ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್: ಸೆಮಿಫೈನಲ್‌ ಪ್ರವೇಶಿಸಿದ ಆಸ್ಟ್ರೇಲಿಯಾ

ರಚೆಲ್–ಅಲಿಸಾ ದ್ವಿಶತಕದ ಜೊತೆಯಾಟ; ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು
Last Updated 30 ಮಾರ್ಚ್ 2022, 11:27 IST
ಅಕ್ಷರ ಗಾತ್ರ

ವೆಲಿಂಗ್ಟನ್: ವೆಸ್ಟ್ ಇಂಡೀಸ್ ಎದುರು ಸಂಪೂರ್ಣ ಪಾರಮ್ಯ ಮೆರೆದ ಆಸ್ಟ್ರೇಲಿಯಾ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಬೇಸಿನ್ ರಸರ್ವ್‌ನಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 157 ರನ್‌ಗಳಿಂದ ಜಯ ಗಳಿಸಿತು.

ಆರಂಭಿಕ ಬ್ಯಾಟರ್ ಅಲಿಸಾ ಹೀಲಿ (129; 107 ಎಸೆತ, 17 ಬೌಂಡರಿ, 1 ಸಿಕ್ಸರ್) ಅವರ ಸ್ಫೋಟಕ ಶತಕ ಮತ್ತು ರಚೆಲ್ ಹೇನ್ಸ್ (85; 100 ಎ, 9 ಬೌಂ) ಅವರೊಂದಿಗೆ ಮೊದಲ ವಿಕೆಟ್‌ಗೆ ಸೇರಿಸಿದ 216 ರನ್‌ಗಳು ತಂಡಕ್ಕೆ ಭರ್ಜರಿ ಗೆಲುವಿಗೆ ಕಾರಣವಾಯಿತು.

ಮಳೆಯಿಂದಾಗಿ 45 ಓವರ್‌ಗಳಿಗೆ ಸೀಮಿತಗೊಳಿಸಲಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕಿ ಸ್ಟೆಫಾನಿ ಟೇಲರ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಎಲ್ಲ ಬೌಲರ್‌ಗಳನ್ನೂ ಆಸ್ಟ್ರೇಲಿಯಾ ಬ್ಯಾಟರ್‌ಗಳುದಂಡಿಸಿದರು. ಹೀಗಾಗಿ ಕೇವಲ ಮೂರು ವಿಕೆಟ್ ಕಳೆದುಕೊಂಡು ತಂಡ 305 ರನ್ ಕಲೆ ಹಾಕಿತು.

ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 37 ಓವರ್‌ಗಳಲ್ಲಿ ಸೋಲೊಪ್ಪಿಕೊಂಡಿತು. ತಂಡ ಎಂಟು ವಿಕೆಟ್‌ ಕಳೆದುಕೊಂಡು 148 ರನ್ ಗಳಿಸಿತು. ಕೊನೆಯ ಇಬ್ಬರು ಬ್ಯಾಟರ್‌ಗಳು ಗಾಯಗೊಂಡಿದ್ದ ಕಾರಣ ಕ್ರೀಸ್‌ಗೆ ಇಳಿಯಲಿಲ್ಲ.

12 ರನ್ ಗಳಿಸುವಷ್ಟರಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ತಲಾ 34 ರನ್ ಗಳಿಸಿದ ಡಿಯಾಂಡ್ರ ದೊತಿನ್ ಮತ್ತು ಹಯೆಲಿ ಮ್ಯಾಥ್ಯೂಸ್ ಭರವಸೆ ಮೂಡಿಸಿದರು. ದೊತಿನ್ ಔಟಾದ ನಂತರ ಸ್ಟೆಫಾನಿ ಟೇಲರ್ ಸ್ವಲ್ಪ ಪ್ರತಿರೋಧ ತೋರಿದರು. ಕೊನೆಯ ನಾಲ್ಕು ಮಂದಿ ಒಂದಂಕಿ ಮೊತ್ತಕ್ಕೆ ಔಟಾದರು.

ಜಿಟಿಜಿಟಿ ಮಳೆ ಮತ್ತು ಇಬ್ಬನಿಯ ಕಾರಣ ಒಂದು ತಾಸು 45 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿಯರ ಬ್ಯಾಟಿಂಗ್ ವೈಭವ ಅನಾವರಣಗೊಂಡಿತು. ಪವರ್‌ಪ್ಲೇ ಅವಧಿಯಲ್ಲಿ 37 ರನ್ ಕಲೆ ಹಾಕಿದ ಆರಂಭಿಕ ಜೋಡಿ ನಂತರ ಚುರುಕಿನ ಬ್ಯಾಟಿಂಗ್ ಮೂಲಕ ರನ್ ಪ್ರವಾಹ ಹರಿಸಿದರು.

ಮೊದಲ 10 ಓವರ್ ಮುಗಿದಾಗ 25 ಎಸೆತಗಳಲ್ಲಿ 10 ರನ್ ಮಾತ್ರ ಗಳಿಸಿದ್ದ ಹೀಲಿ ನಂತರ ಸ್ಫೋಟಕ ಬ್ಯಾಟಿಂಗ್ ಮಾಡಿದರು. 63 ಎಸೆತಗಳಲ್ಲಿ ಅವರ ಅರ್ಧಶತಕ ಪೂರ್ಣಗೊಂಡಿತು. ನಂತರದ 50 ರನ್‌ಗಳಿಗೆ ಅವರು ತೆಗೆದುಕೊಂಡದ್ದು ಕೇವಲ 28 ಎಸೆತ. ಈ ಮೂಲಕ ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದರು.

ಗಾಯಾಳು ಅನಿಸಾ ಮೊಹಮ್ಮದ್ ಬದಲಿಗೆ ಫೀಲ್ಡಿಂಗ್ ಮಾಡಿದ ಶಕೇರ ಸೆಲ್ಮನ್ ಡೈವ್ ಮಾಡಿ ಪಡೆದ ಕ್ಯಾಚ್‌ಗೆ ಅಲಿಸಾ ವಿಕೆಟ್ ಕಳೆದುಕೊಂಡರು. 36ನೇ ಓವರ್‌ನಲ್ಲಿ ಎರಡು ವಿಕೆಟ್ ಉರುಳಿಸಿ ಚಿನೆಲಿ ಹೆನ್ರಿ ತಿರುಗೇಟು ನಿಡುವ ಪ್ರಯತ್ನ ಮಾಡಿದರು. ಓವರ್‌ನ ಮೊದಲ ಎಸೆತದಲ್ಲಿ ರಚೆಲ್ ಹೇನ್ಸ್ ಅವರನ್ನು ವಾಪಸ್ ಕಳುಹಿಸಿದ ಚಿನೆಲಿ ಕೊನೆಯ ಎಸೆತದಲ್ಲಿ ಆ್ಯಶ್ಲಿ ಗಾರ್ಡನರ್ ವಿಕೆಟ್ ಉರುಳಿಸಿದರು. ಗಾರ್ಡನರ್ ಅವರಿಗೆ ಏಳನೇ ಕ್ರಮಾಂಕದಿಂದ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು.

ನಾಯಕಿ ಮೆಗ್ ಲ್ಯಾನಿಂಗ್ ಜೊತೆಗೂಡಿ ಬೇತ್ ಮೂನಿ ಇನಿಂಗ್ಸ್ ಮುನ್ನಡೆಸಿದರು. ಮುರಿಯದ ನಾಲ್ಕನೇ ವಿಕೆಟ್‌ಗೆ 69 ರನ್‌ ಸೇರಿಸಿದ ಅವರು ತಂಡದ ಮೊತ್ತವನ್ನು 300 ದಾಟಿಸಿದರು. ಮಹಿಳೆಯರ ವಿಶ್ವಕಪ್‌ ಟೂರ್ನಿಯ ನಾಕೌಟ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಮೊತ್ತ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT