ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಷ್ಟ ನೀತಿಯೊಂದಿಗೆ ಕಣಕ್ಕೆ ಇಳಿಯಬೇಕು: ನಾಯಕ ಮಹೇಂದ್ರ ಸಿಂಗ್ ಧೋನಿ

Last Updated 26 ಸೆಪ್ಟೆಂಬರ್ 2020, 12:32 IST
ಅಕ್ಷರ ಗಾತ್ರ

ದುಬೈ: ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಎಚ್ಚೆತ್ತುಕೊಂಡಿದ್ದು ಸ್ಟಷ್ಟ ನೀತಿಯೊಂದಿಗೆ ಮುಂದಿನ ಪಂದ್ಯಗಳಲ್ಲಿ ಕಣಕ್ಕೆ ಇಳಿಯಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂಬುದನ್ನು ಅರಿತುಕೊಂಡಿದೆ.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಿದ್ದ ಚೆನ್ನೈ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಮಣಿದಿತ್ತು. ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಹೋರಾಟ ತೋರದೇ ಸೋತಿತು. ಪಂದ್ಯದ ನಂತರ ಮಾತನಾಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ವಿನ್ಯಾಸವನ್ನು ಮರುಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ ಎಂದರು.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದರೂ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಕೈಸುಟ್ಟುಕೊಂಡಿದ್ದರು. ಪೃಥ್ವಿ ಶಾ, ಶಿಖರ್ ಧವನ್‌, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 175 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ 7ಕ್ಕೆ131 ರನ್‌ ಗಳಿಸಿ ಸೋಲೊ‍ಪ್ಪಿಕೊಂಡಿತ್ತು. ಫಾಫ್ ಡು ಪ್ಲೆಸಿ 35 ಎಸೆತಗಳಲ್ಲಿ 43 ರನ್ ಗಳಿಸಿದ್ದು ಬಿಟ್ಟರೆ ಇತರ ಯಾರಿಗೂ ಡೆಲ್ಲಿ ಬೌಲರ್‌ಗಳ ದಾಳಿಗೆ ಎದೆಯೊಡ್ಡಿ ನಿಲ್ಲಲು ಆಗಲಿಲ್ಲ. 44 ರನ್‌ಗಳಿಂದ ಗೆದ್ದ ಡೆಲ್ಲಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿತು.

ಐಪಿಎಲ್‌ ಟೂರ್ನಿಯಲ್ಲಿ ಬಲಿಷ್ಠ ತಂಡಗಳಲ್ಲಿ ಒಂದು ಎಂಬ ಹೆಸರು ಗಳಿಸಿರುವ ಚೆನ್ನೈ ಎರಡು ಪಂದ್ಯಗಳಲ್ಲಿ ಎಲ್ಲ ವಿಭಾಗಗಳಲ್ಲೂ ಕಳೆಗುಂದಿತ್ತು. ಮೊದಲ ಪಂದ್ಯದಲ್ಲಿ 48 ಎಸೆತಗಳಲ್ಲಿ 71 ರನ್ ಗಳಿಸಿದ್ದ ಅಂಬಟಿ ರಾಯುಡು ಅವರು ಮಂಡಿರಜ್ಜು ನೋವಿನಿಂದಾಗಿ ಉಳಿದೆರಡು ಪಂದ್ಯಗಳಲ್ಲಿ ಆಡಲಿಲ್ಲ. ಅವರು ಮುಂದಿನ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಧೋನಿ ತಿಳಿಸಿದರು.

‘ಶುಕ್ರವಾರದ ಪಂದ್ಯದಲ್ಲಿ ಸೋತಿದ್ದು ನಿರಾಸೆ ತಂದಿದೆ. ಮಂಜು ಇರಲಿಲ್ಲ. ಆದರೂ ಪಿಚ್‌ನಲ್ಲಿ ರನ್‌ಗಳು ಹರಿದುಬರಲಿಲ್ಲ. ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಹುರುಪು ಇಲ್ಲದ್ದರಿಂದ ನಿರೀಕ್ಷೆಯಂತೆ ಯಾವುದೂ ನಡೆಯಲಿಲ್ಲ. ಮುಂದಿನ ಪಂದ್ಯಗಳಲ್ಲಿ ಬೌಲರ್‌ಗಳು ಕೂಡ ಹೆಚ್ಚು ಶ್ರಮವಹಿಸಬೇಕಾಗಿದೆ. ಮುಂದಿನ ಪಂದ್ಯದಲ್ಲಿ ಅಂಬಟಿ ರಾಯುಡು ಲಭ್ಯ ಇರುತ್ತಾರೆ. ಅವರ ಉಪಸ್ಥಿತಿ ತಂಡದ ಇತರ ಆಟಗಾರರಿಗೆ ಹುರುಪು ತುಂಬಲಿದೆ’ ಎಂದು ಧೋನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT