ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ 93ನೇ ವಾರ್ಷಿಕ ಸರ್ವಸದಸ್ಯರ ಸಭೆ ಭಾನುವಾರ ಇಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಗೆ ಭಾರತದ ಇಬ್ಬರು ಪ್ರತಿನಿಧಿಗಳ ಆಯ್ಕೆ ಮಾಡಲಾಗುವುದು.
ಜಕ್ಕೂರು ಸಮೀಪ ನಿರ್ಮಾಣವಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೂತನ ಕಟ್ಟಡ ಹಾಗೂ ಸೌಲಭ್ಯಗಳ ಉದ್ಘಾಟನೆ ಭಾನುವಾರ ನಡೆಯಲಿದೆ. ಈ ಸಂದರ್ಭದಲ್ಲಿ ದೇಶದ ಪ್ರಮುಖ ಕ್ರಿಕೆಟಿಗರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಾರ್ಷಿಕ ಸಭೆಯನ್ನೂ ಆಯೋಜಿಸಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಮುಖ್ಯಸ್ಥರಾಗಿ ಅಯ್ಕೆಯಾಗಿದ್ದು ಡಿಸೆಂಬರ್ 1ರಂದು ತೆರಳಲಿದ್ದಾರೆ. ಆದ್ದರಿಂದ ಬಿಸಿಸಿಐ ಕಾರ್ಯದರ್ಶಿ ಹುದ್ದೆಯು ತೆರವಾಗಲಿದೆ. ಹೊಸಕಾರ್ಯದರ್ಶಿ ನೇಮಕದ ಕುರಿತು ಬೆಂಗಳೂರು ಸಭೆಯ ವಿಷಯಸೂಚಿಯಲ್ಲಿ ಉಲ್ಲೇಖವಾಗಿಲ್ಲ.
ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಐಸಿಸಿ ವಾರ್ಷಿಕ ಸರ್ವಸದಸ್ಯರ ಸಭೆ (ಎಜಿಎಂ) ನಡೆಯುವುರಿಂದ ಬೆಂಗಳೂರಿನ ಬಿಸಿಸಿಐ ಸಭೆಗೆ ಮಹತ್ವ ಬಂದಿದೆ. ಸೌರವ್ ಗಂಗೂಲಿ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಐಸಿಸಿಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸುತ್ತಿದ್ದರು. ಅವರು ಅಧ್ಯಕ್ಷ ಹುದ್ದೆಯಿಂದ ಕೆಳಿಗಿಳಿದ ನಂತರ ಜಯ್ ಶಾ ಅವರು ಐಸಿಸಿ ಸಭೆಯಲ್ಲಿ ಪ್ರತಿನಿಧಿಸುತ್ತಿದ್ದರು. ಹೋದ ಜುಲೈನಲ್ಲಿ ಕೊಲಂಬೊದಲ್ಲಿ ನಡೆದ ಸಭೆಯಲ್ಲಿ ಜಯ್ ಶಾ ಭಾಗವಿಹಿಸಿದ್ದರು.
ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಅವರು ಕೂಡ ಪರ್ಯಾಯ ನಿರ್ದೇಶಕರಾಗಿದ್ದಾರೆ. ಐಸಿಸಿ ಸಭೆಗಳಲ್ಲಿ ಬಿಸಿಸಿಐ ಪ್ರತಿನಿಧಿಯಾಗಿ ಭಾಗವಹಿಸಬಹುದು. ಆದರೆ ಅವರು ಇದುವರೆಗೂ ಈ ಅವಕಾಶವನ್ನು ಬಳಸಿಕೊಂಡಿಲ್ಲ. ಅವರ ಕಾರ್ಯಾವಧಿಯು ಇನ್ನೊಂದು ವರ್ಷ ಉಳಿದಿದೆ. ಬಿನ್ನಿ ಅವರೇ ಪರ್ಯಾಯ ನಿರ್ದೇಶಕರಾಗುಳಿಯುವರೇ ಅಥವಾ ಎಜಿಎಂ ಸಭೆಯಲ್ಲಿ ನಾಮನಿರ್ದೇಶನಗೊಂಡ ವ್ಯಕ್ತಿಯನ್ನು ನಿರ್ದೇಶಕರನ್ನಾಗಿ ಮಾಡಲಾಗುವುದೇ ಎಂಬುದನ್ನು ಕಾದುನೋಡಬೇಕು.
ಇನ್ನು ಶಾ ಅವರ ಸ್ಥಾನಕ್ಕೆ ಗುಜರಾತ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅನಿಲ್ ಪಟೇಲ್, ಡೆಲ್ಲಿ ಮತ್ತು ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅರುಣ ಜೇಟ್ಲಿ ಅವರ ಹೆಸರು ಕೇಳಿಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.