ಯಾಕೆ ಹೀಗಾಯ್ತು: ಧೋನಿ ನಡೆಯನ್ನು ಖಂಡಿಸಿದ ಹಿರಿಯ ಕ್ರಿಕೆಟಿಗರು

ಶನಿವಾರ, ಏಪ್ರಿಲ್ 20, 2019
27 °C

ಯಾಕೆ ಹೀಗಾಯ್ತು: ಧೋನಿ ನಡೆಯನ್ನು ಖಂಡಿಸಿದ ಹಿರಿಯ ಕ್ರಿಕೆಟಿಗರು

Published:
Updated:

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಿನ ಕ್ರಿಕೆಟ್‌ ಪಂದ್ಯದ ಅಂತಿಮ ಘಟ್ಟದಲ್ಲಿ ನೋ ಬಾಲ್‌ ವಿಚಾರಕ್ಕೆ ಸಂಯಮ ಕಳೆದುಕೊಂಡು ಕ್ರೀಡಾಂಗಣ ಪ್ರವೇಶಿಸಿದ್ದ ಮಹೇಂದ್ರ ಸಿಂಗ್ ಧೋನಿ ನಡೆಗೆ ಕ್ರಿಕೆಟ್‌ ಜಗತ್ತು ದಿಗ್ಭ್ರಮೆ ವ್ಯಕ್ತಪಡಿಸಿದೆ. 

ಧೋನಿಯ ಈ ನಡೆ ಖಂಡನೀಯ ಎಂದು ಹಿರಿಯ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜೈಪುರದಲ್ಲಿ ಗುರುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ ದಾಖಲಿಸಿತ್ತು. ರಾಜಸ್ಥಾನ ನೀಡಿದ್ದ 151ರನ್‌ಗಳ ಗುರಿಯನ್ನು ಪ್ರಯಾಸಕರವಾಗಿಯೇ ತಲುಪಿತು. ಆರಂಭಿಕ ಆಘಾತದ ನಡುವೆಯೂ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಧೋನಿ ಯಶಸ್ವಿಯಾದರು. ಪಂದ್ಯದ ವೇಳೆ ಧೋನಿ ತೋರಿದ ಜಾಣ್ಮೆಗೆ ಪ್ರಶಂಸೆ ವ್ಯಕ್ತವಾಗಿತ್ತು. 

ಸಂಯಮ ಕಳೆದುಕೊಂಡು ಕ್ರೀಡಾಂಗಣ ಪ್ರವೇಶಿಸಿದ್ದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಒಟ್ಟು ಸಂಭಾವನೆಯ ಅರ್ಧದಷ್ಟು ಮೊತ್ತವನ್ನು ದಂಡವಾಗಿ ಕಟ್ಟುವಂತೆ ಐಪಿಎಲ್ ಶುಕ್ರವಾರ ಸೂಚಿಸಿದ್ದು ಇದಕ್ಕೆ ಧೋನಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 

ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 151 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಆರಂಭಿಕ ಆಘಾತ ಅನುಭವಿಸಿತು. 5.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 24 ರನ್‌ ಗಳಿಸಿ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜತೆಯಾದ ಅಂಬಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ ಅರ್ಧಶತಕಗಳನ್ನು ಪೂರೈಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. 18ನೇ ಓವರ್‌ನಲ್ಲಿ ಅಂಬಟಿ ರಾಯುಡು, 19ನೇ ಒವರ್‌ನಲ್ಲಿ ಧೋನಿ ಔಟಾದರು. 

ಕೊನೆಯ ಮೂರು ಎಸೆತಗಳಲ್ಲಿ ಎಂಟು ರನ್‌ಗಳು ಬೇಕಾಗಿದ್ದವು.  ಸ್ಟೋಕ್ಸ್‌ ಹಾಕಿದ 19ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬಾಲ್‌ ಬ್ಯಾಟ್‌ಗೆ ತಾಗದೇ ಹಿಂದೆ ಸಾಗಿ ಹೋಯಿತು. ಅಂಪೈರ್ ಉಲ್ಲಾಸ್‌ ಗಂದೆ ನೋಬಾಲ್  ಸೂಚನೆ ಕೊಟ್ಟರು.  ಆದರೆ ಸ್ಕ್ವೇರ್‌ ಲೆಗ್‌ ಅಂಪೈರ್ ಆ್ಯಕ್ಸನ್‌ಫೋರ್ಡ್‌ ನೋಬಾಲ್ ನೀಡಲು ಒಪ್ಪಲಿಲ್ಲ. ಇದರಿಂದ ನಾನ್‌ಸ್ಟೈಕರ್‌ ನಲ್ಲಿದ್ದ ಜಡೇಜ ಅವರು ನೋಬಾಲ್ ನೀಡುವಂತೆ ಅಂಪೈರ್‌ಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಡೇಜಾ ಮತ್ತು ಅಂಪೈರ್ ನಡುವೆ ಮಾತುಕತೆ ಬಿಸಿ ಯೇರಿತು. ಡಗ್‌ಔಟ್‌ನಲ್ಲಿದ್ದ ನಾಯಕ ಧೋನಿ ಕೂಡ ಮೈದಾನಕ್ಕೆ ಬಂದು ಅಂಪೈರ್ ಜೊತೆಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ. 

ಈ ಘಟನೆ ಜಗತ್ತಿನ ಹಿರಿಯ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಯಿತು. ಡಗ್‌ಔಟ್‌ನಲ್ಲಿದ್ದ ನಾಯಕ ಧೋನಿ ಕ್ರೀಡಾಂಗಣ ಪ್ರವೇಶಿಸಿ ಶಿಸ್ತನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದರೆ, ಕೆಲವರು ಧೋನಿ ನಡೆಗೆ ಜೈ ಎಂದಿದ್ದಾರೆ. 

ಧೋನಿ ಔಟಾದ ಬಳಿಕವೂ ಪಿಚ್‌ಗೆ ಬಂದು ಅಂಪೈರ್ ಜೊತೆ ಮಾತನಾಡಿದ್ದು ಕ್ರಿಕೆಟಿಗೆ ಉತ್ತಮವಾದುದಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಿಷೆಲ್‌ ಸಾಲ್ಟರ್‌ ಹೇಳಿದ್ದಾರೆ. 

ಈ ಹಿಂದೆ ಇಂತಹ ಘಟನೆಗಳನ್ನು ನಾನು ನೋಡಿರಲಿಲ್ಲ, ದೋನಿಯ ನಡವಳಿಕೆಯನ್ನು ಕ್ರಿಕೆಟ್‌ ಜಗತ್ತು ಖಂಡಿಸಬೇಕು ಎಂದು ಆಸ್ಟ್ರೇಲಿಯಾದ ಕ್ರೀಡಾ ವರದಿಗಾರ ಪೀಟರ್ ಲಾಲೂರ್ ಹೇಳಿದ್ದಾರೆ. 

ಭಾರತದ ಮಾಜಿ ವಿಕೆಟ್ ಕೀಪರ್ ದೀಪ್‌ ದಾಸ್‌ ಗುಪ್ತ ದೋನಿಯಾ ನಡೆಯನ್ನು ಖಂಡಿಸಿದ್ದಾರೆ ಎಂದು ಇಎಸ್‌ಪಿಎನ್‌ ವರದಿ ಮಾಡಿದೆ. 

ಧೋನಿ ಮತ್ತೆ ಕ್ರೀಡಾಂಗಣಕ್ಕೆ ಬರಬಾರದಿತ್ತು, ’ಇದು ಗಲ್ಲಿ ಅಥವಾ ಹಳ್ಳಿ ಕ್ರಿಕೆಟ್‌ ಅಲ್ಲ, ಅದು ಐಪಿಎಲ್‌ ಮ್ಯಾಚ್‌’ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶಾನ್‌ ಟೈಟ್‌ ಹೇಳಿದ್ದಾರೆ. 

ಇದು ಕ್ರಿಕೆಟಿಗೆ ಉತ್ತಮವಾದುದಲ್ಲ, ಔಟ್‌ ಆದ ಬಳಿಕ ಧೋನಿ ಮತ್ತೆ ಪಿಚ್‌ ಮೇಲೆ ಬರಬಾರದಿತ್ತು ಎಂದು ಮಾಜಿ ಕ್ರಿಕೆಟಿಗ ವಿಷೆಲ್‌ ವಾಘನ್‌ ಟ್ವೀಟ್ ಮಾಡಿದ್ದಾರೆ. 

ಈ ಸಲದ ಐಪಿಎಲ್‌ ಮ್ಯಾಚ್‌ನಲ್ಲಿ ಅಂಪೈರಿಂಗ್‌ ತೀರ್ಪುಗಳು ತುಂಬಾ ಕಳಪೆಯಾಗಿವೆ, ಆದರೆ ತಂಡದ ಎದುರಾಳಿ ನಾಯಕ ಧೋನಿ ಔಟ್‌ ಆದ ಮೇಲೆ ಮತ್ತೆ ಅಂಗಣಕ್ಕೆ ಬಂದದ್ದು ತಪ್ಪು ಎಂದು ಕ್ರಿಕೆಟಿಗ ಆಕಾಶ್‌ ಚೋಪ್ರಾ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 21

  Happy
 • 3

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !