ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 DC vs KKR: ಕುಲದೀಪ್ ಮೋಡಿ; ಡೆಲ್ಲಿಗೆ ಜಯ

ಡೇವಿಡ್‌ ವಾರ್ನರ್, ಪೊವೆಲ್‌ ಉತ್ತಮ ಬ್ಯಾಟಿಂಗ್; ಕೋಲ್ಕತ್ತ ನೈಟ್‌ ರೈಡರ್ಸ್‌ಗೆ ನಿರಾಸೆ
Last Updated 28 ಏಪ್ರಿಲ್ 2022, 19:43 IST
ಅಕ್ಷರ ಗಾತ್ರ

ಮುಂಬೈ: ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಸುಲಭ ಗೆಲುವು ಸಾಧಿಸಿತು. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 147 ರನ್‌ ಬೇಕಾಗಿದ್ದ ಡೆಲ್ಲಿ ಇನ್ನೂ ಒಂದು ಓವರ್ ಉಳಿದಿರುವಾಗ ದಡ ಸೇರಿತು.

ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾಗಿದ್ದರು. ಡೇವಿಡ್ ವಾರ್ನರ್, ಲಲಿತ್ ಯಾದವ್, ರೋವ್ಮನ್ ಪೊವೆಲ್ ಮತ್ತು ಅಕ್ಷರ್ ಪಟೇಲ್ ಅವರ ಸಮಯೋಚಿತ ಆಟ ಡೆಲ್ಲಿಗೆ ನಾಲ್ಕು ವಿಕೆಟ್‌ಗಳ ಗೆಲುವು ತಂದುಕೊಟ್ಟಿತು. ಡೆಲ್ಲಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಕೋಲ್ಕತ್ತದ ಎಂಟು ಬೌಲರ್‌ಗಳು ದಾಳಿ ನಡೆಸಿದ್ದರು. ನಾಯಕ ಶ್ರೇಯಸ್ ಅಯ್ಯರ್ ಹಾಕಿದ 19ನೇ ಓವರ್‌ನ ಕೊನೆಯ ಎಸೆತವನ್ನು ಲಾಂಗ್ ಆನ್ ಮೇಲಿಂದ ಸಿಕ್ಸರ್‌ಗೆ ಎತ್ತಿದ ರೋವ್ಮನ್ ಪೊವೆಲ್ ವಿಜಯದ ರನ್ ಸಿಡಿಸಿದರು.

ಕುಲದೀಪ್ ಯಾದವ್ ಸ್ಪಿನ್ ಬಲೆ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ನಾಯಕ ರಿಷಭ್ ಪಂತ್ ಯೋಜನೆ ಫಲಿಸಿತು. ದೊಡ್ಡ ಮೊತ್ತ ಕಲೆ ಹಾಕುವ ಕೋಲ್ಕತ್ತ ನೈಟ್ ರೈಡರ್ಸ್ ಯೋಜನೆಗೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕುಲದೀಪ್ ಅಡ್ಡಿಯಾದರು. ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಬಾಬಾ ಇಂದ್ರಜೀತ್, ಸುನೀಲ್ ನಾರಾಯಣ, 14ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಆ್ಯಂಡ್ರೆ ರಸೆಲ್ ವಿಕೆಟ್‌ಗಳನ್ನು ಕುಲದೀಪ್‌ ಗಳಿಸಿದರು. ಇದರಿಂದಾಗಿ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 146 ರನ್‌ಗಳ ಮೊತ್ತ ಪೇರಿಸಿತು.

ಎರಡನೇ ಓವರ್‌ನಲ್ಲಿ ಚೇತನ್ ಸಕಾರಿಯಾ ಎಸೆತದಲ್ಲಿ ಆ್ಯರನ್ ಫಿಂಚ್ ಕ್ಲೀನ್‌ ಬೌಲ್ಡ್ ಆದರು. ಐದನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಔಟಾದರು. ನಾಯಕ ಶ್ರೇಯಸ್ ಅಯ್ಯರ್ (42; 37ಎ), ನಿತೀಶ್ ರಾಣಾ (57; 34ಎಸೆತ) ಮತ್ತು ರಿಂಕು ಸಿಂಗ್ (23; 16ಎ) ಅವರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಒಂದಂಕಿ ಗಳಿಕೆಗೆ ಕುಸಿದರು.

ಶ್ರೇಯಸ್ ಜೊತೆಗೂಡಿದ ನಿತೀಶ್ ರಾಣಾ ಐದನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿದರು. ಈ ಪಾಲುದಾರಿಕೆ ಆಟವನ್ನೂ ಕುಲದೀಪ್ ಮುರಿದರು. 14ನೇ ಓವರ್‌ನ ಮೊದಲ ಎಸೆತದಲ್ಲಿ ಶ್ರೇಯಸ್ ವಿಕೆಟ್ ಕಬಳಿಸಿದ ಕುಲದೀಪ್, ನಾಲ್ಕನೇ ಎಸೆತದಲ್ಲಿ ‘ಸಿಡಿಲಮರಿ’ಯಂತಹ ಬ್ಯಾಟರ್ ಆ್ಯಂಡ್ರೆ ರಸೆಲ್‌ ವಿಕೆಟ್‌ ಉರುಳಿಸಿದರು.

ಇನ್ನೊಂದು ಬದಿಯಲ್ಲಿ ದಿಟ್ಟ ಆಟ ಆಡುತ್ತಿದ್ದ ನಿತೀಶ್ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸಿಡಿಸಿದರು. 34 ಎಸೆತಗಳಲ್ಲಿ 57 ರನ್ ಗಳಿಸಿದರು. ಅವರಿಗೆ ರಿಂಕು ಸಿಂಗ್ (23; 16ಎ) ಉತ್ತಮ ಜೊತೆ ನೀಡಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದ್ದರಿಂದ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದು ತಪ್ಪಿತು.

ಬಾಬಾ ಇಂದ್ರಜೀತ್ ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT