ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ENG vs PAK: ರಾವಲ್ಪಿಂಡಿಯಲ್ಲಿ ರನ್‌ ರಾಶಿ: ವಿಶ್ವದಾಖಲೆ ಬರೆದ ಇಂಗ್ಲೆಂಡ್

Last Updated 1 ಡಿಸೆಂಬರ್ 2022, 20:15 IST
ಅಕ್ಷರ ಗಾತ್ರ

ರಾವಲ್ಪಿಂಡಿ: ಜ್ಯಾಕ್ ಕ್ರಾವ್ಲಿ (122), ಬೆನ್ ಡಕೆಟ್ (107), ಒಲಿ ಪೊಪ್ (108) ಹಾಗೂ ಹ್ಯಾರಿ ಬ್ರೂಕ್ (101*) ಅಮೋಘ ಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ಆತಿಥೇಯ ಪಾಕಿಸ್ತಾನ ವಿರುದ್ಧ ರಾವಿಲ್ಪಿಂಡಿಯಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ 75 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 506 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಿನವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವೆಂಬ ಖ್ಯಾತಿಗೆ ಪಾತ್ರವಾಯಿತು. 1910ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಆರು ವಿಕೆಟ್ ನಷ್ಟಕ್ಕೆ 494 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಅಷ್ಟೇ ಯಾಕೆ ಮೊದಲ ದಿನದಾಟದಲ್ಲೇ ಇಂಗ್ಲೆಂಡ್‌ನ ನಾಲ್ವರು ಬ್ಯಾಟರ್‌ಗಳು ಶತಕ ಸಿಡಿಸುವ ಮೂಲಕ ದಾಖಲೆಗೆ ಭಾಜನರಾದರು.

ಇಂಗ್ಲೆಂಡ್ ಆಟಗಾರರ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಪಂದ್ಯ ನಡೆಯುವುದು ಅನುಮಾನವೆನಿಸಿತ್ತು. ಅಲ್ಲದೆ ಪಂದ್ಯ ಆರಂಭಕ್ಕೂ ಎರಡು ತಾಸಿಗೂ ಮುನ್ನವಷ್ಟೇ ಈ ಕುರಿತು ಖಚಿತತೆ ಬಂದಿತ್ತು.

ಬಳಿಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಬೆನ್ ಸ್ಟೋಕ್ಸ್ ನಿರ್ಧಾರವನ್ನು ಸರಿಯೆಂದು ಸಾಬೀತು ಮಾಡಿದ ಜ್ಯಾಕ್ ಕ್ರಾವ್ಲಿ ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟ (233) ಕಟ್ಟಿದರು.

ಕ್ರಾವ್ಲಿ 111 ಎಸೆತಗಳಲ್ಲಿ 122 ರನ್ ಗಳಿಸಿ (21 ಬೌಂಡರಿ) ಅಬ್ಬರಿಸಿದರು. 86 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಕ್ರಾವ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ವೇಗದ ಶತಕ ಗಳಿಸಿದ ಆರಂಭಿಕ ಬ್ಯಾಟರ್ ಎನಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಬೆನ್ ಡಕೆಟ್ 107 ರನ್ (110 ಎಸೆತ, 15 ಬೌಂಡರಿ) ಗಳಿಸಿದರು.

ಬಳಿಕ ಕ್ರೀಸಿಗಿಳಿದ ಒಲಿ ಪೊಪ್ ಸಹ 104 ಎಸೆತಗಳಲ್ಲಿ 108 ರನ್ (14 ಬೌಂಡರಿ) ಗಳಿಸಿ ಪಾಕ್ ಬೌಲರ್‌ಗಳನ್ನು ದಂಡಿಸಿದರು.

ದಿನದ ಕೊನೆಯ ಅವಧಿಯಲ್ಲಿ ಅಬ್ಬರಿಸಿದ ಬ್ರೂಕ್ ಕೇವಲ 80 ಎಸೆತಗಳಲ್ಲಿ ಚೊಚ್ಚಲ ಶತಕ ಗಳಿಸಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಮೂರನೇ ವೇಗದ ಶತಕ ಗಳಿಸಿದರು.

81 ಎಸೆತಗಳನ್ನು ಎದುರಿಸಿದ ಬ್ರೂಕ್ 14 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ಬೆನ್ ಸ್ಟೋಕ್ಸ್ 15 ಎಸೆತಗಳಲ್ಲಿ 34 ರನ್ ಗಳಿಸಿ (6 ಬೌಂಡರಿ, 1 ಸಿಕ್ಸರ್) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು.

ಈ ಪೈಕಿ ಚೊಚ್ಚಲ ಟೆಸ್ಟ್ ಆಡುತ್ತಿರುವ ಸವೂದ್ ಶಕೀಲ್ ಓವರ್‌ವೊಂದರ ಎಲ್ಲ ಆರು ಎಸೆತಗಳನ್ನು ಬೌಂಡರಿಗಟ್ಟಿದ ಬ್ರೂಕ್ ತನ್ನ ಸಾಮರ್ಥ್ಯವನ್ನು ಮೆರೆದರು.

ಒಟ್ಟಿನಲ್ಲಿ 17 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಕ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್, ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು ಸ್ಮರಣೀಯವಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT