ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಪಂತ್ ಬಳಗಕ್ಕೆ ಕೋಲ್ಕತ್ತ ಪಂಥಾಹ್ವಾನ

ಡೆಲ್ಲಿ ಕ್ಯಾಪಿಟಲ್ಸ್‌–ನೈಟ್‌ರೈಡರ್ಸ್‌ ಮುಖಾಮುಖಿ ಇಂದು; ರಿಷಭ್, ರಸೆಲ್ ಮೇಲೆ ಕಣ್ಣು
Published 3 ಏಪ್ರಿಲ್ 2024, 0:30 IST
Last Updated 3 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಬ್ಯಾಟಿಂಗ್ ಲಯಕ್ಕೆ ಮರಳಿರುವ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್‌ಎದುರು ಸೆಣಸಲಿದೆ. 

ಡೆಲ್ಲಿ ತಂಡವು ಎರಡು ದಿನಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ‘ಚಾಂಪಿಯನ್’ ಚೆನ್ನೈ ಸೂಪರ್ ಕಿಂಗ್ಸ್  ತಂಡವನ್ನು ಸೋಲಿಸಿತ್ತು. ಮಹೇಂದ್ರಸಿಂಗ್ ಧೋನಿಯ ಭರ್ಜರಿ ಬ್ಯಾಟಿಂಗ್ ಸವಾಲನ್ನೂ ಗೆದ್ದಿದ್ದ ರಿಷಭ್ ಬಳಗ ಟೂರ್ನಿಯಲ್ಲಿ ಪ್ರಥಮ ಜಯ ಸಾಧಿಸಿತ್ತು. 

ಅದರಿಂದಾಗಿ ಅಪಾರ ಆತ್ಮವಿಶ್ವಾಸದಲ್ಲಿರುವ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ಸವಾಲು ಎದುರಿಸಲು ಸಿದ್ಧವಾಗಿದೆ. ಅಯ್ಯರ್ ಬಳಗವು  ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಜಯಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಮೋಘ ಜಯ ಸಾಧಿಸಿರುವ ಅಯ್ಯರ್ ಬಳಗವು ಇಲ್ಲಿಗೆ ಬಂದಿಳಿದಿದೆ. 

ಕೋಲ್ಕತ್ತ ತಂಡದ ಬ್ಯಾಟಿಂಗ್ ವಿಭಾಗವು ಅತ್ಯಂತ ಬಲಿಷ್ಠವಾಗಿದೆ. ಆರಂಭಿಕ ಫಿಲ್ ಸಾಲ್ಟ್ ಅವರಿಂದ ಎಂಟನೇ ಕ್ರಮಾಂಕದ ಆ್ಯಂಡ್ರೆ ರಸೆಲ್ ಅವರವರೆಗೂ ಬ್ಯಾಟಿಂಗ್ ಶಕ್ತಿ ಇದೆ. ಪಂದ್ಯವನ್ನು ಯಾವುದೇ ಪರಿಸ್ಥಿತಿಯಿಂದಲೂ ಗೆಲುವಿನತ್ತ ತಿರುಗಿಸುವ ಸಾಮರ್ಥ್ಯ ಅವರಲ್ಲಿದೆ. ಆದರೆ ಬೌಲಿಂಗ್‌ನಲ್ಲಿ ಮಾತ್ರ ನಿರೀಕ್ಷಿತ ಸಾಮರ್ಥ್ಯ ಮೂಡಿಬರುತ್ತಿಲ್ಲ. ‘ದುಬಾರಿ ಮೌಲ್ಯ’ ಗಳಿಸಿ ತಂಡಕ್ಕೆ ಸೇರಿರುವ ಮಿಚೆಲ್ ಸ್ಟಾರ್ಕ್ ರನ್‌ ಕೊಡುವುದರಲ್ಲಿಯೂ ತುಟ್ಟಿಯಾಗಿದ್ದಾರೆ. ‘ನಿಗೂಢ ಕೌಶಲ’ದ ಸ್ಪಿನ್ನರ್ ವರುಣ್ ಚಕ್ರವರ್ತಿಯ ಮೋಡಿಯೂ ನಡೆಯುತ್ತಿಲ್ಲ. ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ, ಸುನಿಲ್ ನಾರಾಯಣ ಮತ್ತು ರಸೆಲ್ ಅವರನ್ನೇ ನೆಚ್ಚಿಕೊಳ್ಳಬೇಕಿದೆ. 

ಡೆಲ್ಲಿ ತಂಡವು ಇದುವರೆಗೆ ಆಡಿರು ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದೆ. ಆದರೆ ತಂಡವು ಎಲ್ಲ ವಿಭಾಗಗಳಲ್ಲಿಯೂ ಸಮತೋಲನದಿಂದ ಕೂಡಿದೆ. ಪೃಥ್ವಿ ಶಾ, ಡೇವಿಡ್ ವಾರ್ನರ್, ನಾಯಕ ರಿಷಭ್,  ಮಿಚೆಲ್ ಮಾರ್ಷ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಉತ್ತಮ ಲಯದಲ್ಲಿದ್ದಾರೆ. ಎಡಗೈ ವೇಗಿ ಖಲೀಲ್ ಅಹಮದ್, ಅನುಭವಿ ವೇಗಿ ಇಶಾಂತ್ ಶರ್ಮಾ ಹಾಗೂ ಮುಕೇಶ್ ಕುಮಾರ್ ಅವರು ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ಇವರ ಮುಂದೆ ಕೋಲ್ಕತ್ತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಕಠಿಣ ಸವಾಲಂತೂ ಇದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಸಿನಿಮಾ ಆ್ಯಪ್

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ 
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT