಂದ್ಯ ಆರಂಭ: ಮಧ್ಯಾಹ್ನ 1.30.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT