ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್ ಟ್ರೋಫಿ: ಹನುಮವಿಹಾರಿ ಪಡೆಗೆ ಫೈನಲ್ ರಹದಾರಿ

ಮಯಂಕ್ ಗೆಲುವಿನ ರೂವಾರಿ; ಉತ್ತರ ವಲಯದ ’ವಿಳಂಬ ತಂತ್ರ‘ಕ್ಕೆ ದಕ್ಷಿಣ ತಿರುಗೇಟು
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ, ಗಾಳಿ, ಉತ್ತರ ವಲಯದ ಬೌಲರ್‌ಗಳ ದಾಳಿ ಹಾಗೂ ವಿಳಂಬ ತಂತ್ರಗಳನ್ನು ಮೆಟ್ಟಿನಿಂತ ದಕ್ಷಿಣ ವಲಯ ತಂಡವು ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ರೋಚಕ ಜಯ ಸಾಧಿಸಿತು. ಫೈನಲ್‌ಗೆ ಲಗ್ಗೆಯಿಟ್ಟಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶನಿವಾರ ದಿನದಾಟದ ಬಹುತೇಕ ಸಮಯವು ಮಳೆಗೆ ವ್ಯರ್ಥವಾಯಿತು. ಆದರೂ ಮಯಂಕ್ ಅಗರವಾಲ್ (54; 57ಎ, 4X7) ಮತ್ತು ಹನುಮವಿಹಾರಿ (43; 42ಎ, 4X8) ಉತ್ತಮ ಅಡಿಪಾಯ ಹಾಕಿದರು. ಇದರಿಂದಾಗಿ ತಂಡವು 2 ವಿಕೆಟ್‌ಗಳ ಗೆಲುವು ಸಾಧಿಸಿತು. ಆದರೆ ಪಂದ್ಯದ ಕೊನೆಯ ಅರ್ಧಗಂಟೆಯ ಆಟದಲ್ಲಿ ಹತ್ತಾರು ನಾಟಕೀಯ ತಿರುವುಗಳಿದ್ದವು. ಸಂಜೆ ದಕ್ಷಿಣದ ಬ್ಯಾಟರ್ ಸಾಯಿಕಿಶೋರ್ ’ವಿಜಯದ ಸಿಕ್ಸರ್‌‘ ಬಾರಿಸುವವರೆಗೂ ಫಲಿತಾಂಶವು ತೂಗುಯ್ಯಾಲೆಯಾಗಿತ್ತು.

ಚಹಾ ವಿರಾಮಕ್ಕೂ ಕೆಲಹೊತ್ತಿನ ಮುನ್ನ ಮಳೆ ಸುರಿದಿದ್ದರಿಂದ ಆಟ ಸ್ಥಗಿತವಾದಾಗ ದಕ್ಷಿಣ ವಲಯ ತಂಡಕ್ಕೆ ಗೆಲುವಿಗಾಗಿ 32 ರನ್‌ಗಳು ಅವಶ್ಯಕವಾಗಿದ್ದವು. ತಂಡವು 183 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್‌ನಲ್ಲಿ ತಿಲಕ್ ವರ್ಮಾ (18 ರನ್) ಮತ್ತು ರಿಕಿ ಭುಯ್ (33) ಇದ್ದರು. ಮಧ್ಯಾಹ್ನ 3.50ಕ್ಕೆ ಆಟ ಮರುಆರಂಭವಾಯಿತು. ಜಯಂತ್ ಯಾದವ್ ನಾಯಕತ್ವದ ಉತ್ತರ ತಂಡವು ಹನುಮವಿಹಾರಿ ಬಳಗದ ಮೇಲೆ ‘ಸರ್ವ ರೀತಿ‘ಯಿಂದಲೂ ಒತ್ತಡ ಹೇರಿತು. ಕಾರ್ಮೋಡಗಳೂ ತೇಲುತ್ತಿದ್ದ ಕಾರಣ ಮಳೆ ಬರುವ ಅಥವಾ ಬೆಳಕು ಮಂದವಾಗುವ ನಿರೀಕ್ಷೆಯಲ್ಲಿದ್ದ ಜಯಂತ್ ಬಳಗವು ಸಮಯ ವ್ಯರ್ಥ ಮಾಡುವ ತಂತ್ರಗಳನ್ನೂ ಅನುಸರಿಸಿತು. ಬೌಲರ್‌ ನಾಯಕನ ಮಾತುಕತೆ, ಅಂಪೈರ್ ಜೊತೆಗೆ ಚರ್ಚೆ ಮತ್ತು ಅಪೀಲ್‌ಗಳನ್ನು ಮಾಡುತ್ತ ಬ್ಯಾಟರ್‌ಗಳ ಏಕಾಗ್ರತೆಗೆ ಭಂಗ ತರುವ ಪ್ರಯತ್ನ ಮಾಡಿದರು.  ಮೊದಲ ಇನಿಂಗ್ಸ್‌ನಲ್ಲಿ ಮೂರು ರನ್‌ಗಳ ಮುನ್ನಡೆ ಗಳಿಸಿದ್ದರಿಂದ ಪಂದ್ಯ ಡ್ರಾ ಆದರೂ ಉತ್ತರ ವಲಯಕ್ಕೆ ಫೈನಲ್ ಅರ್ಹತೆ ಲಭಿಸುತ್ತಿತ್ತು.

ಇದನ್ನು ಅರಿತಿದ್ದ ಬ್ಯಾಟರ್‌ಗಳು ದೊಡ್ಡ ಹೊಡೆತಗಳಿಗೆ ಕೈಹಾಕಿದರು. ಬೌಲರ್ ಹರ್ಷಿತ್ ರಾಣಾ ಆಫ್‌ಸ್ಟಂಪ್‌ ಹೊರಗೆ ಬೌನ್ಸರ್‌ಗಳನ್ನು ಹಾಕುತ್ತ ಬ್ಯಾಟರ್‌ಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು. ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್‌ಗಳನ್ನೂ ಕಬಳಿಸಿದರು. ಬಲ್ತೇಜ್ ಸಿಂಗ್ ಕೂಡ ಇದೇ ತಂತ್ರ ಅನುಸರಿಸಿ ರಿಕಿ ಭುಯ್ ವಿಕೆಟ್ ಪಡೆದರು. ಆದರೆ ಸಾಯಿ (ಔಟಾಗದೆ 15) ಶಾಂತಚಿತ್ತರಾಗಿ ಆಡಿದರು. ಅವರಿಗೆ ಕೆ.ವಿ. ಶಶಿಕಾಂತ್ (9 ರನ್) ಉತ್ತಮ ಜೊತೆ ನೀಡಿದರು. ಒಂದು ಮತ್ತು ಎರಡು ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಸಾಯಿ ಎರಡು ಮತ್ತು ಶಶಿಕಾಂತ್ ಒಂದು ಸಿಕ್ಸರ್ ಹೊಡೆದಿದ್ದು ತಂಡದ ಜಯಕ್ಕೆ ಕಾರಣವಾದವು. ವಿಜಯಕ್ಕೆ ಎರಡು ರನ್‌ಗಳ ಅಗತ್ಯವಿದ್ದಾಗ ಶಶಿಕಾಂತ್ ಅವರು ಸಿಂಗ್ ಬೌಲಿಂಗ್‌ನಲ್ಲಿ ಔಟಾದಾಗ ಆತಂಕ ಉಂಟಾಗಿತ್ತು. ಕೊನೆಯಲ್ಲಿ ವಿಜಯಕುಮಾರ್ ವೈಶಾಖ ಮೂರು ಎಸೆತಗಳನ್ನು ಎದುರಿಸಿ ವಿಕೆಟ್ ಉಳಿಸಿಕೊಂಡರು. 37ನೇ ಓವರ್‌ನ ಮೊದಲ ಎಸೆತವನ್ನು ಸಾಯಿ ಸಿಕ್ಸರ್‌ಗೆ ಎತ್ತಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ವಲಯ: 58.3 ಓವರ್‌ಗಳಲ್ಲಿ198. ದಕ್ಷಿಣ ವಲಯ: 54.4 ಓವರ್‌ಗಳಲ್ಲಿ 195. ಎರಡನೇ ಇನಿಂಗ್ಸ್: ಉತ್ತರ ವಲಯ: 56.4 ಓವರ್‌ಗಳಲ್ಲಿ 211. ದಕ್ಷಿಣ ವಲಯ: 36.1 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 219 (ಸಾಯಿ ಸುದರ್ಶನ್ 17, ಮಯಂಕ್ ಅಗರವಾಲ್ 54, ಹನುಮವಿಹಾರಿ 43, ರಿಕಿ ಭುಯ್ 34, ತಿಲಕ್ ವರ್ಮಾ 25, ಸಾಯಿಕಿಶೋರ್ 15, ಹರ್ಷಿತ್ ರಾಣಾ 84ಕ್ಕೆ3, ಬಲ್ತೇಜ್ ಸಿಂಗ್ 47ಕ್ಕೆ2, ವೈಭವ್ ಅರೋರಾ 46ಕ್ಕೆ2, ಜಯಂತ್ ಯಾದವ್ 38ಕ್ಕೆ1) ಫಲಿತಾಂಶ: ದಕ್ಷಿಣ ವಲಯಕ್ಕೆ 2 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಮಯಂಕ್ ಅಗರವಾಲ್

South Zone
South Zone

ಫೈನಲ್‌ಗೆ ಪಶ್ಚಿಮ ವಲಯ

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ ಡ್ರಾ ಅಯಿತು. ಕೇಂದ್ರ ವಲಯದ ವಿರುದ್ಧದ ಈ ಪಂದ್ಯದಲ್ಲಿ ಮೊದಲ ಇನಿಂ ಗ್ಸ್‌ ಮುನ್ನಡೆ ಸಾಧಿಸಿದ್ದ  ಪಶ್ಚಿಮ ವಲಯ ತಂಡವು ಫೈನಲ್‌ ಪ್ರವೇಶಿಸಿತು.

261 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕೇಂದ್ರ ವಲಯವು 35 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 128 ರನ್ ಗಳಿಸಿತು. ಈ ನಡುವೆ ಮಳೆಯಿಂದಾಗಿ ಪಂದ್ಯದಲ್ಲಿ ಕೆಲ ಸಮಯ ಆಟ ನಿಂತಿತ್ತು. ಮಧ್ಯಾಹ್ನ ಪಶ್ಚಿಮ ತಂಡದ ನಾಯಕ ಪೃಥ್ವಿ ಶಾ ಅವರು ಪಂದ್ಯ ಡ್ರಾ ಮಾಡಿಕೊಳ್ಳಲು ಸಮ್ಮತಿಸಿದ್ದರು.

2022ರಲ್ಲಿಯೂ ಪಶ್ಚಿಮ ಮತ್ತು ದಕ್ಷಿಣ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈಗ ಮತ್ತೊಮ್ಮೆ ಪ್ರಶಸ್ತಿಗಾಗಿ ಸೆಣಸಲಿವೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಶ್ಚಿಮ ವಲಯ: 92.6 ಓವರ್‌ಗಳಲ್ಲಿ 220. ಕೇಂದ್ರ ವಲಯ: 31 ಓವರ್‌ಗಳಲ್ಲಿ 128. ಎರಡನೇ ಇನಿಂಗ್ಸ್: ಪಶ್ಚಿಮ ವಲಯ: 93.2 ಓವರ್‌ಗಳಲ್ಲಿ 297. ಕೇಂದ್ರ ವಲಯ: 35 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 128 (ರಿಂಕು ಸಿಂಗ್ 40 ಉಪೇಂದ್ರ ಯಾದವ್ ಔಟಾಗದೆ 18) ಪಂದ್ಯ ಡ್ರಾ.

‘ತಂತ್ರಗಾರಿಕೆ ಸರ್ವೇಸಾಮಾನ್ಯ‘

’ಉತ್ತರ ವಲಯ ತಂಡವು ಕೊನೆಯ ಹಂತದಲ್ಲಿ ಸಮಯ ವ್ಯರ್ಥ ಮಾಡುವ ತಂತ್ರವನ್ನು ಅನುಸರಿಸುತ್ತಾರೆಂಬುದು ನಮಗೆ ಮೊದಲೇ ಗೊತ್ತಿತ್ತು. ಅದಕ್ಕೆ ತಿರುಗೇಟು ನೀಡಲು ನಾವೂ ಸಿದ್ಧರಾಗಿದ್ದೆವು.  ಪಂದ್ಯದಲ್ಲಿ ಇದೆಲ್ಲವೂ ಸಾಮಾನ್ಯ. ಅವರ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಮಾಡುತ್ತಿದ್ದೆ‘ ಎಂದು ದಕ್ಷಿಣ ವಲಯ ತಂಡದ ನಾಯಕ ಹನುಮವಿಹಾರಿ ಹೇಳಿದರು.

’ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಇಂತಹ ತಂತ್ರಗಾರಿಕೆಗಳೂ ನಡೆಯುತ್ತವೆ. ಅದೆಲ್ಲವನ್ನೂ ಮೀರಿ ನಿಂತು ಸಾಧಿಸಿದ ಗೆಲುವು ತೃಪ್ತಿ ಮತ್ತು ಸಂತೋಷ ನೀಡುತ್ತದೆ. ಇವತ್ತು ಮಯಂಕ್ ಅಗರವಾಲ್ ಉತ್ತಮ ಆಟದಿಂದ ಗೆಲುವು ಸಾಧ್ಯವಾಗಿದೆ‘ ಎಂದರು.

ಈ ಪಂದ್ಯದಲ್ಲಿ ಮಯಂಕ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದರು. ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದೇ 12ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT