ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL: ಮುಕೇಶ್, ಇಶಾಂತ್ ದಾಳಿಗೆ ಕುಸಿದ ಟೈಟನ್ಸ್- ಡೆಲ್ಲಿ ಕ್ಯಾಪಿಟಲ್ಸ್ ಅಮೋಘ ಜಯ

ಗಿಲ್ ಬಳಗದ ಕಳಪೆ ಬ್ಯಾಟಿಂಗ್‌; ಕೀಪಿಂಗ್‌ನಲ್ಲಿ ಮಿಂಚಿದ ರಿಷಭ್ ಪಂತ್
Published 17 ಏಪ್ರಿಲ್ 2024, 17:55 IST
Last Updated 17 ಏಪ್ರಿಲ್ 2024, 17:55 IST
ಅಕ್ಷರ ಗಾತ್ರ

ಅಹಮದಾಬಾದ್: ವೇಗದ ಜೋಡಿ ಮುಕೇಶ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರ ಅಮೋಘ ಬೌಲಿಂಗ್  ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿತು. 

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 6 ವಿಕೆಟ್‌ಗಳಿಂದ ಆತಿಥೇಯ ಗುಜರಾತ್ ವಿರುದ್ಧ ಜಯಿಸಿತು. ಟಾಸ್ ಗೆದ್ದ ಡೆಲ್ಲಿ   ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಮುಕೇಶ್ (14ಕ್ಕೆ3) ಮತ್ತು ಇಶಾಂತ್ (8ಕ್ಕೆ2) ಅವರ ದಾಳಿಯ ಮುಂದೆ ಗುಜರಾತ್ ತಂಡವು 17.3 ಓವರ್‌ಗಳಲ್ಲಿ 89 ರನ್‌ಗಳ ಅಲ್ಪಮೊತ್ತ ಗಳಿಸಿ ಆಲೌಟ್ ಆಯಿತು. ಈ ಬಾರಿಯ ಐಪಿಎಲ್‌ನಲ್ಲಿ ದಾಖಲಾದ ಕನಿಷ್ಠ ಮೊತ್ತ ಇದು. ಇದಕ್ಕುತ್ತರವಾಗಿ ಡೆಲ್ಲಿ ತಂಡವು 8.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 92 ರನ್‌ ಗಳಿಸಿತು. 

ಗುಜರಾತ್ ತಂಡದ ಎಂಟನೇ ಕ್ರಮಾಂಕದ ಬ್ಯಾಟರ್ ರಶೀದ್ ಖಾನ್ 24 ಎಸೆತಗಳಲ್ಲಿ 31 ರನ್‌ ಗಳಿಸಿದರು. ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರನಾದರು. ಇಡೀ ಇನಿಂಗ್ಸ್‌ನಲ್ಲಿ ದಾಖಲಾದ ಏಕೈಕ ಸಿಕ್ಸರ್‌ ಕೂಡ ರಶೀದ್ ಕಾಣಿಕೆ.  ಈ ಇನಿಂಗ್ಸ್‌ನಲ್ಲಿ ಒಟ್ಟು ಎಂಟು ಬೌಂಡರಿಗಳು ಮಾತ್ರ ದಾಖಲಾದವು. 

ರಶೀದ್ ಬಿಟ್ಟರೆ  ಸಾಯಿ ಸುದರ್ಶನ್ (12; 9ಎ) ಮತ್ತು ರಾಹುಲ್ ತೆವಾಟಿಯಾ (10; 15ಎ) ಅವರಿಬ್ಬರೇ ಎರಡಂಕಿ ಮುಟ್ಟಿದವರು.  ಉಳಿದ ಬ್ಯಾಟರ್‌ಗಳೆಲ್ಲರೂ ವೈಫಲ್ಯ ಅನುಭವಿಸಿದರು. 

ಗುಜರಾತ್ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಗಿಲ್ ವಿಕೆಟ್ ಗಳಿಸಿದ ಇಶಾಂತ್ ತಂಡಕ್ಕೆ ಮೊದಲ ಯಶಸ್ಸು ಗಳಿಸಿಕೊಟ್ಟರು. ನಾಲ್ಕನೇ ಓವರ್‌ನಲ್ಲಿ ಮುಕೇಶ್ ಎಸೆತಕ್ಕೆ ವೃದ್ದಿಮಾನ್ ಸಹಾ ಕ್ಲೀನ್‌ಬೌಲ್ಡ್ ಆದರು. ಸಾಯಿ ಅವರು ರನೌಟ್ ಆಗಿದ್ದು ತಂಡಕ್ಕೆ ಬಿದ್ದ ದೊಡ್ಡ ಪೆಟ್ಟು. ಇಶಾಂತ್ ಬೌಲಿಂಗ್‌ನಲ್ಲಿ ಡೇವಿಡ್ ಮಿಲ್ಲರ್ ಕೂಡ ಔಟಾದರು. ಬೌಲರ್‌ಗಳು ಬಿಗಿಪಟ್ಟು ಸಾಧಿಸಿದರು. ಇದರಿಂದಾಗಿ ಕೇವಲ 48 ರನ್‌ಗಳಿಗೆ 6 ವಿಕೆಟ್‌ಗಳು ಪತನವಾದವು. 

ಡೆಲ್ಲಿ ತಂಡದ ಎಡಗೈ ವೇಗಿ ಖಲೀಲ್ ಅಹಮದ್, ಸ್ಪಿನ್ನರ್ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್‌ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿದರು. 

ಡೆಲ್ಲಿ ತಂಡದ ನಾಯಕ, ವಿಕೆಟ್‌ಕೀಪರ್ ರಿಷಭ್ ಪಂತ್ ಎರಡು ಕಠಿಣ ಕ್ಯಾಚ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೇ ಎರಡು ಚುರುಕಾದ ಸ್ಟಂಪಿಂಗ್ ಕೂಡ ಮಾಡಿದರು.

ಈ ಅಲ್ಪಮೊತ್ತವನ್ನು ರಕ್ಷಿಸಿಕೊಳ್ಳಲು  ಆತಿಥೇಯ ತಂಡದ ಬೌಲರ್‌ಗಳು ಹೋರಾಟ ಮಾಡಿದರು. ಆದರೆ ಸಾಧ್ಯವಾಗಲಿಲ್ಲ. ಡೆಲ್ಲಿ ಆರಂಭಿಕ ಬ್ಯಾಟರ್ ಜೇಕ್ ಫ್ರೆಸರ್ ಮೆಕ್‌ಗುರ್ಕ್ (20; 10ಎ) ಬಿರುಸಿನ ಆರಂಭ ನೀಡಿದರು. ವೇಗಿ ಸಂದೀಪ್ ವಾರಿಯರ್ (40ಕ್ಕೆ2) ಅವರು ಪೃಥ್ವಿ ಶಾ ಮತ್ತು ಅಭಿಷೇಕ್ ಪೊರೆಲ್ ವಿಕೆಟ್‌ಗಳು ಗಳಿಸಿದರು. ರಶೀದ್ ಖಾನ್  ಮತ್ತು ಸ್ಪೆನ್ಸರ್ ಜಾನ್ಸನ್ ಕೂಡ ತಲಾ ಒಂದು ವಿಕೆಟ್ ಪಡೆದರು. 

ರಿಷಭ್ 11 ಎಸೆತಗಳಲ್ಲಿ 16 ರನ್ ಗಳಿಸಿ ಔಟಾಗದೇ ಉಳಿದರು.ತಂಡವನ್ನು ಜಯದ ಗಡಿ ದಾಟಿಸಿದರು. 7ನೇ ಪಂದ್ಯ ಆಡಿದ ಡೆಲ್ಲಿ ತಂಡವು ಮೂರನೇ ಜಯ ಸಾಧಿಸಿತು. ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು. ಗಿಲ್ ಬಳಗಕ್ಕೆ ಇದು ನಾಲ್ಕನೇ ಸೋಲು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT