ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–20 ಸರಣಿ ಕ್ಲೀನ್ ‌ಸ್ವೀಪ್‌ ಮಾಡಿದ ಇಂಗ್ಲೆಂಡ್‌

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ
Last Updated 2 ಡಿಸೆಂಬರ್ 2020, 11:45 IST
ಅಕ್ಷರ ಗಾತ್ರ

ಕೇಪ್‌ಟೌನ್‌: ಡೇವಿಡ್‌ ಮಲಾನ್‌ (ಔಟಾಗದೆ 99, 47 ಎಸೆತ, 11 ಬೌಂಡರಿ, 5 ಸಿಕ್ಸರ್‌) ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡವು 3–0ಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ–20 ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದೆ. ಮಂಗಳವಾರ ರಾತ್ರಿ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ ಒಂಬತ್ತು ವಿಕೆಟ್‌ಗಳಿಂದ ಹರಿಣ ಪಡೆಯನ್ನು ಮಣಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 3 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತು. ಇಂಗ್ಲೆಂಡ್‌ 2.2 ಓವರ್‌ಗಳು ಬಾಕಿ ಇರುವಂತೆಯೇ ಜಯದ ಗುರಿ ತಲುಪಿತು.

ಮುರಿಯದ ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಮಲಾನ್‌ ಹಾಗೂ ಜೋಸ್‌ ಬಟ್ಲರ್ (ಔಟಾಗದೆ 67, 46 ಎಸೆತ, 3 ಬೌಂಡರಿ, 5 ಸಿಕ್ಸರ್‌) 167 ರನ್‌ ಸೇರಿಸಿದರು.

ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ನಲ್ಲಿ ಫಾಪ್‌ ಡು ಪ್ಲೆಸಿ (ಔಟಾಗದೆ 52, 5 ಬೌಂ, 3 ಸಿ.) ಹಾಗೂ ರಸ್ಸಿ ವ್ಯಾನ್ ಡರ್‌ ಡಸೆನ್‌ (ಔಟಾಗದೆ 74, 32 ಎ, 5 ಬೌಂ, 5 ಸಿ.) ಮಿಂಚಿದರು.

ಶತಕ ಗಳಿಸುವುದನ್ನೇ ಮರೆತ ಮಲಾನ್‌: ಟಿ–20ಯಲ್ಲಿ ತಮ್ಮ ಎರಡನೇ ಶತಕ ದಾಖಲಿಸುವ ಉತ್ತಮ ಅವಕಾಶವನ್ನು ಮಲಾನ್‌ ಕಳೆದುಕೊಂಡರು. ಇಂಗ್ಲೆಂಡ್‌ ಜಯಕ್ಕೆ ಒಂದು ರನ್‌ನ ಅಗತ್ಯವಿದ್ದಾಗ ಮಲಾನ್‌ 98 ರನ್‌ ಗಳಿಸಿದ್ದರು. ಎರಡು ರನ್‌ ಅಥವಾ ಬೌಂಡರಿ ಗಳಿಸಿದ್ದರೆ ಶತಕ ಪೂರೈಸಬಹುದಾಗಿತ್ತು. ಆದರೆ ಅವರು ಒಂದು ರನ್‌ ಮಾತ್ರ ಓಡಿದರು. ಈ ರನ್‌ ಗಳಿಸಿದ ಬಳಿಕ ಅವರಿಗೆ ತಾವು ಮಾಡಿದ ಪ್ರಮಾದ ಅರಿವಿಗೆ ಬಂದಿತು. ಇನ್ನೂ ಸಾಕಷ್ಟು ಎಸೆತಗಳೂ ಇದ್ದವು.

ಸರಣಿಯ ಮೊದಲ ಪಂದ್ಯವನ್ನು ಐದು ವಿಕೆಟ್‌ಗಳಿಂದ ಹಾಗೂ ಎರಡನೇ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಇಂಗ್ಲೆಂಡ್ ಗೆದ್ದಿತ್ತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 191 (ರಸ್ಸಿ ವ್ಯಾನ್‌ ಡರ್‌ ಡಸೆನ್‌ ಔಟಾಗದೆ 74, ಫಾಫ್‌ ಡುಪ್ಲೆಸಿ ಔಟಾಗದೆ 52, ತೆಂಬಾ ಬವುಮಾ 32;ಬೆನ್‌ ಸ್ಟೋಕ್ಸ್ 26ಕ್ಕೆ 2, ಕ್ರಿಸ್ ಜೋರ್ಡಾನ್‌ 42ಕ್ಕೆ 1). ಇಂಗ್ಲೆಂಡ್‌: 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 192 (ಡೇವಿಡ್ ಮಲಾನ್ ಔಟಾಗದೆ 99, ಜೋಸ್‌ ಬಟ್ಲರ್‌ ಔಟಾಗದೆ 67, ಜೇಸನ್‌ ರಾಯ್‌ 16; ಆ್ಯನ್ರಿಚ್‌ ನಾರ್ಕಿಯ 37ಕ್ಕೆ 1). ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 9 ವಿಕೆಟ್‌ಗಳ ಜಯ, 3–0ಯಿಂದ ಸರಣಿ ಗೆಲುವು.

ಮೂರು ವಿಶ್ವ ದಾಖಲೆಗಳು: ಈ ಪಂದ್ಯವು ಮೂರು ವಿಶ್ವದಾಖಲೆಗಳಿಗೆ ಸಾಕ್ಷಿಯಾಯಿತು.

1. ಉಭಯ ತಂಡಗಳ ಇಬ್ಬರು ಬ್ಯಾಟ್ಸ್‌ಮನ್‌ಗಳು ಟಿ–20 ಪಂದ್ಯದಲ್ಲಿ ಅಜೇಯ ಅರ್ಧಶತಕಗಳನ್ನು(ಇಂಗ್ಲೆಂಡ್‌ ಪರ ಡೇವಿಡ್ ಮಲಾನ್ ಹಾಗೂ ಜೋಸ್‌ ಬಟ್ಲರ್‌, ದಕ್ಷಿಣ ಆಫ್ರಿಕಾ ಪರರಸ್ಸಿ ವ್ಯಾನ್ ಡರ್‌ ಡಸೆನ್‌, ಫಾಫ್ ಡುಪ್ಲೆಸಿ) ದಾಖಲಿಸಿದ್ದು ಇದೇ ಮೊದಲು.

2. ಟಿ–20 ಪಂದ್ಯವೊಂದರಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಅಜೇಯ ಅರ್ಧಶತಕಗಳನ್ನು ಗಳಿಸಿದ್ದು ದಾಖಲೆಯಾಗಿದೆ.

3. ಟಿ–20 ಪಂದ್ಯವೊಂದರಲ್ಲಿ ಉಭಯ ತಂಡಗಳ ಆಟಗಾರರಿಂದ ಮೂರಂಕಿ ಮೊತ್ತದ ಮುರಿಯದ ಜೊತೆಯಾಟಗಳು ಬೆಳೆದುಬಂದಿದ್ದು ಇದೇ ಮೊದಲು. ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನಲ್ಲಿ ಡುಪ್ಲೆಸಿ–ವ್ಯಾನ್‌ ಡರ್‌ ಡೆಸೆನ್ ನಡುವೆ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 127 ರನ್‌ ಹರಿದುಬಂದರೆ, ಮುರಿಯದ ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಇಂಗ್ಲೆಂಡ್ ತಂಡದ ಮಲಾನ್‌ ಹಾಗೂ ಜೋಸ್‌ ಬಟ್ಲರ್ 167 ರನ್‌ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT