ಬರೋಡಾ ತೊರೆದ ದೀಪಕ್ ಹೂಡಾ

ವಡೋದರಾ (ಪಿಟಿಐ): ಅನುಭವಿ ಆಲ್‌ರೌಂಡರ್ ದೀಪಕ್ ಹೂಡಾ ಬರೋಡಾ ಕ್ರಿಕೆಟ್ ತಂಡವನ್ನು ತೊರೆದಿದ್ದಾರೆ.
ಹೋದ ಕ್ರಿಕೆಟ್ ಋತುವಿನಲ್ಲಿ ಬರೋಡಾ ತಂಡದ ಕೃಣಾಲ್ ಪಾಂಡ್ಯ ಮತ್ತು ದೀಪಕ್ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಇದೇ ಕಾರಣಕ್ಕಾಗಿ ದೀಪಕ್ ತಂಡದಿಂದ ಹೊರನಡೆದಿದ್ದರು. ಇದೀಗ ಬರೋಡಾ ಕ್ರಿಕೆಟ್ ಸಂಸ್ಥೆಯು ದೀಪಕ್‌ಗೆ ನಿರಾಕ್ಷೇಪಣ ಪತ್ರವನ್ನು ಕೊಟ್ಟಿದೆ. ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಹೋದ ಜನವರಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪೂರ್ವಸಿದ್ಧತಾ ಶಿಬಿರದಲ್ಲಿ ನಾಯಕ ಕೃಣಾಲ್ ಪಾಂಡ್ಯ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಗೌರವಯುತವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿದ್ದ ಹೂಡಾ, ತಂಡದಿಂದ ಹೊರನಡೆದಿದ್ದರು.
ಇದನ್ನು ಕ್ರಿಕೆಟ್ ಆಟಕ್ಕೆ ಅಗೌರವ ಮತ್ತು ಅಶಿಸ್ತಿನ ವರ್ತನೆ ಎಂದು ಪರಿಗಣಿಸಿದ್ದ ಬಿಸಿಎ, ಹೂಡಾ ಅವರನ್ನು ಅಮಾನತು ಮಾಡಿತ್ತು. 2014ರಲ್ಲಿ ಹೂಡಾ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 26 ವರ್ಷದ ಹೂಡಾ 46 ಪಂದ್ಯಗಳಲ್ಲಿ ಆಡಿದ್ದು, 2908 ರನ್ ಗಳಿಸಿದ್ದಾರೆ. ಅದರಲ್ಲಿ ಒಂಬತ್ತು ಶತಕ ಮತ್ತು 15 ಅರ್ಧಶತಕಗಳು ಸೇರಿವೆ. ಆಫ್‌ಸ್ಪಿನ್ ಬೌಲರ್ ಕೂಡ ಆಗಿರುವ ಹೂಡಾ 20 ವಿಕೆಟ್ ಗಳಿಸಿದ್ದಾರೆ.
ಈ ವಿಷಯದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಆಟಗಾರ, ಬರೋಡಾದ ಇರ್ಫಾನ್ ಪಠಾಣ್, ‘ಭಾರತದ ಸಂಭವನೀಯ ತಂಡದ ಪಟ್ಟಿಯಲ್ಲಿರುವ ಆಟಗಾರರನ್ನು ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆಯು ಬಿಟ್ಟುಕೊಡಲು ಒಪ್ಪುತ್ತದೆಯೇ? ಬರೋಡಾ ಕ್ರಿಕೆಟ್‌ಗೆ ಇದು ದೊಡ್ಡ ನಷ್ಟ. ಮುಂದಿನ ಹತ್ತು ವರ್ಷಗಳವರೆಗೂ ಉತ್ತಮವಾಗಿ ಆಡುವ ಸಾಮರ್ಥ್ಯ ಇದೆ‘ ಎಂದರು.
ಇರ್ಫಾನ್ ಸಹೋದರ, ಮಾಜಿ ಆಲ್‌ರೌಂಡರ್ ಯುಸೂಫ್ ಪಠಾಣ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ದೀಪಕ್ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿಯೂ ಉತ್ತಮ ಆಡಬಲ್ಲ ಸಮರ್ಥ ಆಟಗಾರ. ಪಂದ್ಯ ಜಯಿಸಿಕೊಡುವಂತಹ ಆಲ್‌ರೌಂಡರ್ ಆಗಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ‘ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.