ಮಂಗಳವಾರ, ಮೇ 26, 2020
27 °C
ಇದೇ ವರ್ಷ ಐಪಿಎಲ್ ಟೂರ್ನಿ ನಡೆಯುವ ಬಗ್ಗೆ ವಿಶ್ವಾಸ

ಮಳೆಗಾಲದ ನಂತರ ಕ್ರಿಕೆಟ್ ಚಟುವಟಿಕೆಗಳು: ರಾಹುಲ್ ಜೊಹ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಮುಂಗಾರು ಮಳೆಗಾಲದ ನಂತರವೇ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯೂ ಇದೇ ವರ್ಷ ನಡೆಯುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ತಡೆಯಲು ಲಾಕ್‌ಡೌನ್ ವಿಧಿಸಿರುವುದರಿಂದ ಹೋದ ಎರಡು ತಿಂಗಳುಗಳಿಂದ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ. ಮರು ಆರಂಭದ ಕುರಿತು ಫಸ್ಟ್ ಸೆಂಚುರಿ ಮಿಡಿಯಾ ಬುಧವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಆರೋಗ್ಯ ಮತ್ತು ಸುರಕ್ಷೆಯು ಪ್ರತಿಯೊಬ್ಬರ ಹಕ್ಕು. ಅದನ್ನು ಎಲ್ಲರೂ ಗೌರವಿಸಬೇಕು. ಭಾರತ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧರಾಗಿದ್ದೇವೆ. ಅದನ್ನು ನಾವು ಅನುಸರಿಸುತ್ತೇವೆ. ಕ್ರಿಕೆಟ್‌ ಚಟುವಟಿಕೆಗಳು ಮಳೆಗಾಲಕ್ಕಿಂತ ಮುನ್ನ ನಡೆಯುವುದು ಅನುಮಾನ’ ಎಂದು ಜೊಹ್ರಿ ಹೇಳಿದರು.

‘ಬೇರೆ ಬೇರೆ ದೇಶಗಳ ಶ್ರೇಷ್ಠ ಆಟಗಾರರು  ಒಂದೇ ವೇದಿಕೆಯಲ್ಲಿ ಆಡುವುದು ಐಪಿಎಲ್ ಟೂರ್ನಿಯ ವೈಶಿಷ್ಟ್ಯವಾಗಿದೆ. ಅಂತಹ ಒಂದು ಟೂರ್ನಿ ನಡೆಯಬೇಕಾದರೆ ಹಂತಹಂತವಾಗಿ ಸಿದ್ಧತೆಗಳಾಗಬೇಕು. ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಬೇಕು.  ಅದನ್ನು ನಾವು ನಾಳೆಯೇ ಆಗಿಬಿಡುತ್ತದೆಯೆಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸರ್ಕಾರವು ನೀಡುವ ಸೂಚನೆಗಳನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ. ಸದ್ಯ ವಿದೇಶಿ ವಿಮಾನಯಾನ ಸ್ಥಗಿತವಾಗಿದೆ. ಆರಂಭವಾದರೂ ಕೂಡ ಪ್ರಯಾಣದ ನಂತರ ಪ್ರತ್ಯೇಕವಾಸ ನಿಯಮ ಪಾಲಿಸಬೇಕು. ಇದು ಟೂರ್ನಿಗಳ ಆಯೋಜನೆ ಮತ್ತು ವೇಳಾಪಟ್ಟಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಅರಿಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ದೇಶಿ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯ ಸಿದ್ಧತೆಯೂ ಈಗ ಸವಾಲಿನದ್ದೇ ಆಗಿದೆ. 50 ಕಿಲೋಮೀಟರ್ ಅಥವಾ ಮೂರು ಸಾವಿರ ಕಿಲೋಮೀಟರ್ ಅಂತರದಲ್ಲಿ ಪ್ರಯಾಣ ಮಾಡುವ ಯಾವುದೇ ತಂಡವನ್ನೂ ನಿರ್ಲಕ್ಷಿಸುವಂತಿಲ್ಲ. ಎಲ್ಲ ತಂಡಗಳ ಬಗ್ಗೆ ಸಮಗ್ರವಾಗಿ ಯೋಚಿಸಬೇಕಾಗುತ್ತದೆ. ರೂಪುರೇಷೆ ಸಿದ್ಧಪಡಿಸಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು