ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಎಲ್. ರಾಹುಲ್‌ಗೆ ವಿಕೆಟ್‌ ಕೀಪಿಂಗ್ ‘ಟೆಸ್ಟ್’

Published 24 ಡಿಸೆಂಬರ್ 2023, 18:45 IST
Last Updated 24 ಡಿಸೆಂಬರ್ 2023, 18:45 IST
ಅಕ್ಷರ ಗಾತ್ರ

ಸೆಂಚುರಿಯನ್ : ಕೆ.ಎಲ್. ರಾಹುಲ್ ಅವರು ದಕ್ಷಿಣ ಆಫ್ರಿಕಾದ ಎದುರಿನ ಟೆಸ್ಟ್ ಸರಣಿಯಲ್ಲಿ ವಿಕೆಟ್‌ ಕೀಪಿಂಗ್ ಕಾರ್ಯನಿರ್ವಹಿಸಲು ತುಂಬು ಆತ್ಮವಿಶ್ವಾದಿಂದ ಇದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

ತಂಡದಲ್ಲಿರುವ ಎರಡನೇ ವಿಕೆಟ್‌ಕೀಪರ್ ಕೆ.ಎಸ್. ಭರತ್ ಅವರು ಬ್ಯಾಟಿಂಗ್‌ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಇಶಾನ್ ಕಿಶನ್ ಅವರು ಸರಣಿಯಿಂದ ವಿಶ್ರಾಂತಿ ಪಡೆದು ತವರಿಗೆ ಮರಳಿದ್ದಾರೆ.  ಆದ್ದರಿಂದ ಕನ್ನಡಿಗ ರಾಹುಲ್ ಅವರೇ ಕೀಪಿಂಗ್ ಹೊಣೆ ನಿಭಾಯಿಸುವುದು ಖಚಿತವಾಗಿದೆ. ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅವರು ಕೀಪಿಂಗ್ ಮಾಡಿದ್ದರು.

‘ಅವರಿಗೆ (ರಾಹುಲ್) ಇದು ಉತ್ತಮ ಅವಕಾಶವಾಗಿದೆ. ಅಲ್ಲದೇ ಸವಾಲು ಕೂಡ. ವಿಭಿನ್ನವಾಗಿರುವುದನ್ನು ಮಾಡುವ ಅವಕಾಶವೂ ಅವರಿಗೆ ಲಭಿಸಲಿದೆ. ಇಶಾನ್ ಲಭ್ಯರಿಲ್ಲ. ಈಗಿರುವ ಇಬ್ಬರಲ್ಲಿ ರಾಹುಲ್ ಅವರು ನಮ್ಮ ಆಯ್ಕೆ‘ ಎಂದು ದ್ರಾವಿಡ್ ಹೇಳಿದರು.

‘ಅವರು ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಹೆಚ್ಚು ಕೀಪಿಂಗ್ ಮಾಡಿಲ್ಲದಿರಬಹುದು. ಆದರೆ, 50 ಓವರ್‌ಗಳ ಮಾದರಿಯಲ್ಲಿ ಕೀಪಿಂಗ್ ನಿರ್ವಹಿಸಿದ ಅನುಭವ ಅವರಿಗೆ ಇದೆ.ಕಳೆದ ಐದಾರು ತಿಂಗಳಲ್ಲಿ ಅವರು ಬಹಳಷ್ಟು ಶ್ರಮಪಟ್ಟು ಸಿದ್ಧರಾಗಿದ್ದಾರೆ’ ಎಂದು ದ್ರಾವಿಡ್ ಭರವಸೆ ವ್ಯಕ್ತಪಡಿಸಿದರು.

‘ರಾಹುಲ್ ಅವರು ಕೀಪಿಂಗ್ ಹೊಣೆ ನಿಭಾಯಿಸುವುದರಿಂದ ಹನ್ನೊಂದರ ಬಳಗದಲ್ಲಿ ಇನ್ನೊಬ್ಬ ಹೆಚ್ಚುವರಿ ಬ್ಯಾಟರ್‌ಗೆ ಅವಕಾಶ ಲಭಿಸಲಿದೆ‘ ಎಂದರು.

ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆ ಇದೆ.

‘ಸಮತೋಲಿತ ತಂಡವನ್ನು ಕಣಕ್ಕಿಳಿಸುವುದು ನಮ್ಮ ಗುರಿ. ಇಬ್ಬರು ಸ್ಪಿನ್ನರ್ ಮತ್ತು ಮೂವರು ವೇಗಿಗಳ ಸಂಯೋಜನೆಯೊಂದಿಗೆ ಕಣಕ್ಕಿಳಿಯಬಹುದು. ನಮಗೆ ಬೇಕಾದರೆ ನಾಲ್ವರು ವೇಗಿಗಳನ್ನೂ ಕಣಕ್ಕಿಳಿಸಬಹುದು. ಪರಿಸ್ಥಿತಿಗೆ ತಕ್ಕಂತೆ ತಂಡ ರಚಿಸಬಹುದು. ಆದರೆ ಹವಾಮಾನ ನಿಯಂತ್ರಣ ನಮ್ಮಕೈಯಲ್ಲಿ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT