ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯಾರೆನ್ ಸಾಮಿಗೂ ಕಾಡಿತ್ತಂತೆ ಜನಾಂಗೀಯ ನಿಂದನೆಯ ನೋವು

Last Updated 7 ಜೂನ್ 2020, 19:30 IST
ಅಕ್ಷರ ಗಾತ್ರ

ಕಿಂಗ್ಸ್‌ಟನ್: ವೆಸ್ಟ್ ಇಂಡೀಸ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸಾಮಿ ಕೂಡ ಜನಾಂಗೀಯ ನಿಂದನೆಗೆ ಒಳಗಾಗಿದ್ದರಂತೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸಂದರ್ಭದಲ್ಲಿ ಈ ಕಹಿ ಅನುಭವ ಆಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುವಾಗ ತಮ್ಮನ್ನು ನಿಂದಿಸಿರುವುದಾಗಿಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ನಂತರ ವಿಶ್ವದಾದ್ಯಂತ ನಡೆಯುತ್ತಿರುವ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನಕ್ಕೆ ಸಾಮಿ ಬೆಂಬಲ ನೀಡಿದ್ದರು. ಇದರ ಬೆನ್ನಲ್ಲೇ ಜನಾಂಗೀಯ ನಿಂದನೆಯ ಆರೋಪ ಮಾಡಿದ್ದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮತ್ತು ಸ್ಥಳೀಯ ಕ್ರಿಕೆಟ್ ಸಂಸ್ಥೆಗಳ ಮೇಲೆ ಕಿಡಿಕಾರಿದ್ದಾರೆ.

‘ಸನ್‌ರೈಸರ್ಸ್ ತಂಡದಲ್ಲಿ ಆಡುತ್ತಿದ್ದಾಗ ‍‘ಕಾಲೂ’ ಎಂಬ ಪದ ಬಳಸಿ ಲೇವಡಿ ಮಾಡುತ್ತಿದ್ದರು. ಶ್ರೀಲಂಕಾದ ಆಟಗಾರ ತಿಸಾರ ಪೆರೇರಾ ಅವರನ್ನೂ ಇದೇ ಹೆಸರಿನಿಂದ ಕರೆಯುತ್ತಿದ್ದರು. ‘ಕಾಲೂ’ ಎಂದರೆ ಗಟ್ಟಿಮುಟ್ಟಾದ ಕಪ್ಪು ವ್ಯಕ್ತಿ ಎಂದು ನನಗೆ ಆಗ ಅನಿಸಿತ್ತು. ಆದರೆ ಈಗ ಆ ಪದದ ಅರ್ಥ ನನಗೆ ಗೊತ್ತಾಗಿದೆ’ ಎಂದು ಸಾಮಿ ಬರೆದುಕೊಂಡಿದ್ದಾರೆ. ಆದರೆ ಇದು ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದನ್ನು ಅವರು ಉಲ್ಲೇಖಿಸಲಿಲ್ಲ.

‘ಜಂಟಲ್‌ಮ್ಯಾನ್ಸ್‌ ಗೇಮ್ ಎಂದು ಕರೆಯಲಾಗುವ ಕ್ರಿಕೆಟ್‌ನಲ್ಲೂ ಜನಾಂಗೀಯ ನಿಂದನೆಯ ಕೆಟ್ಟ ಚಾಳಿ ಇದ್ದು ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು’ ಎಂದು ಅವರು ಐಸಿಸಿಯನ್ನು ಕೋರಿದ್ದಾರೆ.

‘ಜನಾಂಗೀಯ ನಿಂದನೆ ಅಮೆರಿಕದಲ್ಲಿ ಮಾತ್ರ ನಡೆಯುತ್ತಿದೆ ಎಂದುಕೊಂಡಿದ್ದೀರಾ? ವಿಶ್ವದ ಇತರ ಕಡೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಐಸಿಸಿಯಾಗಲಿ ಇತರ ಕ್ರಿಕೆಟ್ ಸಂಸ್ಥೆಗಳಾಗಲಿ ಗಮನಿಸಿವೆಯೇ? ನನ್ನಂಥವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಿಜಕ್ಕೂ ನಿಮಗೇನಾದರೂ ಗೊತ್ತಿದೆಯೇ? ಎಂದು ಸಾಮಿ ಪ್ರಶ್ನಿಸಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಇತ್ತೀಚೆಗೆ ಜನಾಂಗೀಯ ನಿಂದನೆಯ ಬಗ್ಗೆ ಮಾತನಾಡಿದ್ದರು. ಕ್ರಿಕೆಟ್‌ನಲ್ಲಿ ಜನಾಂಗೀಯ ನಿಂದನೆ ಇಲ್ಲ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಕೇವಲ ಭ್ರಮೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT