ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2023 | ಚೆನ್ನೈ ಸೂಪರ್‌ಕಿಂಗ್ಸ್‌ಗೆ 'ಕಪ್'; ಆರೆಂಜ್, ಪರ್ಪಲ್ ಕ್ಯಾಪ್ ಯಾರಿಗೆ?

Published 29 ಮೇ 2023, 20:38 IST
Last Updated 29 ಮೇ 2023, 20:38 IST
ಅಕ್ಷರ ಗಾತ್ರ

ಅಹಮದಾಬಾದ್‌: 2023ರ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ಗೆ ಸೋಲುಣಿಸಿದ ಚೆನ್ನೈ ಸೂಪರ್‌ಕಿಂಗ್ಸ್‌ ಐದನೇ ಬಾರಿಗೆ ಚಾಂಪಿಯನ್‌ ಆದ ಸಾಧನೆ ಮಾಡಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಗುಜರಾತ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 214 ರನ್ ಗಳಿಸಿತು.

ಯುವ ಬ್ಯಾಟರ್‌ ಸಾಯಿ ಸುದರ್ಶನ್‌ ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ ಸಹಿತ 96 ರನ್‌ ಗಳಿಸಿ, ಶತಕದ ಹೊಸ್ತಿಲಲ್ಲಿ ವಿಕೆಟ್‌ ಒಪ್ಪಿಸಿದರು. ಆರಂಭಿಕ ಬ್ಯಾಟರ್‌ಗಳಾದ ವೃದ್ಧಿಮಾನ್‌ ಸಾಹ (54 ರನ್‌), ಶುಭಮನ್‌ ಗಿಲ್ (39 ರನ್‌) ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ (ಅಜೇಯ 22 ರನ್‌) ಉಪಯುಕ್ತ ಆಟವಾಡಿದರು.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಇನಿಂಗ್ಸ್‌ ಆರಂಭವಾದ ಕೂಡಲೇ ಮಳೆ ಬಂದ ಕಾರಣ ಆಟ ನಿಂತಿತು. ರಾತ್ರಿ 12.10ಕ್ಕೆ ಆಟ ಮುಂದುವರಿಸಲು ಅಂಪೈರ್‌ಗಳು ನಿರ್ಧರಿಸಿದರು. ಚೆನ್ನೈ ತಂಡದ ಗೆಲುವಿಗೆ 15 ಓವರ್‌ಗಳಲ್ಲಿ 171 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು.

ಕಠಿಣ ಗುರಿ ಬೆನ್ನತ್ತಿದ ಎಂ.ಎಸ್‌.ಧೋನಿ ಪಡೆ ನಿಗದಿತ ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಡೆವೋನ್‌ ಕಾನ್ವೇ ಕೇವಲ 25 ಎಸೆತಗಳಲ್ಲಿ 47 ರನ್‌ ಸಿಡಿಸಿ ನೆರವಾದರು. ಕೊನೇ ಎರಡು ಎಸೆತಗಳಲ್ಲಿ 10 ರನ್‌ ಗಳಿಸಿದ ರವೀಂದ್ರ ಜಡೇಜ, ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು.

ಈ ಪಂದ್ಯ ಭಾನುವಾರವೇ ನಡೆಯಬೇಕಿತ್ತು. ಆದರೆ, ನಿರಂತರವಾಗಿ ಮಳೆ ಸುರಿದ ಕಾರಣ ಒಂದು ದಿನ ಮುಂದೂಡಲಾಗಿತ್ತು.

ಗುಜರಾತ್‌ ಆಟಗಾರರಿಗೆ 'ಆರೆಂಜ್‌, ಪರ್ಪಲ್‌ ಕ್ಯಾಪ್‌'

ಕಳೆದ ಆವೃತ್ತಿಯ ಚಾಂಪಿಯನ್‌ ಗುಜರಾತ್‌ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಅಲ್ಪ ಅಂತರದಲ್ಲಿ ಎಡವಿತು. ಆದರೆ, ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದವರಿಗೆ ನೀಡುವ 'ಆರೆಂಜ್‌ ಕ್ಯಾಪ್‌' ಮತ್ತು ಹೆಚ್ಚು ವಿಕೆಟ್ ಕಬಳಿಸಿದವರಿಗೆ ಕೊಡುವ 'ಪರ್ಪಲ್‌ ಕ್ಯಾಪ್‌' ಈ ತಂಡದ ಆಟಗಾರರ ಪಾಲಾದವು.

ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ಭರವಸೆಯ ಬ್ಯಾಟರ್‌ ಶುಭಮನ್ ಗಿಲ್‌ 'ಆರೆಂಜ್‌ ಕ್ಯಾಪ್‌' ಮತ್ತು ಅತಿಹೆಚ್ಚು ಕಬಳಿಸಿದ ಸಾಧನೆ ಮಾಡಿದ ಮೊಹಮ್ಮದ್‌ ಶಮಿ 'ಪರ್ಪಲ್‌ ಕ್ಯಾಪ್‌' ತೊಟ್ಟರು.

ಗಿಲ್‌ 17 ಪಂದ್ಯಗಳ 17 ಇನಿಂಗ್ಸ್‌ಗಳಿಂದ ಮೂರು ಶತಕ ಸಹಿತ 890 ರನ್‌ ಕಲೆಹಾಕಿದ್ದಾರೆ. ಶಮಿ ಅವರೂ ಇಷ್ಟೇ ಪಂದ್ಯಗಳಿಂದ 28 ವಿಕೆಟ್‌ ಉರುಳಿಸಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಐವರು
01.ಶುಭಮನ್‌ ಗಿಲ್‌ ಗುಜರಾತ್‌ ಟೈಟನ್ಸ್‌) – 890 ರನ್‌
02. ಫಫ್‌ ಡುಪ್ಲೆಸಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) – 730 ರನ್‌
03. ಡೆವೋನ್‌ ಕಾನ್ವೇ (ಚೆನ್ನೈ ಸೂಪರ್‌ಕಿಂಗ್ಸ್‌) – 672 ರನ್‌
04. ವಿರಾಟ್‌ ಕೊಹ್ಲಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) – 639 ರನ್‌
05. ಯಶಸ್ವಿ ಜೈಸ್ವಾಲ್‌ (ರಾಜಸ್ಥಾನ ರಾಯಲ್ಸ್) – 625 ರನ್‌

ಅತಿ ಹೆಚ್ಚು ವಿಕೆಟ್‌ ಪಡೆದ ಐವರು
01. ಮೊಹಮ್ಮದ್‌ ಶಮಿ (ಗುಜರಾತ್‌ ಟೈಟನ್ಸ್‌) – 28 ವಿಕೆಟ್‌
02. ಮೋಹಿತ್‌ ಶರ್ಮಾ (ಗುಜರಾತ್‌ ಟೈಟನ್ಸ್‌) – 27 ವಿಕೆಟ್‌
03. ರಶೀದ್‌ ಖಾನ್ (ಗುಜರಾತ್‌ ಟೈಟನ್ಸ್‌) – 27 ವಿಕೆಟ್‌
04. ಪಿಯೂಶ್‌ ಚಾವ್ಲಾ (ಮುಂಬೈ ಇಂಡಿಯನ್ಸ್‌) – 22 ವಿಕೆಟ್‌
05. ಯಜುವೇಂದ್ರ ಚಾಹಲ್‌ (ರಾಜಸ್ಥಾನ ರಾಯಲ್ಸ್) – 21 ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT