ಶನಿವಾರ, ಆಗಸ್ಟ್ 20, 2022
22 °C
ಮೊದಲ ಟ್ವೆಂಟಿ–20 ಪಂದ್ಯ

ಮಲಾನ್‌ ಅರ್ಧಶತಕ: ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್‌: ಜಿದ್ದಾಜಿದ್ದಿಗೆ ಸಾಕ್ಷಿಯಾದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ‌ ಎರಡು ರನ್‌ಗಳ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ಕೊರೊನಾ ವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡ ಆರು ತಿಂಗಳ ಬಳಿಕ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ರೋಸ್‌ಬೌಲ್‌ನ ಖಾಲಿ ಕ್ರೀಡಾಂಗಣದಲ್ಲಿ 163 ರನ್‌ ಗುರಿ ಬೆನ್ನತ್ತಿದ್ದ ಆ್ಯರನ್‌ ಫಿಂಚ್‌ ಬಳಗ ಒಂದು ಹಂತದಲ್ಲಿ 14 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿ ಜಯದತ್ತ ದಾಪುಗಾಲು ಇಟ್ಟಿತ್ತು. ಆದರೆ 14 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ ಪತನವಾಗಿ ಗೆಲುವಿನ ಆಸೆ ಕಮರಿತು.

ಕೊನೆಯ ಮೂರು ಓವರ್‌ಗಳಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 26 ರನ್‌ ಬೇಕಿತ್ತು. ಎರಡು ಓವರ್‌ಗಳಲ್ಲಿ 19 ಹಾಗೂ ಕೊನೆಯ ಓವರ್‌ನಲ್ಲಿ 15 ರನ್‌ ಗಳಿಸಬೇಕಿತ್ತು.

ಟಾಮ್‌ ಕರನ್‌ ಎಸೆದ ಕೊನೆಯ ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್‌ಗಟ್ಟಿದ ಮಾರ್ಕಸ್‌ ಸ್ಟೋನಿಸ್‌ ಜಯದ ಆಸೆ ಚಿಗುರುವಂತೆ ಮಾಡಿದ್ದರು. ಆದರೆ ಕೊನೆಯ ನಾಲ್ಕು ಎಸೆತಗಳಲ್ಲಿ ಪ್ರವಾಸಿ ತಂಡಕ್ಕೆ ಒಂದೂ ಬೌಂಡರಿಯನ್ನು ಬಾರಿಸಲಾಗಲಿಲ್ಲ.

ಆಸ್ಟ್ರೇಲಿಯಾ ಪರ ನಾಯಕ ಆ್ಯರನ್‌ ಫಿಂಚ್‌ (46) ಹಾಗೂ ಡೇವಿಡ್‌ ವಾರ್ನರ್‌ (58) ಮೊದಲ ವಿಕೆಟ್‌ ಜೊತೆಯಾಟದಲ್ಲಿ 98 ರನ್‌ ಸೇರಿಸಿದರು. ಎರಡನೇ ವಿಕೆಟ್‌ ಆಗಿ ಸ್ಟೀವನ್‌ ಸ್ಮಿತ್‌ (18) ಔಟಾದ ಬಳಿಕ ಆಸ್ಟ್ರೇಲಿಯಾದ ದಿಢೀರ್‌ ಕುಸಿತ ಆರಂಭವಾಯಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್‌ ತಂಡವು ಡೇವಿಡ್‌ ಮಲಾನ್‌ (66) ಹಾಗೂ ಜೋಸ್‌ ಬಟ್ಲರ್‌ (44) ಅವರ ಉತ್ತಮ ಬ್ಯಾಟಿಂಗ್‌ ನೆರವಿನಿಂದ 162 ರನ್‌ ಗಳಿಸಿತ್ತು. 

ಕೇನ್‌ ರಿಚರ್ಡ್‌ಸನ್‌ (13ಕ್ಕೆ 2) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ (14ಕ್ಕೆ 2) ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದರು.

ಎರಡನೇ ಟ್ವೆಂಟಿ–20 ಪಂದ್ಯವು ಇದೇ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 162 (ಡೇವಿಡ್‌ ಮಲಾನ್‌ 66, ಜೋಸ್‌ ಬಟ್ಲರ್‌ 44, ಕ್ರಿಸ್‌ ಜೋರ್ಡಾನ್‌ ಔಟಾಗದೆ 14; ಗ್ಲೆನ್‌ ಮ್ಯಾಕ್ಸ್‌ವೆಲ್‌ 14ಕ್ಕೆ 2, ಕೇನ್‌ ರಿಚರ್ಡ್‌ಸನ್‌ 13ಕ್ಕೆ 2, ಆ್ಯಶ್ಟನ್‌ ಅಗರ್‌ 32ಕ್ಕೆ 2) ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160 (ಡೇವಿಡ್‌ ವಾರ್ನರ್‌ 58, ಆ್ಯರನ್‌ ಫಿಂಚ್‌ 46, ಮಾರ್ಕಸ್‌ ಸ್ಟೋನಿಸ್‌ ಔಟಾಗದೆ 23; ಜೋಫ್ರಾ ಆರ್ಚರ್‌ 33ಕ್ಕೆ 2, ಆದಿಲ್ ರಶೀದ್‌ 29ಕ್ಕೆ 2, ಮಾರ್ಕ್‌ ವುಡ್‌ 31ಕ್ಕೆ 1) ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ ಎರಡು ರನ್‌ ಜಯ. ಮುಂದಿನ ಪಂದ್ಯ: ಭಾನುವಾರ, ಸೌತಾಂಪ್ಟನ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು