ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Duleep Trophy Final 2023: ವಿದ್ವತ್ ಬಿರುಗಾಳಿಗೆ ನಡುಗಿದ ಪಶ್ಚಿಮ

ದುಲೀಪ್ ಟ್ರೋಫಿ ಫೈನಲ್: ಪೃಥ್ವಿ ಶಾ ಅರ್ಧಶತಕ; ವೈಶಾಖಗೆ ಎರಡು ವಿಕೆಟ್
Published 13 ಜುಲೈ 2023, 15:46 IST
Last Updated 13 ಜುಲೈ 2023, 15:46 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ವತ್ ಕಾವೇರಪ್ಪ ಬಿರುಗಾಳಿ ವೇಗದ ದಾಳಿಗೆ ತತ್ತರಿಸಿದ ಪಶ್ಚಿಮ ವಲಯವು ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದ ಎರಡನೇ ದಿನದಾಟದಲ್ಲಿಯೇ ಮೊದಲ ಇನಿಂಗ್ಸ್‌ ಹಿನ್ನಡೆ ಅನುಭವಿಸುವ ಸಾಧ್ಯತೆಯನ್ನು ಮಳೆ ತಪ್ಪಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುರುವಾರ ದಕ್ಷಿಣ ವಲಯವು ಗಳಿಸಿದ್ದ 213 ರನ್‌ಗಳಿಗೆ ಉತ್ತರ ನೀಡುವ ಹಾದಿಯಲ್ಲಿ ಹಾಲಿ ಚಾಂಪಿಯನ್ ಪಶ್ಚಿಮ ವಲಯ ತಡಬಡಾಯಿಸಿದೆ. ವೇಗಿ ವಿದ್ವತ್ ತಮ್ಮ ಮೂರನೇ ಸ್ಪೆಲ್‌ನಲ್ಲಿ (10–3–22–4) ಪಶ್ಚಿಮ ವಲಯಕ್ಕೆ ಆಘಾತ ನೀಡಿದರು. ಮಂದ ಬೆಳಕು ಮತ್ತು ಮಳೆಯಿಂದಾಗಿ ದಿನದಾಟ ಮುಕ್ತಾಯವಾದಾಗ ತಂಡವು 45 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 129 ರನ್‌ ಗಳಿಸಿತು. ಆತಿಥ್ ಸೇಠ್ (ಬ್ಯಾಟಿಂಗ್ 5) ಮತ್ತು ಧರ್ಮೇಂದ್ರಸಿಂಹ ಜಡೇಜ (ಬ್ಯಾಟಿಂಗ್ 4) ಕ್ರೀಸ್‌ನಲ್ಲಿದ್ದಾರೆ. ಪೃಥ್ವಿ ಶಾ (65; 101ಎ) ಅವರೊಬ್ಬರೇ ಏಕಾಂಗಿ ಹೋರಾಟ ನಡೆಸಿದರು.

ಪಂದ್ಯದ ಮೊದಲ ದಿನವಾದ ಬುಧವಾರ ಸಂಜೆ ಮಂದಬೆಳಕಿನಿಂದಾಗಿ ಆಟ ನಿಂತಾಗಲೂ ದಕ್ಷಿಣ ವಲಯದ ಪರಿಸ್ಥಿತಿ ಇದೇ ರೀತಿ ಇತ್ತು. ತಂಡವು 65 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 182 ರನ್‌ ಗಳಿಸಿತ್ತು. ಆಗ ಕ್ರೀಸ್‌ನಲ್ಲಿ ಒಂಬತ್ತು ರನ್‌ ಗಳಿಸಿದ್ದ ವಾಷಿಂಗ್ಟನ್ ಸುಂದರ್ (ಬ್ಯಾಟಿಂಗ್ 9) ಮತ್ತು ಐದು ರನ್ ಗಳಿಸಿದ್ದ ವೈಶಾಖ ವಿಜಯಕುಮಾರ್ ಇದ್ದರು. ಎರಡನೇ ದಿನದಾಟದಲ್ಲಿ ವಾಷಿಂಗ್ಟನ್ ತಮ್ಮ ಮೊತ್ತಕ್ಕೆ ಮತ್ತೆ 13 ರನ್‌ ಸೇರಿಸಿದರು. ವೈಶಾಖ ಮತ್ತೆ ಎಂಟು ರನ್ ಹೊಡೆದರು. ಇದರಿಂದಾಗಿ ತಂಡದ ಮೊತ್ತವು 200ರ ಗಡಿ ದಾಟಿತು.

ಕನ್ನಡಿಗರ ಕಮಾಲ್: ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ವಿದ್ವತ್, ವೈಶಾಖ ವಿಜಯಕುಮಾರ್ (29ಕ್ಕೆ2) ಮತ್ತು ವಿ. ಕೌಶಿಕ್ (26ಕ್ಕೆ1) ಅವರು ಪಶ್ಚಿಮ ವಲಯದ ಘಟಾನುಘಟಿ ಬ್ಯಾಟರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದರು.

ಪರಿಣಾಮಕಾರಿ ಶಾರ್ಟ್‌ಪಿಚ್ ಎಸೆತಗಳು, ಸ್ವಿಂಗ್ ಮತ್ತು ನೇರ ಎಸೆತಗಳ ಮೂಲಕ ವಿದ್ವತ್ ಮಿಂಚಿದರು. ಅವರು ತಮ್ಮ ಮೊದಲ ಎರಡು ಸ್ಪೆಲ್‌ಗಳಲ್ಲಿ ಒಟ್ಟು ಆರು ಓವರ್‌ಗಳನ್ನು ಮಾಡಿದ್ದರು. ಆದರೆ ಮೂರನೇ ಸ್ಪೆಲ್‌ನಲ್ಲಿ ಅವರ ಬೌಲಿಂಗ್ ರಂಗೇರಿತು. ಪೃಥ್ವಿ ಶಾ ಅವರೊಂದಿಗೆ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 70 ರನ್ ಗಳಿಸಿದ ಹರ್ವಿಕ್ ದೇಸಾಯಿ (21 ರನ್), ಸೂರ್ಯಕುಮಾರ್ ಯಾದವ್, ಸೆಮಿಫೈನಲ್‌ನಲ್ಲಿ ಶತಕ ಗಳಿಸಿದ್ದ ಚೇತೆಶ್ವರ್ ಪೂಜಾರ ಮತ್ತು ಸರ್ಫರಾಜ್ ಖಾನ್ ವಿಕೆಟ್‌ಗಳನ್ನು ಕಬಳಿಸುವಲ್ಲಿ ವಿದ್ವತ್ ಯಶಸ್ವಿಯಾದರು.

ಕರ್ನಾಟಕದವರೇ ಆದ ಆರ್. ಸಮರ್ಥ್ ಚುರುಕಾಗಿ ಜಿಗಿದು ಪಡೆದ ಕ್ಯಾಚ್‌ಗೆ ಚೇತೆಶ್ವರ್ ಪೂಜಾರ (9 ರನ್) ಔಟಾದರು. ಸರ್ಫರಾಜ್ ಖಾತೆ ತೆರೆಯುವ ಮುನ್ನವೇ ವಿದ್ವತ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಇನ್ನೊಂದೆಡೆ ವೈಶಾಖ ಅವರು ಅರ್ಧಶತಕ ಗಳಿಸಿದ್ದ ಪೃಥ್ವಿ ಶಾ ವಿಕೆಟ್ ಗಳಿಸಿದ್ದು ಪಶ್ಚಿಮ ವಲಯಕ್ಕೆ ದೊಡ್ಡ ಪೆಟ್ಟಾಯಿತು. ಬೌಂಡರಿಲೈನ್‌ನಲ್ಲಿ ಕ್ಯಾಚ್ ಪೃಥ್ವಿಯ ಕ್ಯಾಚ್ ಪಡೆಯುವಲ್ಲಿ ವಿದ್ವತ್ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ವಲಯ: 78.4 ಓವರ್‌ಗಳಲ್ಲಿ 213 (ವಾಷಿಂಗ್ಟನ್ ಸುಂದರ್ 22, ವೈಶಾಖ ವಿಜಯಕುಮಾರ್ 13, ಅರ್ಜನ್ ನಾಗಸವಾಲಾ 62ಕ್ಕೆ2, ಚಿಂತನ್ ಗಜ 27ಕ್ಕೆ2, ಶಮ್ಸ್ ಮುಲಾನಿ 29ಕ್ಕೆ2) ಪಶ್ಚಿಮ ವಲಯ: 45 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 129 (ಪೃಥ್ವಿ ಶಾ 65, ಹಾರ್ವಿಕ್ ದೇಸಾಯಿ 21, ವಿದ್ವತ್ ಕಾವೇರಪ್ಪ 44ಕ್ಕೆ4, ವೈಶಾಖ ವಿಜಯಕುಮಾರ್ 29ಕ್ಕೆ2)

ಆಕರ್ಷಕ ಕ್ಯಾಚ್ ಪಡೆದ ದಕ್ಷಿಣ ವಲಯದ  ಆರ್. ಸಮರ್ಥ್ ಸೊನ್ನೆ ಸುತ್ತಿದ ಸರ್ಫರಾಜ್ ಖಾನ್ ಮಳೆಯಿಂದಾಗಿ ಸುಮಾರು ಎರಡು ಗಂಟೆ ಆಟ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT