ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಪಾಕಿಸ್ತಾನ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ರೋಚಕ ಗೆಲುವು

ಬಟ್ಲರ್‌ ಶತಕ; ಸೌಥಾಂಪ್ಟನ್‌ನಲ್ಲಿ ರನ್ ಮಳೆ

Published:
Updated:
Prajavani

ಸೌಥಾಂಪ್ಟನ್ (ಎಎಫ್‌ಪಿ): ಜೋಸ್ ಬಟ್ಲರ್ ಸಿಡಿಸಿದ ಅಮೋಘ ಶತಕದ ಬಲದಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ರೋಚಕ 12 ರನ್‌ಗಳಿಂದ ಗೆದ್ದಿತು. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ಮೂರು ವಿಕೆಟ್ ಕಳೆದುಕೊಂಡು 373 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ 7ಕ್ಕೆ 361 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್ ಆರಿಸಿಕೊಂಡಿತ್ತು. ಆದರೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪ್ರವಾಸಿ ತಂಡದ ಲೆಕ್ಕಾಚಾರ ಬುಡಮೇಲು ಮಾಡಿದರು. ಆರಂಭಿಕ ಜೋಡಿ ಜೇಸನ್ ರಾಯ್ (87; 98 ಎಸೆತ, 3 ಸಿಕ್ಸರ್‌, 6 ಬೌಂಡರಿ) ಮತ್ತು ಜಾನಿ ಬೇಸ್ಟೊ (51; 45 ಎ, 6 ಬೌಂ) ಮೊದಲ ವಿಕೆಟ್‌ಗೆ 115 ರನ್ ಸೇರಿಸಿದರು.

ಜೋ ರೂಟ್ (40; 54 ಎ, 3 ಬೌಂ) ಮತ್ತು ಎಯಾನ್ ಮಾರ್ಗನ್‌ (71; 48 ಎ, 1 ಸಿ, 6 ಬೌಂ ) ಕೂಡ ಮಿಂಚಿನ ಬ್ಯಾಟಿಂಗ್ ಮಾಡಿದರು. ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಬಟ್ಲರ್ 55 ಎಸೆತಗಳಲ್ಲಿ 110 ರನ್‌ ಗಳಿಸಿದರು. ಒಂಬತ್ತು ಭರ್ಜರಿ ಸಿಕ್ಸರ್‌ಗಳು ಮತ್ತು ಆರು ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿ ಒಳಗೊಂಡಿದ್ದವು. ಮುರಿಯದ ನಾಲ್ಕನೇ ವಿಕೆಟ್‌ಗೆ ಮಾರ್ಗನ್ ಮತ್ತು ಬಟ್ಲರ್‌ 162 ರನ್‌ ಕಲೆ ಹಾಕಿದರು.

ಫಕ್ರ್ ಜಮಾನ್ ಶತಕ: ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ಕೂಡ ಕೆಚ್ಚೆದೆಯಿಂದ ಆಡಿದರು. ಮೊದಲ ವಿಕೆಟ್‌ಗೆ ಇಮಾಮ್ ಉಲ್ ಹಕ್ ಮತ್ತು ಫಕ್ರ್ ಜಮಾನ್ (138; 106 ಎ, 4 ಸಿ, 12 ಬೌಂ) 92 ರನ್ ಸೇರಿಸಿದರು. ಬಾಬರ್ ಆಜಂ ಮತ್ತು ಆಸಿಫ್ ಅಲಿ ತಲಾ ಅರ್ಧಶತಕ ಗಳಿಸಿ ಮಿಂಚಿದರು. ಅಂತಿಮ ಓವರ್‌ಗಳಲ್ಲಿ ಸರ್ಫರಾಜ್ ಅಹಮ್ಮದ್ ಛಲ ಬಿಡದೆ ಕಾದಾಡಿ ಅಜೇಯ 41 ರನ್‌ ಸಿಡಿಸಿದರು. ಆದರೆ ತಂಡವನ್ನು ಜಯದ ಗಡಿ ದಾಟಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 3ಕ್ಕೆ 373 (ಜೇಸನ್ ರಾಯ್ 87, ಜಾನಿ ಬೇಸ್ಟೊ 51, ಜೋ ರೂಟ್ 40, ಇಯಾನ್ ಮಾರ್ಗನ್ ಅಜೇಯ 71, ಜಾಸ್ ಬಟ್ಲರ್‌ ಅಜೇಯ 110); ಪಾಕಿಸ್ತಾನ: 50 ಓವರ್‌ಗಳಲ್ಲಿ 7ಕ್ಕೆ 361 (ಫಕ್ರ್ ಜಮಾನ್ 138, ಬಾಬರ್ ಆಜಂ 51, ಆಸಿಫ್ ಅಲಿ 51, ಸರ್ಫರಾಜ್ ಅಹಮ್ಮದ್ ಅಜೇಯ 41; ವಿಲಿ 57ಕ್ಕೆ2, ಲಿಯಾನ್ ಪ್ಲಂಕೆಟ್‌ 64ಕ್ಕೆ2). ಫಲಿತಾಂಶ: ಇಂಗ್ಲೆಂಡ್‌ಗೆ 12 ರನ್‌ಗಳ ಜಯ.

Post Comments (+)