ಶನಿವಾರ, ಜನವರಿ 16, 2021
27 °C

ಅಪ್ಪನ ಅಗಲಿಕೆಯ ನೋವಿನಲ್ಲೂ ಅಂಗಳಕ್ಕಿಳಿದು ಮಿಂಚಿದ ಕ್ರಿಕೆಟ್‌ ತಾರೆಯರು

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಅಪ್ಪ ಎಂದರೆ ಆಕಾಶ. ತನ್ನೆಲ್ಲಾ ಸುಖ, ಸಂತಸವನ್ನು ಬಲಿಕೊಟ್ಟು ಮಕ್ಕಳ ಬದುಕು ರೂಪಿಸಲು ಹಗಲಿರುಳೆನ್ನದೇ ಶ್ರಮಿಸುವ ಕಾಯಕ ಜೀವಿ.

ಹಬ್ಬ ಹರಿದಿನಗಳಲ್ಲಿ ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸುವ, ಅವರನ್ನು ಹೆಗಲ ಮೇಲೆ ಹೊತ್ತು ತಡರಾತ್ರಿಯವರೆಗೂ ಜಾತ್ರೆಯ ದರ್ಶನ ಮಾಡಿಸುವ, ಏನು ಕೇಳಿದರೂ ಇಲ್ಲವೆನ್ನದೇ ಕೊಡಿಸುವ, ಎಳೆಯ ಕಂದ ತನ್ನ ತಲೆಗೂದಲನ್ನು ಹಿಡಿದೆಳೆಯುವಾಗ ಆಗುವ ವಿಪರೀತ ನೋವನ್ನು ನುಂಗಿ ಕಿಲಕಿಲನೆ ನಗುವ ವಿಶಾಲ ಹೃದಯಿ ಅಪ್ಪ.

ಇಂತಹ ತ್ಯಾಗಮಯಿ ತೀರಿಕೊಂಡ ಸುದ್ದಿ ಕಿವಿಗೆ ಬಿದ್ದರೆ ಹೃದಯ ಒಡೆದುಹೋದ ಅನುಭವವಾಗುತ್ತದೆ. ಅರೆಕ್ಷಣ ಭೂಮಿಯೇ ಕುಸಿದುಬಿದ್ದಂತೆ ಭಾಸವಾಗುತ್ತದೆ. ಆ ಕ್ಷಣ ನಮಗರಿವಿಲ್ಲದೆಯೇ ಆತನ ನೆನಪುಗಳು ಒಂದೊಂದಾಗಿ ಕಣ್ಣ ಮುಂದೆ ಹಾದುಹೋಗುತ್ತವೆ.

ಅಪ್ಪನ ಅಗಲಿಕೆಯ ನೋವನ್ನು ಅರಗಿಸಿಕೊಳ್ಳುವುದು ಕಷ್ಟ. ಆ ದುಃಖದಲ್ಲೇ ದಿನದೂಡುವುದಕ್ಕಿಂತ ಅದರಿಂದ ಹೊರಬಂದು ಏನನ್ನಾದರೂ ಸಾಧಿಸಬೇಕು. ಆ ಮೂಲಕ ಮರಳಿ ಬಾರದ ಊರಿಗೆ ಹೋಗಿರುವ ತಂದೆಗೆ ಗೌರವ ಸಮರ್ಪಿಸಬೇಕೆಂಬ ಮನೋಭಾವ ಬೆಳೆಸಿಕೊಂಡ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಈ ಹಾದಿಯಲ್ಲಿ ಕ್ರಿಕೆಟಿಗರೂ ಮುಂಚೂಣಿಯಲ್ಲಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಮೊಹಮ್ಮದ್‌ ಸಿರಾಜ್‌.

ಬಲಗೈ ಮಧ್ಯಮ ವೇಗಿ ಸಿರಾಜ್‌ ಅವರ ಕ್ರಿಕೆಟ್‌ ಭವಿಷ್ಯ ರೂಪಿಸುವಲ್ಲಿ ಅವರ ತಂದೆ ಮಹಮ್ಮದ್‌ ಗೌಸ್‌ ಬಹಳಷ್ಟು ಶ್ರಮಿಸಿದ್ದರು. ಹೈದರಾಬಾದ್‌ನಲ್ಲಿ ರಿಕ್ಷಾ ಚಾಲಕರಾಗಿದ್ದ ಗೌಸ್‌ ಹೋದ ವಾರ ನಿಧನರಾದರು.

ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಪರ ಕಣಕ್ಕಿಳಿದು ಮಿಂಚಿದ್ದ ಸಿರಾಜ್‌ಗೆ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಲಭಿಸಿತ್ತು. ಐಪಿಎಲ್‌ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿದ್ದ (ಯುಎಇ) ಸಿರಾಜ್‌, ಅಲ್ಲಿಂದಲೇ ಭಾರತ ತಂಡದ ಜೊತೆ ಆಸ್ಟ್ರೇಲಿಯಾಕ್ಕೆ ಪಯಣಿಸಿದ್ದರು.

ಪಿತೃವಿಯೋಗದ ಕಾರಣ ಕಾಂಗರೂ ನಾಡಿನಿಂದ ಹೈದರಾಬಾದ್‌ಗೆ ಬರಲು ಸಿರಾಜ್‌ಗೆ ಅನುಮತಿ ನೀಡಿದ್ದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಇದಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡುವುದಾಗಿ ತಿಳಿಸಿತ್ತು. ಆದರೆ ಸಿರಾಜ್‌ ಇದಕ್ಕೆ ಒಪ್ಪಲಿಲ್ಲ.

ತಾನು ಆಸ್ಟ್ರೇಲಿಯಾದಲ್ಲಿ ಇದ್ದು ರಾಷ್ಟ್ರೀಯ ತಂಡದ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದ್ದ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.

‘ಸಿರಾಜ್‌ ಅವರದ್ದು ದಿಟ್ಟತನದ ನಡೆ. ಅವರಿಗೆ ವೃತ್ತಿಜೀವನದಲ್ಲಿ ಅಪಾರ ಯಶಸ್ಸು ಸಿಗಲಿದೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1) ಅಂಜದೆ ಆಡಿದ್ದ ಕೊಹ್ಲಿ...

ಬದ್ಧತೆಗೆ ಮತ್ತೊಂದು ಹೆಸರೇ ವಿರಾಟ್‌ ಕೊಹ್ಲಿ. ಭಾರತದ ಕ್ರಿಕೆಟಿಗರಿಗೆ ಫಿಟ್‌ನೆಸ್‌ ಮಹತ್ವ ಸಾರಿ ಹೇಳಿದ ಆಟಗಾರ ಕೂಡ ಅವರೇ.

2006 ಡಿಸೆಂಬರ್‌ 19ರ ಮಾತು. ಅಂದು ಬೆಳಗಿನ ಜಾವ ವಿರಾಟ್‌ ತಂದೆ ಪ್ರೇಮ್‌ ಕೊಹ್ಲಿ (ಅವರಿಗೆ ಆಗ 54 ವರ್ಷ ವಯಸ್ಸು) ಹೃದಯಾಘಾತದಿಂದ ಅಸು ನೀಗಿದ್ದರು. ಆ ವಿಷಯ ಗೊತ್ತಾದ ಬಳಿಕವೂ 18ರ ಹರೆಯದ ವಿರಾಟ್‌ ಮೈದಾನಕ್ಕಿಳಿದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ಉಮ್ಮಳಿಸಿ ಬರುತ್ತಿದ್ದ ದುಃಖ ತಡೆದುಕೊಂಡೇ ಅವರು ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 90 ರನ್‌ ದಾಖಲಿಸಿದ್ದರು. ದೆಹಲಿ ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡಿದ್ದರು. ನಂತರ ತವರಿಗೆ ಮರಳಿ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.


ಬಾಲ್ಯದಲ್ಲಿ ವಿರಾಟ್‌ ಕೊಹ್ಲಿಯನ್ನು ಅವರ ತಂದೆ ಎತ್ತಿಕೊಂಡಿರುವುದು –ಇನ್‌ಸ್ಟಾಗ್ರಾಮ್ ಚಿತ್ರ 

ಕೊಹ್ಲಿ ತಂದೆ ತೀರಿಕೊಂಡು 13 ವರ್ಷಗಳು ಉರುಳಿವೆ. ಈ ಅವಧಿಯಲ್ಲಿ ಕೊಹ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿ ಕ್ರಿಕೆಟ್‌ ಲೋಕದ ಸಾಮ್ರಾಟನಾಗಿ ಬೆಳೆದಿದ್ದಾರೆ. ಇದಕ್ಕೆ ಕಾರಣ ಅವರ ಸಮರ್ಪಣಾ ಭಾವ.

‘ತಂದೆಯ ಸಾವಿನ ಸುದ್ದಿ ಕೇಳಿ ಆಘಾತವಾಗಿತ್ತು. ಅದು ನನ್ನ ಬದುಕಿನ ಕರಾಳ ದಿನ. ಆ ವಿಷಯ ತಿಳಿದ ಬಳಿಕ ದೆಹಲಿ ತಂಡದ ತರಬೇತುದಾರರನ್ನು ಭೇಟಿಯಾಗಿ ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ಅಂತಿಮ ದಿನದಾಟದಲ್ಲಿ ಆಡುವುದಾಗಿ ಹೇಳಿದ್ದೆ. ಕ್ರಿಕೆಟ್‌ ನನ್ನ ಉಸಿರಿನಲ್ಲಿ ಬೆರೆತು ಹೋಗಿರುವುದಕ್ಕೆ ಅಂದು ತೆಗೆದುಕೊಂಡ ನಿರ್ಧಾರವೇ ಸಾಕ್ಷಿ’ ಎಂದು ಕೊಹ್ಲಿ ಹಿಂದೊಮ್ಮೆ ಹೇಳಿದ್ದರು.

2) ಮಾದರಿಯಾಗಿದ್ದ ‘ಮಾಸ್ಟರ್‌ ಬ್ಲಾಸ್ಟರ್‌’..

‘ಕ್ರಿಕೆಟ್‌ ದೇವರು’, ‘ಲಿಟ್ಲ್‌ ಮಾಸ್ಟರ್‌’ ಎಂದೆಲ್ಲಾ ಖ್ಯಾತರಾಗಿರುವ ಬ್ಯಾಟಿಂಗ್‌ ಮಾಂತ್ರಿಕ ಸಚಿನ್ ತೆಂಡೂಲ್ಕರ್‌ ಕೂಡ ಈ ಸಂದಿಗ್ಧತೆಯನ್ನು ಮೆಟ್ಟಿನಿಂತವರೇ. 1999ರ ಏಕದಿನ ವಿಶ್ವಕಪ್‌ ಅದಕ್ಕೊಂದು ನಿದರ್ಶನ.


ಅಪ್ಪ ಅಮ್ಮನ ತೊಡೆಯ ಮೇಲೆ ಮಲಗಿರುವ ಸಚಿನ್‌ ತೆಂಡೂಲ್ಕರ್‌ –ಇನ್‌ಸ್ಟಾಗ್ರಾಮ್‌ ಚಿತ್ರ 

ಆ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಸೋತಿತ್ತು. ತಂಡವು ಜಿಂಬಾಬ್ವೆ ವಿರುದ್ಧದ ಹೋರಾಟಕ್ಕೆ (ಮೇ 15) ಸಜ್ಜಾಗಿತ್ತು. ಆ ಪಂದ್ಯದ ಹಿಂದಿನ ದಿನವೇ ಸಚಿನ್‌ ಅವರ ತಂದೆ ರಮೇಶ್‌ ತೆಂಡೂಲ್ಕರ್‌ ನಿಧನರಾಗಿದ್ದರು. ಈ ಸುದ್ದಿ ತಿಳಿದ ಕೂಡಲೆ ಸಚಿನ್‌ ಇಂಗ್ಲೆಂಡ್‌ನಿಂದ ತವರಿಗೆ ಹಿಂತಿರುಗಿದ್ದರು. ಅಪ್ಪನ ಅಂತ್ಯ ಸಂಸ್ಕಾರ ಮುಗಿದ ಕೂಡಲೇ ಮತ್ತೆ ಇಂಗ್ಲೆಂಡ್‌ ವಿಮಾನ ಏರಿದ್ದರು.

ಕೀನ್ಯಾ ವಿರುದ್ಧದ ನಿರ್ಣಾಯಕ ಪ‍ಂದ್ಯದಲ್ಲಿ ಕೆಚ್ಚೆದೆಯ ಬ್ಯಾಟಿಂಗ್‌ ಮಾಡಿದ್ದ ಸಚಿನ್‌ 101 ಎಸೆತಗಳಲ್ಲಿ ಅಜೇಯ 140ರನ್‌ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆ ಹಣಾಹಣಿಯಲ್ಲಿ ಕನ್ನಡಿಗ ರಾಹುಲ್‌ ದ್ರಾವಿಡ್‌ (ಅಜೇಯ 104; 109 ಎಸೆತ) ಜೊತೆ ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 237 ರನ್‌ಗಳನ್ನು ಕಲೆಹಾಕಿ ಮೊಹಮ್ಮದ್‌ ಅಜರುದ್ದೀನ್‌ ಬಳಗಕ್ಕೆ 94 ರನ್‌ಗಳ ಗೆಲುವು ತಂದುಕೊಟ್ಟಿದ್ದರು.

3) ಪಂತ್‌ ಪರಾಕ್ರಮ..

ವಿಶ್ವಶ್ರೇಷ್ಠ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿರುವ ಆಟಗಾರ ರಿಷಭ್‌ ಪಂತ್‌.

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಿ ಗಮನ ಸೆಳೆದಿದ್ದ ರಿಷಭ್‌, 2016–17ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ತ್ರಿಶತಕ (308) ಸಿಡಿಸಿ ದಾಖಲೆ ಬರೆದಿದ್ದರು. ದೆಹಲಿ ತಂಡದ ಈ ಆಟಗಾರ ಅದೇ ಋತುವಿನಲ್ಲಿ ವೇಗದ ಶತಕ ಕೂಡ ದಾಖಲಿಸಿದ್ದರು. ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಅವರು 48 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದ್ದರು.


ತಂದೆಯ ಜೊತೆ ರಿಷಭ್‌ ಪಂತ್‌ –ಇನ್‌ಸ್ಟಾಗ್ರಾಮ್‌ ಚಿತ್ರ 

2017ರ ಐಪಿಎಲ್‌ ಟೂರ್ನಿಯ ವೇಳೆ ರಿಷಭ್‌ ಅವರ ತಂದೆ ರಾಜೇಂದ್ರ ಪಂತ್‌ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ತಂದೆಗೆ ಅಂತಿಮ ನಮನ ಸಲ್ಲಿಸಲು ತವರಿಗೆ ಹಿಂತಿರುಗಿದ್ದ ಅವರು ಆ ನೋವು ಮನದಿಂದ ಮಾಸುವ ಮುನ್ನವೇ ಮೈದಾನಕ್ಕಿಳಿದಿದ್ದರು.

ಆರ್‌ಸಿಬಿ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದರು.

4) ಮನ ಗೆದ್ದ ಮನದೀಪ್‌..

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆದಿದ್ದ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಚಾಂಪಿಯನ್‌ ಆಗಿದ್ದು ಎಲ್ಲರಿಗೂ ಗೊತ್ತು. ಈ ಸಲದ ಲೀಗ್‌, ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.

ಟೂರ್ನಿಯ ವೇಳೆ ಮನದೀಪ್‌ ಸಿಂಗ್‌ ಅವರ ಅಪ್ಪ ಹರ್ದೇವ್‌ ಸಿಂಗ್‌ ನಿಧನರಾದರು. ಈ ಸುದ್ದಿ ತಿಳಿದು ಮನಸ್ಸು ಭಾರವಾದರೂ ಮನದೀಪ್‌ ತವರಿಗೆ ಮರಳಲಿಲ್ಲ. ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಜೊತೆಗೇ ಇರಲು ತೀರ್ಮಾನಿಸಿದ್ದ ಅವರು ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದರು. ಶಾರ್ಜಾ ಅಂಗಳದಲ್ಲಿ ನಡೆದಿದ್ದ ಆ ಹೋರಾಟದಲ್ಲಿ 56 ಎಸೆತಗಳಲ್ಲಿ ಅಜೇಯ 66 ರನ್‌ ಬಾರಿಸಿದ್ದರು.


ಸಮಾರಂಭವೊಂದರಲ್ಲಿ ಅಪ್ಪನ ಜೊತೆ ಮನದೀಪ್‌ ಸಿಂಗ್‌ –ಇನ್‌ಸ್ಟಾಗ್ರಾಮ್‌ ಚಿತ್ರ 

‘ನಾನು ಶತಕ ಇಲ್ಲವೇ ದ್ವಿಶತಕ ಗಳಿಸಿ ಔಟಾದಾಗ ಅಪ್ಪ ಬೈಯುತ್ತಿದ್ದರು. ನೀನು ಎಲ್ಲಾ ಪಂದ್ಯಗಳಲ್ಲೂ ನಾಟೌಟ್‌ ಆಗಬೇಕು ಎಂದು  ಹೇಳುತ್ತಿದ್ದರು. ಈ ಹಣಾಹಣಿಯಲ್ಲಿ ಅಜೇಯವಾಗಿ ಉಳಿಯುವ ಮೂಲಕ ಅವರ ಆಸೆ ಈಡೇರಿಸಿದ್ದೇನೆ. ಈ ದಿನ ನನ್ನ ಪಾಲಿಗೆ ಸ್ಮರಣೀಯವಾದುದು’ ಎಂದು ಮನದೀಪ್‌ ಪಂದ್ಯದ ಬಳಿಕ ಭಾವುಕರಾಗಿ ನುಡಿದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು