ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India vs Australia| ಕಮಿನ್ಸ್ ತಿರುಗೇಟು: ಭಾರತಕ್ಕೆ ‘ಪೆಟ್ಟು‘

ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ ಮುನ್ನಡೆ ಗಳಿಸಿದ ಆಸ್ಟ್ರೇಲಿಯಾ; ಚೇತೆಶ್ವರ್ ಪೂಜಾರ ಅರ್ಧಶತಕ
Last Updated 9 ಜನವರಿ 2021, 12:02 IST
ಅಕ್ಷರ ಗಾತ್ರ

ಸಿಡ್ನಿ: ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡಕ್ಕೆ ನಿರಾಸೆಯೇ ಹೆಚ್ಚು ಕಾಡಿತು.

ಅತ್ಯಂತ ನಿಧಾನಗತಿಯ ಅರ್ಧಶತಕ ದಾಖಲಿಸಿದ ಚೇತೇಶ್ವರ್ ಪೂಜಾರ (50; 176ಎಸೆತ) ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೋರಾಟ ತೋರಲಿಲ್ಲ. ಅದರಲ್ಲಿಯೇ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜ ಚೆಂಡಿನ ಏಟು ತಿಂದು ಗಾಯಗೊಂಡರು.

ಇದೆಲ್ಲದರ ಪರಿಣಾಮವಾಗಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 100.4 ಓವರ್‌ಗಳಲ್ಲಿ 244 ರನ್‌ಗಳಿಗೆ ಆಲೌಟ್ ಆಯಿತು. 94 ರನ್‌ಗಳ ಮುನ್ನಡೆ ಪಡೆದ ಆತಿಥೇಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ, ಮೂರನೇ ದಿನದಾಟದ ಅಂತ್ಯಕ್ಕೆ 29 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 103 ರನ್ ಗಳಿಸಿತು. ಒಟ್ಟು 197 ರನ್‌ಗಳ ಮುನ್ನಡೆ ಗಳಿಸಿದೆ.

ಮಾರ್ನಸ್ ಲಾಬುಷೇನ್ (ಬ್ಯಾಟಿಂಗ್ 47) ಮತ್ತು ಸ್ಟೀವನ್ ಸ್ಮಿತ್ (ಬ್ಯಾಟಿಂಗ್ 29) ಕ್ರೀಸ್‌ನಲ್ಲಿದ್ದಾರೆ. ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದರು. ಲಾಬುಷೇನ್ 91 ರನ್ ಗಳಿಸಿದ್ದರು.

’ಸತ್ವ ಕಳೆದುಕೊಂಡಿರುವ ಪಿಚ್‌ನಲ್ಲಿ 250 ರನ್‌ಗಳು ಗುರಿಯೂ ಕಠಿಣವಾಗಲಿದೆ. ಚೆಂಡು ಅನಿರೀಕ್ಷಿತವಾಗಿ ಪುಟಿಯುತ್ತಿದೆ. ಅಲ್ಲದೇ ಕೆಲವೊಮ್ಮೆ ತೀರಾ ಕೆಳಮಟ್ಟದಲ್ಲಿ ನುಗ್ಗುತ್ತಿದೆ. ಇದು ಬ್ಯಾಟ್ಸ್‌ಮ್‌ಗಳಿಗೆ ಸವಾಲಾಗಲಿದೆ‘ ಎಂದು ವೀಕ್ಷಕ ವಿವರಣೆಯಲ್ಲಿ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಹೇಳಿದ್ದಾರೆ.

ಅದರಿಂದಾಗಿ ಭಾರತ ತಂಡವು ಭಾನುವಾರ ಬೆಳಿಗ್ಗೆ ಆದಷ್ಟು ಬೇಗ ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಬೇಕು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದ ರವೀಂದ್ರ ಜಡೇಜ ಅವರು ಗಾಯಗೊಂಡಿದ್ದು ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿಲ್ಲ.

ಬ್ಯಾಟಿಂಗ್ ಮಾಡುವಾಗ ಅವರ ಹೆಬ್ಬೆರಳಿಗೆ ಚೆಂಡು ಬಡಿದು ಗಾಯವಾಗಿತ್ತು. ನೋವು ಮತ್ತು ಊತ ಇದ್ದ ಕಾರಣ ಅವರನ್ನು ಸ್ಕ್ಯಾನಿಂಗ್‌ಗೆ ಕಳುಹಿಸಲಾಯಿತು. ‌ವಿಕೆಟ್‌ಕೀಪರ್ ರಿಷಭ್ ಪಂತ್ ಕೂಡ ಬ್ಯಾಟಿಂಗ್ ಮಾಡುವಾಗ ಪಕ್ಕೆಲುಬಿಗೆ ಚೆಂಡು ಬಡಿದು ನೋವು ಅನುಭವಿಸಿದರು. ಅವರ ಬದಲಿಗೆ ವೃದ್ಧಿಮಾನ್ ಸಹಾ ಕೀಪಿಂಗ್ ಮಾಡುತ್ತಿದ್ದಾರೆ.

ಕಮಿನ್ಸ್–ಜೋಷ್ ದಾಳಿ: ಪ್ಯಾಟ್ ಕಮಿನ್ಸ್‌ (29ಕ್ಕೆ4) ಮತ್ತು ಜೋಷ್ ಹ್ಯಾಜಲ್‌ವುಡ್ (43ಕ್ಕೆ2) ಅವರ ದಾಳಿಯಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮನ್ನು ಗಾಯಗೊಳ್ಳದಂತೆ ರಕ್ಷಿಸಿಕೊಳ್ಳುವ ಜೊತೆಗೆ ರನ್‌ಗಳನ್ನು ಗಳಿಸಲು ಪರದಾಡಿದರು.

ಇದರ ನಡುವೆಯೇ ಪೂಜಾರ ಅರ್ಧಶತಕ ದಾಖಲಿಸಿದರು. ಆದರೆ ಅವರ ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು. ಇತ್ತ ಸ್ಕೋರ್‌ ಗಳಿಕೆ ನಿಧಾನವಾದಂತೆ ಒತ್ತಡ ಬೆಳೆಯಿತು. ಅದನ್ನು ಸರಿದೂಗಿಸುವ ಯತ್ನದಲ್ಲಿ ಅಜಿಂಕ್ಯ ರಹಾನೆ (22; 70ಎ, 1ಬೌಂ, 1ಸಿ) ಬೇಗನೆ ಔಟಾಗಿದ್ದು ಭಾರತದ ಹಿನ್ನಡೆಗೆ ಕಾರಣವಾಯಿತು. ಹನುಮವಿಹಾರಿ(4; 38ಎಸೆತ) ಅನಗತ್ಯವಾಗಿ ರನ್ ಕದಿಯಲು ಹೋಗಿ ರನ್‌ಔಟ್ ಆದರು. ಕೆಳ ಕ್ರಮಾಂಕದಲ್ಲಿ ಜಡೇಜ ಭರವಸೆಯ ಬ್ಯಾಟಿಂಗ್ ಮಾಡಿದರು. ಆದರೆ ಅವರಿಗೆ ಇನ್ನೊಂದು ಬದಿಯಿಂದ ಸೂಕ್ತ ಬೆಂಬಲ ದೊರೆಯಲಿಲ್ಲ.‌

ಎರಡನೇ ಇನಿಂಗ್ಸ್‌ನ ಆರಂಭದಲ್ಲಿ ಆಸ್ಟ್ರೇಲಿಯಾಕ್ಕೆ ಸಿರಾಜ್ ಮತ್ತು ಅಶ್ವಿನ್ ಪೆಟ್ಟುಕೊಟ್ಟರು. ಕ್ರಮವಾಗಿ ಪುಕೊವಸ್ಕಿ ಮತ್ತು ಡೇವಿಡ್ ವಾರ್ನರ್ ವಿಕೆಟ್‌ಗಳನ್ನು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT