ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಮೊದಲ ಪಂದ್ಯ ಇಂದು: ಅತಿಥೇಯ ಇಂಗ್ಲೆಂಡ್‌ಗೆ ಶುಭಾರಂಭದ ನಿರೀಕ್ಷೆ

ಉದ್ಘಾಟನಾ ಹಣಾಹಣಿಯಲ್ಲಿ ಮಾರ್ಗನ್‌ ನೇತೃತ್ವದ ಬಳಗಕ್ಕೆ ದಕ್ಷಿಣ ಆಫ್ರಿಕಾ ತಂಡದ ಸವಾಲು
Last Updated 30 ಮೇ 2019, 1:17 IST
ಅಕ್ಷರ ಗಾತ್ರ

ಲಂಡನ್‌ : ಕಳೆದ ಬಾರಿಯ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರ ಬಿದ್ದ ಇಂಗ್ಲೆಂಡ್‌ ತಂಡದ ತವರಿನಲ್ಲೇ ಈ ಬಾರಿ ಟೂರ್ನಿ ನಡೆಯುತ್ತಿದೆ. ಒಮ್ಮೆಯೂ ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದ ಇಂಗ್ಲೆಂಡ್‌ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಇದರ ಮೊದಲ ಹೆಜ್ಜೆಯಾಗಿ, ಗುರುವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿ ಕಣಕ್ಕೆ ಇಳಿಯಲಿದೆ.

ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರಿಗೆ ದಕ್ಷಿಣ ಆಫ್ರಿಕಾ ಎದುರಾಳಿ. ಕಳೆದ ಬಾರಿ ಕಂಡ ನಿರಾಸೆಯ ನಂತರ ಇಂಗ್ಲೆಂಡ್‌ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ವಿಶ್ವಕಪ್‌ ಟೂರ್ನಿಗಾಗಿಯೇ ನಾಲ್ಕು ವರ್ಷಗಳಿಂದ ವಿಶೇಷ ‘ಅಭ್ಯಾಸ’ ನಡೆಸಿದೆ. ಇಯಾನ್ ಮಾರ್ಗನ್ ಬಳಗ ಈಗ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ (6ಕ್ಕೆ481) ಕಲೆ ಹಾಕಿದ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ. ಹೀಗಾಗಿ ತವರಿನಲ್ಲಿ ಗೆಲುವಿಗೆ ನಾಂದಿ ಹಾಡಲು ಗುರುವಾರ ಪ್ರಯತ್ನಿಸಲಿದೆ.

ಬ್ಯಾಟಿಂಗ್ ಇಂಗ್ಲೆಂಡ್ ತಂಡದ ಬಲ. ಜೇಸನ್ ರಾಯ್, ಜಾನಿ ಬೇಸ್ಟೊ, ಜೋ ರೂಟ್‌, ಇಯಾನ್ ಮಾರ್ಗನ್ ಮತ್ತು ಜೋಸ್ ಬಟ್ಲರ್‌ ಅವರು ಯಾವುದೇ ಸಂದರ್ಭದಲ್ಲಿ ಪಂದ್ಯಕ್ಕೆ ತಿರುವು ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

‘ವಿಶ್ವ ದರ್ಜೆಯ ಆಟಗಾರರು ಇರುವ ತಂಡದಲ್ಲಿ ಆಡಲು ತುಂಬ ಖುಷಿಯಾಗುತ್ತಿದೆ. ಎದುರಾಳಿ ತಂಡ ಎಷ್ಟೇ ಮೊತ್ತ ಪೇರಿಸಿದರೂ ಬೆನ್ನತ್ತಿ ಗೆಲ್ಲುವ ಭರವಸೆ ತಂಡದಲ್ಲಿದೆ’ ಎಂದು ಇಂಗ್ಲೆಂಡ್ ಲೆಗ್ ಸ್ಪಿನ್ನರ್‌ ಆದಿಲ್ ರಶೀದ್ ಹೇಳಿದರು.

ನಿರಾಸೆ ಮರೆಯಲು ಮತ್ತೊಂದು ಪ್ರಯತ್ನ: ವಿಶ್ವಕಪ್ ಟೂರ್ನಿಯಲ್ಲಿ ಅನೇಕ ಬಾರಿ ಗೆಲುವಿನ ಹೆಬ್ಬಾಗಿಲಲ್ಲಿ ಎಡವಿರುವ ದಕ್ಷಿಣ ಆಫ್ರಿಕಾ ಕಳೆದ ಬಾರಿ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿತ್ತು. ಹೀಗಾಗಿ ನೋವು ಮರೆತು ಮುನ್ನಡೆಯಲು ಈ ಬಾರಿ ತಂಡ ಪ್ರಯತ್ನಿಸಲಿದೆ.

‘ಆತಿಥೇಯರಿಗೆ ತವರಿನಲ್ಲಿ ಗೆಲ್ಲಲೇಬೇಕಾದ ಒತ್ತಡವಿದೆ. ಆದ್ದರಿಂದ ನಮ್ಮ ತಂಡ ನಿರಾಳವಾಗಿ ಆಡಲಿದೆ. ಆತಿಥೇಯರು ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸುವುದು ಖುಷಿಯ ವಿಷಯ. ಹೀಗಾಗಿ ತಂಡದ ಆಟಗಾರರು ಉತ್ಸಾಹದಲ್ಲಿದ್ದಾರೆ’ ಎಂದು ದಕ್ಷಿಣ ಆಫ್ರಿಕಾದ ಕೋಚ್ ಓಟಿಸ್‌ ಗಿಬ್ಸನ್ ಅಭಿಪ್ರಾಯಪಡುತ್ತಾರೆ.

ಕಳೆದ ಬಾರಿಯ ಟೂರ್ನಿಯಲ್ಲಿ ಮಿಂಚಿದ್ದ ಎಬಿ ಡಿವಿಲಿಯರ್ಸ್‌ ಈಗ ನಿವೃತ್ತರಾಗಿದ್ದಾರೆ. ಆದರೂ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠ ಬ್ಯಾಟಿಂಗ್ ಬಳಗವನ್ನು ಹೊಂದಿದೆ. ಭಜದ ನೋವಿನಿಂದ ಬಳಲು‌ತ್ತಿರುವ ವೇಗಿ ಡೇಲ್‌ ಸ್ಟೇಯ್ನ್‌ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ ಕಗಿಸೊ ರಬಾಡ ನೇತೃತ್ವದ ಬೌಲಿಂಗ್ ಪಡೆ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿದೆ ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT