ಶನಿವಾರ, ಆಗಸ್ಟ್ 24, 2019
27 °C
ಟಿ–20 ಕ್ರಿಕೆಟ್ ಸರಣಿ

ಸೈನಿ ಶೈನ್, ಭಾರತ ವಿನ್: ವಿಂಡೀಸ್ ಎದುರು ಶುಭಾರಂಭ ಮಾಡಿದ ಕೊಹ್ಲಿ ಪಡೆ

Published:
Updated:

ಲಾಡರ್‌ಹಿಲ್, ಫ್ಲಾರಿಡಾ: ‘ಮುಂದಿನ ವರ್ಷದ ವಿಶ್ವಕಪ್ ಟೂರ್ನಿಗೆ ನಮ್ಮ ಸಿದ್ಧತೆ ಇಲ್ಲಿಂದಲೇ ಆರಂಭ. ಅದನ್ನು ಗೆಲುವಿನೊಂದಿಗೆ ಪ್ರಾರಂಭಿಸುತ್ತೇವೆ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದ ಮಾತು ಶನಿವಾರ ನಿಜವಾಯಿತು.

ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯ ದಲ್ಲಿ ಭಾರತ ತಂಡವು 4 ವಿಕೆಟ್‌ಗಳಿಂದ ಗೆದ್ದಿತು. ಇದರ ಶ್ರೇಯ ಮಧ್ಯಮವೇಗಿ ನವದೀಪ್ ಸೈನಿಗೆ ಸಲ್ಲಬೇಕು. ಮೂರು ವಿಕೆಟ್ ಗಳಿಸಿ ಮಿಂಚಿದ  26 ವರ್ಷದ ಸೈನಿ ಪಂದ್ಯಶ್ರೇಷ್ಠ ಗೌರವ ಪಡೆದು ಪದಾರ್ಪಣೆಯನ್ನು ಅವಿಸ್ಮರಣೀಯಗೊಳಿಸಿಕೊಂಡರು.

ಸೆಂಟ್ರಲ್‌ ಬ್ರೊವಾರ್ಡ್ ರೀಜನಲ್ ಪಾರ್ಕ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಲೆಕ್ಕಾಚಾರ ತಪ್ಪಾಗದಂತೆ ಬೌಲರ್‌ಗಳು ನೋಡಿಕೊಂಡರು.

ವೆಸ್ಟ್ ಇಂಡೀಸ್ ತಂಡವು  20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 95 ರನ್‌ ಗಳಿಸಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ (49; 49ಎಸೆತ, 2ಬೌಂಡರಿ, 4ಸಿಕ್ಸರ್) ಅವರು ಬೀಸಾಟವಾಡದೇ ಹೋಗಿದ್ದರೆ ವಿಂಡೀಸ್ ಬಳಗವು ಇನ್ನೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಪರಿಸ್ಥಿತಿ ಇತ್ತು. ಗುರಿ ಬೆನ್ನಟ್ಟಿದ ಭಾರತ ತಂಡವು ಸುಲಭ ಜಯ ಸಾಧಿಸಲಿಲ್ಲ. 17.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 98 ರನ್‌ ಗಳಿಸಿ ಗೆದ್ದಿತು.


ವಿಂಡೀಸ್‌ ತಂಡ ಆಲೌಟ್‌ ಆದ ಬಳಿಕ ಸೈನಿ, ಭುವನೇಶ್ವರ್‌ ಮತ್ತು ಪಂತ್‌ ಖುಷಿಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟರು

ಚೆಂಡು ನಿಧಾನವಾಗಿ ಪುಟಿದೇಳುತ್ತಿದ್ದ ಪಿಚ್‌ನಲ್ಲಿ ಮೊದಲ ಓವರ್ ಬೌಲಿಂಗ್ ಮಾಡಲು ಸ್ಪಿನ್ನರ್ ವಾಷಿಂಗ್ಟನ್‌ ಸುಂದರ್ ಅವರಿಗೆ ಅವಕಾಶ ಸಿಕ್ಕಿತು.  ಅವರು ತಮ್ಮ ಎರಡನೇ ಎಸೆತದಲ್ಲಿಯೇ ಜಾನ್ ಕ್ಯಾಂಪ್‌ಬೆಲ್ ವಿಕೆಟ್ ಗಳಿಸಿದರು. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಎರಡನೇ ಓವರ್‌ನಲ್ಲಿ ಎವಿನ್ ಲೂಯಿಸ್ ವಿಕೆಟ್ ಪಡೆದರು. ಈ ಸಂದರ್ಭದಲ್ಲಿ ಜೊತೆಗೂಡಿದ  ನಿಕೊಲಸ್ ಪೂರನ್ ಮತ್ತು ಪೊಲಾರ್ಡ್ ಅವರು ತುಸು ಚೇತರಿಕೆ ನೀಡಿದರು. 

ಐದನೇ ಓವರ್‌ ಬೌಲಿಂಗ್ ಮಾಡಲು ಕಣಕ್ಕಿಳಿದ ಸೈನಿ ಈ ಜೊತೆಯಾಟಕ್ಕೆ ತಡೆಯೊಡ್ಡಿದರು. ನಾಲ್ಕನೇ ಎಸೆತದಲ್ಲಿ ಪೂರನ್ ಮತ್ತು ನಂತರದ ಎಸೆತದಲ್ಲಿ ಹೆಟ್ಮೆಯರ್ ಅವರಿಗೆ ಪೆವಿಲಿಯನ್ ದಾರಿ ತೋರಿದರು. ಇದರ ನಂತರ ಒಂದು ಬದಿಯಲ್ಲಿ ವಿಕೆಟ್‌ಗಳು ತಪತಪನೆ ಉದುರಿದರೆ, ಕೀರನ್ ಪೊಲಾರ್ಡ್ ಮಾತ್ರ  ಏಕಾಂಗಿ ಹೋರಾಟ ನಡೆಸಿದರು.

ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್, ಸ್ಪಿನ್ನರ್ ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು. ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡಿದ ಸೈನಿ ಎಸೆತದಲ್ಲಿ ಪೊಲಾರ್ಡ್ ಔಟಾದರು. ಅದರಿಂದಾಗಿ ತಂಡದ ಮೊತ್ತವು ನೂರರ ಗಡಿ ದಾಟಲೂ ಸಾಧ್ಯವಾಗಲಿಲ್ಲ.

ಆದರೆ ಈ ಸಣ್ಣ ಮೊತ್ತದ ಗುರಿ ತಲುಪಲು ಭಾರತ ತಂಡವು ತಿಣು ಕಾಡಿತು. ವಿಂಡೀಸ್ ಬೌಲರ್‌ಗಳಾದ ಶೆಲ್ಡನ್ ಕಾಟ್ರೆಲ್, ಸುನಿಲ್ ನಾರಾಯಣ್ ಮತ್ತು ಕೀಮೊ ಪಾಲ್ ತಲಾ ಎರಡು ವಿಕೆಟ್‌ ಗಳಿಸಿದರು. ಬ್ಯಾಟ್ಸ್‌ಮನ್‌ಗಳು ಹೆಚ್ಚು ಕ್ರೀಸ್‌ನಲ್ಲಿ ನಿಲ್ಲದಂತೆ ನೋಡಿ ಕೊಂಡರು. ರೋಹಿತ್ ಶರ್ಮಾ ಗಳಿಸಿದ 24 ರನ್‌ಗಳೇ ವೈಯಕ್ತಿಕ ಗರಿಷ್ಠವಾಗಿತ್ತು. ಉಳಿದವರೆಲ್ಲರೂ ಕೊಟ್ಟ ಅಲ್ಪಕಾಣಿಕೆಗಳೇ ಗೆಲುವಿನ ಮೆಟ್ಟಿಲುಗಳಾದವು.

Post Comments (+)