ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಿಂದ ಡ್ವೇನ್‌ ಬ್ರಾವೊ ಹೊರಕ್ಕೆ

Last Updated 21 ಅಕ್ಟೋಬರ್ 2020, 12:32 IST
ಅಕ್ಷರ ಗಾತ್ರ

ದುಬೈ: ಉತ್ತಮ ಸಾಮರ್ಥ್ಯ ತೋರಲು ಪರದಾಡುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ತೊಡೆನೋವಿನಿಂದ ಬಳಲುತ್ತಿರುವ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಐಪಿಎಲ್‌ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಚೆನ್ನೈ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್‌ ಈ ವಿಷಯ ತಿಳಿಸಿದ್ದಾರೆ.

37 ವರ್ಷದ ವೆಸ್ಟ್‌ ಇಂಡೀಸ್‌ ಆಟಗಾರ, ಬಹಳ ವರ್ಷಗಳಿಂದ ಚೆನ್ನೈ ತಂಡದ ಭಾಗವಾಗಿದ್ದಾರೆ. ಇದೇ 17ರಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಎದುರುಶಾರ್ಜಾದಲ್ಲಿ ನಡೆದ ಪಂದ್ಯದ ಕೊನೆಯ ಓವರ್‌ ಬೌಲಿಂಗ್‌ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಚೆನ್ನೈ ನಾಯಕ ಮಹೇಂದ್ರ ಸಿಂಗ್‌ ಧೋನಿ ಚೆಂಡನ್ನು ಆಲ್‌ರೌಂಡರ್‌ ರವೀಂದ್ರ ಜಡೇಜ ಅವರಿಗೆ ನೀಡಿದ್ದರು.

ಆ ಓವರ್‌ನಲ್ಲಿ ಡೆಲ್ಲಿ ತಂಡದ ಅಕ್ಷರ್‌ ಪಟೇಲ್‌ ಮೂರು ಸಿಕ್ಸರ್‌ ಸಿಡಿಸಿದ್ದರು.ತಮ್ಮ ತಂಡವನ್ನು ಜಯದ ಗಡಿ ದಾಟಿಸಿದ್ದರು.

ಈ ಬಾರಿಯ ಐಪಿಎಲ್‌ನಲ್ಲಿ ಆರು ಪಂದ್ಯಗಳನ್ನು ಆಡಿದ್ದ ಬ್ರಾವೊ, ಎರಡು ಇನಿಂಗ್ಸ್‌ಗಳಿಂದ ಏಳು ರನ್‌ ಗಳಿಸಿದ್ದರು. 8.57 ಎಕಾನಮಿ ರೇಟ್‌ನಲ್ಲಿ ಆರು ವಿಕೆಟ್‌ ಕೂಡ ಕಬಳಿಸಿದ್ದರು.

10 ಪಂದ್ಯಗಳಲ್ಲಿ ಆರು ಸೋಲು ಅನುಭವಿಸಿರುವ ಚೆನ್ನೈ ತಂಡದ ಪ್ಲೇ ಆಫ್‌ ಕನಸು ಕ್ಷೀಣಿಸಿದೆ. ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ಆ ತಂಡ ಕೊನೆಯ ಸ್ಥಾನದಲ್ಲಿದೆ.

ಟೂರ್ನಿಯ ಆರಂಭದಲ್ಲೇ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಹಾಗೂ ಆಫ್‌ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅವರು ವೈಯಕ್ತಿಕ ಕಾರಣ ನೀಡಿ ತಂಡದಿಂದ ನಿರ್ಗಮಿಸಿದ್ದರು. ಅನುಭವಿ ಆಟಗಾರರಾದ ನಾಯಕ ಧೋನಿ ಹಾಗೂ ಕೇದಾರ್‌ ಜಾಧವ್‌ ಅವರ ಕಳಪೆ ಫಾರ್ಮ್‌ ಕೂಡ ತಂಡದಲ್ಲಿ ಚಿಂತೆ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT