ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್ ಟ್ರೋಫಿ: ವಿಹಾರಿ ಬಳಗಕ್ಕೆ ಗೆಲುವೊಂದೇ ದಾರಿ

ಎರಡನೇ ದಿನ ಮಳೆಯ ಆಟವೇ ಹೆಚ್ಚು; ಮಯಂಕ್ ಅರ್ಧಶತಕ; ಉತ್ತರ ವಲಯಕ್ಕೆ 3 ರನ್ ಮುನ್ನಡೆ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ಇಡೀ ದಿನ ಮಳೆಯ ಆಟದ ನಡುವೆ ಕ್ರಿಕೆಟ್ ಕೂಡ ನಡೆಯಿತು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನ  ಎರಡನೇ ದಿನ ಕೇವಲ 49 ಓವರ್‌ಗಳ ಆಟ ನಡೆಯಿತು. ಮೂರು ಬಾರಿ ಮಳೆಯಿಂದಾಗಿ ಆಟ ಸ್ಥಗಿತವಾಯಿತು. ಇದರಿಂದಾಗಿ ಸುಮಾರು ಎರಡೂವರೆ ಗಂಟೆಗಳ ಅವಧಿಯ ಆಟವು ಮಳೆಗೆ ಆಹುತಿಯಾಯಿತು.

ಇದೆಲ್ಲದರ ನಡುವೆ ಮಯಂಕ್ ಅಗರವಾಲ್ (76; 115ಎಸೆತ, 4X10) ಮತ್ತು ತಿಲಕ್ ವರ್ಮಾ (46; 101ಎ, 4X5)  ಹೋರಾಟ ಮಾಡಿದರೂ ದಕ್ಷಿಣ ವಲಯ ತಂಡವು 3 ರನ್‌ಗಳ ಹಿನ್ನಡೆ ಅನುಭವಿಸಿತು. ಇದರಿಂದಾಗಿ ತಂಡವು ಫೈನಲ್ ತಲುಪಬೇಕಾದರೆ ಉತ್ತರ ವಲಯವನ್ನು ಸೋಲಿಸಲೇಬೇಕಾದ ಒತ್ತಡದಲ್ಲಿದೆ. 

ಎರಡನೇ ಇನಿಂಗ್ಸ್‌ ಆರಂಭಿಸಿರುವ ಉತ್ತರ ವಲಯವು 11 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 51 ರನ್ ಗಳಿಸಿದೆ. ದಕ್ಷಿಣ ತಂಡದ ವೈಶಾಖ ವಿಜಯಕುಮಾರ್ ಮತ್ತು ವಿದ್ವತ್  ಕಾವೇರಪ್ಪ ತಲಾ ಒಂದು ವಿಕೆಟ್ ಗಳಿಸಿದ್ದಾರೆ.  ಉತ್ತರ ತಂಡದ ಅಂಕಿತ್ ಖಲ್ಸಿ (ಬ್ಯಾಟಿಂಗ್ 21) ಮತ್ತು ಪ್ರಭಸಿಮ್ರನ್ ಸಿಂಗ್ (ಬ್ಯಾಟಿಂಗ್ 6) ಕ್ರೀಸ್‌ನಲ್ಲಿದ್ದಾರೆ.

50 ರನ್ 6 ವಿಕೆಟ್: ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯವು ಆರಂಭಿಕ ಕುಸಿತ ಅನುಭವಿಸಿದ್ದ ನಂತರ ಮಯಂಕ್ ಅಗರವಾಲ್ ಮತ್ತು ತಿಲಕ್ ವರ್ಮಾ ಆಸರೆಯಾಗಿದ್ದರು. ಐದನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ ಗಳಿಸಿದ 110 ರನ್‌ಗಳಿಂದಾಗಿ ತಂಡವು ಮುನ್ನಡೆಯತ್ತ ಸಾಗುವ ಭರವಸೆ ಮೂಡಿತ್ತು.

ಆದರೆ, ಮಧ್ಯಮವೇಗಿ ವೈಭವ್ ಅರೋರಾ ಹಾಗೂ ಆಫ್‌ಸ್ಪಿನ್ನರ್ ಜಯಂತ್ ಯಾದವ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ದಕ್ಷಿಣ ತಂಡವು 50 ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಶತಕದ ಹಾದಿಯಲ್ಲಿದ್ದ ಮಯಂಕ್ ಅವರ ವಿಕೆಟ್ ಗಳಿಸಿದ ಜಯಂತ್ ಇನಿಂಗ್ಸ್‌ಗೆ ಪ್ರಮುಖ ತಿರುವು ನೀಡಿದರು. ತಿಲಕ್ ವರ್ಮಾ ಮತ್ತು ಸಾಯಿಕಿಶೋರ್ (21 ರನ್) ಒಂದಿಷ್ಟು ಹೋರಾಟ ಮಾಡಿದರು. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿರುವ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ತಿಲಕ್ ವರ್ಮಾ ಇಲ್ಲಿ ನಾಲ್ಕು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಆದರೆ ಉಳಿದ ಬ್ಯಾಟರ್‌ಗಳು ತಾಳ್ಮೆಯಿಂದ ಆಡಲಿಲ್ಲ. ಇದು ಹಿನ್ನಡೆಗೆ ಕಾರಣವಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ವಲಯ: 58.3 ಓವರ್‌ಗಳಲ್ಲಿ 198. ದಕ್ಷಿಣ ವಲಯ: 54.4 ಓವರ್‌ಗಳಲ್ಲಿ 195 (ಮಯಂಕ್ ಅಗರವಾಲ್ 76, ತಿಲಕ್ ವರ್ಮಾ 46, ರವಿಶ್ರೀನಿವಾಸನ್ ಸಾಯಿಕಿಶೋರ್ 21, ಬಲ್ತೇಜ್ ಸಿಂಗ್ 40ಕ್ಕೆ2, ವೈಭವ್ ಅರೋರಾ 57ಕ್ಕೆ3, ಹರ್ಷಿತ್ ರಾಣಾ 41ಕ್ಕೆ2, ಜಯಂತ್ ಯಾದವ್ 38ಕ್ಕೆ3) ಎರಡನೇ ಇನಿಂಗ್ಸ್:  ಉತ್ತರ ವಲಯ: 11 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 51 (ಪ್ರಶಾಂತ್ ಚೋಪ್ರಾ 19, ಅಂಕಿತ್ ಖಲ್ಸಿ ಬ್ಯಾಟಿಂಗ್ 21, ಪ್ರಭಸಿಮ್ರನ್ ಸಿಂಗ್ ಬ್ಯಾಟಿಂಗ್ 6, ವಿದ್ವತ್ ಕಾವೇರಪ್ಪ 17ಕ್ಕೆ1, ವೈಶಾಖ ವಿಜಯಕುಮಾರ್ 23ಕ್ಕೆ1)

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯವನ್ನು ಗುರುವಾರ ವೀಕ್ಷಿಸಿದ ಭಾರತ ತಂಡದ ಆಟಗಾರ ರಿಷಭ್ ಪಂತ್. ಕೆಲವು ತಿಂಗಳುಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಆರೈಕೆಯಲ್ಲಿದ್ದಾರೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯವನ್ನು ಗುರುವಾರ ವೀಕ್ಷಿಸಿದ ಭಾರತ ತಂಡದ ಆಟಗಾರ ರಿಷಭ್ ಪಂತ್. ಕೆಲವು ತಿಂಗಳುಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಆರೈಕೆಯಲ್ಲಿದ್ದಾರೆ –ಪ್ರಜಾವಾಣಿ ಚಿತ್ರ

ಪೂಜಾರ, ಸೂರ್ಯ ಅರ್ಧಶತಕ

ಮಧ್ಯಮವೇಗಿ ಅರ್ಜನ್ ನಾಗವಸವಲ್ಲಾ (74ಕ್ಕೆ5) ಅವರ ಅಮೋಘ ಬೌಲಿಂಗ್‌ ಬಲದಿಂದ ಪಶ್ಚಿಮ ವಲಯ ತಂಡವು ಕೇಂದ್ರ ವಲಯದ ಎದುರು ಮೊದಲ ಇನಿಂಗ್ಸ್‌ನಲ್ಲಿ 96 ರನ್‌ಗಳ ಮುನ್ನಡೆ ಗಳಿಸಿತು.

ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಗುರುವಾರ ದಿನದಾಟದ ಕೊನೆಗೆ ಪಶ್ಚಿಮ ವಲಯವು ಒಟ್ಟು 241 ರನ್‌ಗಳ ಮುನ್ನಡೆ ಗಳಿಸಿದೆ.

ಭಾರತ ತಂಡದ ಬ್ಯಾಟರ್‌ಗಳಾದ ಚೇತೆಶ್ವರ್ ಪೂಜಾರ (ಬ್ಯಾಟಿಂಗ್ 50; 103ಎ) ಮತ್ತು ಸೂರ್ಯಕುಮಾರ್ ಯಾದವ್ (52; 58ಎ 4X8 6X1) ಅವರ ಅರ್ಧಶತಕಗಳ ಬಲದಿಂದ ತಂಡವು ಎರಡನೇ ಇನಿಂಗ್ಸ್‌ನಲ್ಲಿ 39 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 149 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಉತ್ತರ ವಲಯದ ನಾಯಕ ಮತ್ತು ಮಧ್ಯಮವೇಗಿ ಶಿವಂ ಮಾವಿ (43ಕ್ಕೆ6) ಅಮೋಘ ಬೌಲೀಂಗ್‌ ನಿಂದಾಗಿ ಪಶ್ಚಿಮ ತಂಡವು 220 ರನ್‌ಗಳಿಗೆ ಆಲೌಟ್ ಆಯಿತು. ಆದರೆ ಕೇಂದ್ರ ತಂಡವು ಕೇವಲ 128 ರನ್‌ಗಳಿಗೆ ಆಲೌಟ್ ಆಗಲು ಅರ್ಜನ್ ಕಾರಣರಾದರು. ತಂಡದ ಧ್ರುವ ಜುರೇಲ್ (46; 55ಎ) ರಿಂಕು ಸಿಂಗ್ (48ರನ್) ಮತ್ತು ಸೌರಭ್ ಕುಮಾರ್ (12 ರನ್) ಬಿಟ್ಟರೆ ಉಳಿದ ಬ್ಯಾಟರ್‌ಗಳು ಎರಡಂಕಿ ಮುಟ್ಟಲಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್:  ಪಶ್ಚಿಮ ವಲಯ: 92.5 ಓವರ್‌ಗಳಲ್ಲಿ 220 (ಆತಿಥ್ ಶೇಠ್ 74 ಧರ್ಮೆಂದ್ರಸಿಂಹ ಜಡೇಜ 39 ಚಿಂತನ್ ಗಜ  ಔಟಾಗದೆ 14 ಶಿವಂ ಮಾವಿ 43ಕ್ಕೆ6) ಕೇಂದ್ರ ವಲಯ: 31 ಓವರ್‌ಗಳಲ್ಲಿ 128 (ಧ್ರುವ್ ಜುರೇಲ್ 46 ರಿಂಕು ಸಿಂಗ್ 48 ಅರ್ಜನ್ ನಾಗವಸ್ವಲಾ 74ಕ್ಕೆ5 ಚಿಂತನ್ ಗಜ 25ಕ್ಕೆ2 ಅತಿಥ್ ಶೇಠ್ 27ಕ್ಕೆ3). ಎರಡನೇ ಇನಿಂಗ್ಸ್: ಪಶ್ಚಿಮ ವಲಯ: 39 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 149 (ಪೃಥ್ವಿ ಶಾ 25 ಚೇತೆಶ್ವರ್ ಪೂಜಾರ ಬ್ಯಾಟಿಂಗ್ 50 ಸೂರ್ಯಕುಮಾರ್ ಯಾದವ್ 52 ಸೌರಭ್ ಕುಮಾರ್ 34ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT