ದಿಂಡಾ ಹಣೆಗೆ ಬಡಿದ ಚೆಂಡು

ಕೋಲ್ಕತ್ತ : ಟ್ವೆಂಟಿ–20 ಅಭ್ಯಾಸ ಪಂದ್ಯದ ವೇಳೆ ಬಂಗಾಳ ತಂಡದ ವೇಗದ ಬೌಲರ್ ಅಶೋಕ್ ದಿಂಡಾ ಅವರ ಹಣೆಗೆ ಚೆಂಡು ಬಡಿದಿದೆ.
ಈಡನ್ ಗಾರ್ಡನ್ಸ್ ಅಂಗಳದಲ್ಲಿ ನಡೆದ ಪಂದ್ಯದ ವೇಳೆ ಬೀರೇಂದರ್ ವಿವೇಕ್ ಸಿಂಗ್ ಅವರ ನೇರ ಹೊಡೆತದಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆಯಲು (ಕಾಟ್ ಆ್ಯಂಡ್ ಬೋಲ್ಡ್) ದಿಂಡಾ ಪ್ರಯತ್ನಿಸಿದರು. ಈ ವೇಳೆ ಅವರ ಕೈಗೆ ಬಡಿದ ಚೆಂಡು ರಭಸವಾಗಿ ಬಂದು ಹಣೆಗೆ ತಾಗಿತು. ತಾವು ಹಾಕಿದ ಆ ಓವರ್ ಮುಗಿದ ಕೂಡಲೇ ಡ್ರೆಸಿಂಗ್ ಕೊಠಡಿಗೆ ವಾಪಸಾದ ಅವರನ್ನು ಸಿ.ಟಿ.ಸ್ಕ್ಯಾನ್ಗೆ ಒಳಪಡಿಸಲಾಯಿತು.
‘ದಿಂಡಾ ಅವರ ಹಣೆಗೆ ಗಂಭೀರವಾದ ಪೆಟ್ಟು ಬಿದ್ದಿಲ್ಲ ಎಂಬುದು ಸ್ಕ್ಯಾನಿಂಗ್ನಿಂದ ಖಾತರಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಎರಡು ದಿನ ವಿಶ್ರಾಂತಿ ನೀಡಲಾಗಿದೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಗಾಳ ತಂಡ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಮಿಜೋರಾಂ ಎದುರು ಸೆಣಸಲಿದೆ. ‘ಡಿ’ ಗುಂಪಿನ ಈ ಹೋರಾಟ ಫೆಬ್ರುವರಿ 21ರಂದು ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.