ಸನ್‌ರೈಸರ್ಸ್ ಹೈದರಾಬಾದ್ ಆಡಳಿತ ಮಂಡಳಿ ವಿರುದ್ಧ ವಾರ್ನರ್ ಅಸಮಾಧಾನ: ಕಾರಣವೇನು?
ದುಬೈ: ತಂಡದ ನಾಯಕತ್ವದಿಂದ ಕೆಳಗಿಳಿಸಿದಾಗ ಸೂಕ್ತ ಕಾರಣ ನೀಡಿಲ್ಲ ಎಂದು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಆಡಳಿತ ಮಂಡಳಿ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಎಸ್‌ಆರ್‌ಎಚ್ ತಂಡವನ್ನು ಪ್ರತಿನಿಧಿಸುವುದನ್ನು ನಾನು ಪ್ರೀತಿಸುತ್ತೇನೆ. ಆದರೆ ಅದು ನನ್ನ ಕೈಯಲ್ಲಿಲ್ಲ, ಮಾಲೀಕರ ಕೈಯಲ್ಲಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ವಾರ್ನರ್ ನಾಯಕರಾಗಿದ್ದರು. ಈ ಬಾರಿಯ ಟೂರ್ನಿಯ ಆರಂಭದಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ನ್ಯೂಜಿಲೆಂಡ್‌ನ ಆಟಗಾರ ಕೇನ್ ವಿಲಿಯಮ್ಸನ್ ಅವರಿಗೆ ನಾಯಕನ ಹೊಣೆ ವಹಿಸಲಾಗಿತ್ತು. ಆಡಿದ ಆರು ಪಂದ್ಯಗಳಲ್ಲಿ ಐದರಲ್ಲಿ ಸೋತ ಬಳಿಕ ಈ ಬದಲಾವಣೆ ಮಾಡಲಾಗಿತ್ತು.
ಓದಿ: DC vs KKR Qualifier 2: ಫೈನಲ್ ಪ್ರವೇಶಕ್ಕೆ ರಿಷಭ್–ಮಾರ್ಗನ್ ಜಿದ್ದಾಜಿದ್ದಿ
ಆದರೆ, ನಾಯಕನ ಬದಲಾವಣೆಯಿಂದಲೂ ತಂಡದ ಪ್ರದರ್ಶನ ಉತ್ತಮಗೊಂಡಿರಲಿಲ್ಲ. ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೇ ತಂಡವು ಕೂಟದಿಂದ ನಿರ್ಗಮಿಸಿದೆ. ಈ ವರ್ಷದ ಐಪಿಎಲ್‌ನ ಎರಡನೇ ಅವಧಿಯ ಕೆಲವು ಪಂದ್ಯಗಳಲ್ಲಿ ವಾರ್ನರ್ ಅವರನ್ನು ಆಡುವ ಹನ್ನೊಂದರ ಬಳಗದಿಂದಲೂ ಕೈಬಿಡಲಾಗಿತ್ತು.
‘ಮಾಲೀಕರ, ಟ್ರೆವರ್ ಬೇಲಿಸ್, ಲಕ್ಷ್ಮಣ್, ಮೂಡಿ ಮತ್ತು ಮುರಳಿ ಅವರ ಮೇಲೆ ಅತ್ಯಂತ ಗೌರವ ಇಟ್ಟುಕೊಂಡಿದ್ದೇನೆ. ಆಡಳಿತ ಮಂಡಳಿ ಒಂದು ನಿರ್ಧಾರ ತೆಗೆದುಕೊಂಡಾಗ ಅದು ಸರ್ವಾನುಮತದಿಂದ ಕೂಡಿದ್ದಾಗಿರಬೇಕಲ್ಲವೇ.. ಅದು ನಿಮಗೇ ತಿಳಿದಿರಬೇಕಲ್ಲವೇ’ ಎಂದು ವಾರ್ನರ್ ಪ್ರಶ್ನಿಸಿದ್ದಾರೆ.
ನಾಯಕತ್ವದಿಂದ ವಜಾಗೊಳಿಸುವುದೆಂದರೆ ಅದು ಸ್ವೀಕರಿಸಲು ಕಠಿಣವಾದದ್ದು. ಸುಮಾರು 100 ಪಂದ್ಯಗಳನ್ನು ಫ್ರಾಂಚೈಸಿ ಪರ ಆಡಿದ್ದೆ. ಚೆನ್ನೈಯಲ್ಲಿ ನಡೆದ ಮೊದಲ ಐದು ಪಂದ್ಯಗಳಲ್ಲಿ ಮಾತ್ರ ನಾನು ಕಳಪೆ ಪ್ರದರ್ಶನ ನೀಡಿದ್ದೆ ಅಷ್ಟೆ ಎಂದು ವಾರ್ನರ್ ಹೇಳಿದ್ದಾರೆ.
ನಾಯಕತ್ವದಿಂದ ಕೆಳಗಳಿಸಿದ ನಿರ್ಧಾರ ಅರಗಿಸಿಕೊಳ್ಳಲಾಗದ್ದು. ನನಗೆ ಉತ್ತರ ದೊರೆಯದ ಹಲವು ಪ್ರಶ್ನೆಗಳಿವೆ. ಆದರೂ ನಾನು ಮುಂದುವರಿಯಬೇಕಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.