ಶುಕ್ರವಾರ, ಅಕ್ಟೋಬರ್ 23, 2020
21 °C
ದುಬೈ ಅಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್–ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ಹಣಾಹಣಿ ಇಂದು

IPL-2020 | ಕುತೂಹಲ ಕೆರಳಿಸಿರುವ ಧೋನಿ ಬ್ಯಾಟಿಂಗ್ ಕ್ರಮಾಂಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಶುಕ್ರವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಣ ಪಂದ್ಯದ ಫಲಿತಾಂಶಕ್ಕಿಂತಲೂ ಮಹೇಂದ್ರಸಿಂಗ್ ಧೋನಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು ಎಂಬ ಚರ್ಚೆಯೇ ಜೋರಾಗಿದೆ.

ಚೆನ್ನೈ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ಜಯಿಸಿತ್ತು. ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಸೋತಿತ್ತು. ಆ ಪಂದ್ಯದಲ್ಲಿ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದು ಚರ್ಚೆಗೆ ಗ್ರಾಸವಾಗಿತ್ತು. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಧೋನಿಯ ನಿರ್ಧಾರವನ್ನು ಟೀಕಿಸಿದ್ದರು. ಅದರಿಂದಾಗಿ ಮುಂದಿನ ‍ಪಂದ್ಯದಲ್ಲಿ ಧೋನಿ ಆಡುವ ಕ್ರಮಾಂಕದ ಕುರಿತು ಕುತೂಹಲ ಮೂಡಿದೆ. ಆದರೆ ಇದೆಲ್ಲದರ ನಡುವೆ ಆ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳ ವೈಫಲ್ಯ ಮರೆಯಾಯಿತು.

ರಾಯಲ್ಸ್ ತಂಡವು ದೊಡ್ಡ ಮೊತ್ತ ಗಳಿಸದಂತೆ ತಡೆಯುವಲ್ಲಿ ಚೆನ್ನೈ ಬೌಲಿಂಗ್ ಪಡೆ ವಿಫಲವಾಗಿತ್ತು. ಅಲ್ಲದೇ ಋತುರಾಜ್ ಗಾಯಕವಾಡ್, ಸ್ಯಾಮ್ ಕರನ್ ಮತ್ತು ಕೇದಾರ್ ಜಾಧವ್ ಅವರು ಬ್ಯಾಟಿಂಗ್‌ನಲ್ಲಿ ತಮಗೆ ಸಿಕ್ಕ ‘ಬಡ್ತಿ’ಯನ್ನು ಸದುಪಯೋಗ ಮಾಡಿಕೊಳ್ಳುವಲ್ಲಿಯೂ ಸಫಲರಾಗಿರಲಿಲ್ಲ.

ಕಳೆದ ಎರಡೂ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿರುವ ಫಾಫ್ ಡುಪ್ಲೆಸಿ ಭರವಸೆ ಉಳಿಸಿಕೊಂಡಿದ್ದಾರೆ. ಗಾಯಗೊಂಡಿರುವ ಅಂಬಟಿ ರಾಯುಡು ಅವರು ಈ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ. ಮುರಳಿ ವಿಜಯ್ ಲಯಕ್ಕೆ ಮರಳುವ ಅಗತ್ಯವಿದೆ. ಡ್ವೇನ್ ಬ್ರಾವೊ ಅನುಪಸ್ಥಿತಿ ಕೂಡ ಕಾಡಬಹುದು. ಅದರಿಂದಾಗಿ ಧೋನಿ ಮೇಲೆ ಹೆಚ್ಚು ಹೊಣೆ ಬೀಳಲಿದೆ.

ಆದರೆ, ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ. ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ಆ ತಂಡದ ಛಲದ ಹೋರಾಟ ರಂಗೇರಿತ್ತು. ಸೂಪರ್ ಓವರ್‌ನಲ್ಲಿ ಗೆದ್ದಿತ್ತು. ಮಾರ್ಕಸ್‌ ಸ್ಟೋಯಿನಿಸ್ ಅವರ ಆಲ್‌ರೌಂಡ್ ಆಟ, ಲುಂಗಿ ಗಿಡಿ ಮತ್ತು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರ ಬೌಲಿಂಗ್ ಮೇಲೆಯೇ ತಂಡವು ಹೆಚ್ಚು ಅವಲಂಬಿತವಾಗಿದೆ.

ಪೃಥ್ವಿ ಶಾ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ಗಳಲ್ಲಿ ಸುಧಾರಣೆ ಕಂಡುಕೊಳ್ಳಬೇಕು. ಅಜಿಂಕ್ಯ ರಹಾನೆಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಬಗ್ಗೆ ಖಚಿತವಾಗಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು