ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | ಐಪಿಎಲ್ ತೊರೆದ ಕ್ರಿಸ್ ಗೇಲ್ ಕೊಟ್ಟ ಕಾರಣ ಏನು?

Last Updated 1 ಅಕ್ಟೋಬರ್ 2021, 4:36 IST
ಅಕ್ಷರ ಗಾತ್ರ

ದುಬೈ: ಮುಂಬರುವ ಐಸಿಸಿ ಟಿ–20 ವಿಶ್ವಕಪ್ ಸಿದ್ಧತೆಗಾಗಿ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಐಪಿಎಲ್ ಬಯೋಬಬಲ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆಎಂದು ಪಂಜಾಬ್ ಕಿಂಗ್ಸ್ ತಿಳಿಸಿದೆ.

ಸದ್ಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಗೇಲ್ ಇದಕ್ಕೂ ಮುನ್ನ ಕೆರೇಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್‌) ಭಾಗವಹಿಸಿದ್ದು, ಬಯೋ ಬಬಲ್‌ ಮಾದರಿಯ ನಿರ್ಬಂಧಗಳನ್ನೇ ಅನುಸರಿಸಿದ್ದರು.

‘ಕಳೆದ ಕೆಲವು ತಿಂಗಳುಗಳಿಂದ ಬಯೋಬಬಲ್ ಭಾಗವಾಗಿದ್ದೇನೆ. ಮೊದಲು ಸಿಪಿಎಲ್‌ನಲ್ಲಿ ಮತ್ತು ನಂತರ ಐಪಿಎಲ್‌ ಬಯೋಬಬಲ್ ಭಾಗವಾಗಿದ್ದೇನೆ. ಮಾನಸಿಕವಾಗಿ ಪುನಶ್ಚೇತನ ಬಯಸಿದ್ದೇನೆ’ ಎಂದು ಗೇಲ್ ಹೇಳಿದ್ದಾರೆ.

‘ಟಿ–20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ಬಯಸುತ್ತೇನೆ. ಹೀಗಾಗಿ ದುಬೈಯಲ್ಲಿ ತುಸು ಬಿಡುವು ಮಾಡಿಕೊಳ್ಳುತ್ತೇನೆ. ವಿರಾಮಕ್ಕೆ ಅವಕಾಶ ಮಾಡಿಕೊಟ್ಟ ಪಂಜಾಬ್ ಕಿಂಗ್ಸ್ ತಂಡಕ್ಕೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

ಟಿ–20 ಕ್ರಿಕೆಟ್‌ನಲ್ಲಿ ಸುಮಾರು 14,000 ರನ್ ಗಳಿಸಿರುವ ಗೇಲ್, ವೆಸ್ಟ್ ಇಂಡೀಸ್ ತಂಡವು 2012 ಮತ್ತು 2016ರ ಟಿ–20 ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್‌ನಲ್ಲಿ 2018ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗುವ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು.

‘ನಾನು ಗೇಲ್ ವಿರುದ್ಧ ಅನೇಕ ಪಂದ್ಯಗಳಲ್ಲಿ ಆಡಿದ್ದೇನೆ ಮತ್ತು ಅವರನ್ನು ಹತ್ತಿರದಿಂದ ತಿಳಿದುಕೊಂಡಿದ್ದೇನೆ. ನಾನು ತಿಳಿದ ಮಟ್ಟಿಗೆ ಅವರೊಬ್ಬ ಸಂಪೂರ್ಣ ವೃತ್ತಿಪರ. ವಿಶ್ವಕಪ್ ಸಿದ್ಧತೆಗಾಗಿ ಅವರು ಕೈಗೊಂಡಿರುವ ನಿರ್ಧಾರವನ್ನು ಒಂದು ತಂಡವಾಗಿ ಗೌರವಿಸುತ್ತೇವೆ’ ಎಂದು ಪಂಜಾಬ್ ಕಿಂಗ್ಸ್ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT