ಶುಕ್ರವಾರ, ಆಗಸ್ಟ್ 6, 2021
23 °C

ಕೊರೊನಾ ಕಾಲದ ‘ಟೆಸ್ಟ್’: ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್‌–ವೆಸ್ಟ್ ಇಂಡೀಸ್ ಪಂದ್ಯ

ಎಎಫ್‌ಪಿ/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ಬುಧವಾರ ಮತ್ತೊಂದು ಇತಿಹಾಸ ರಚಿಸಲು ಸಜ್ಜಾಗಿದೆ.  ಕೊರೊನೋತ್ತರ ಕಾಲದ ಮೊಟ್ಟಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಬರೋಬ್ಬರಿ ನಾಲ್ಕು ತಿಂಗಳುಗಳ ನಂತರ ಟೆಲಿವಿಜನ್ ಪರದೆಯ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದ ನೇರಪ್ರಸಾರ ನೋಡುವ ಅವಕಾಶ ಅಭಿಮಾನಿಗಳಿಗೆ ಲಭಿಸಲಿದೆ.  ಆತಿಥೇಯ ತಂಡವು ವೆಸ್ಟ್ ಇಂಡೀಸ್ ಬಳಗವನ್ನು ಎದುರಿಸಲಿದೆ.  ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯ ನಡೆಸಲಾಗುತ್ತಿದೆ.  ಈ ಹಣಾಹಣಿಯಲ್ಲಿ ಉಭಯ ತಂಡಗಳಲ್ಲಿ ಒಬ್ಬರು ಗೆಲ್ಲಬಹುದು ಅಥವಾ ಸಮಬಲ ಸಾಧಿಸಬಹುದು. ಅದು ಬೇರೆ ವಿಷಯ. ಆದರೆ, ಈ ಪಂದ್ಯದ ಯಶಸ್ಸು ಅಥವಾ ವೈಫಲ್ಯವು  ಭವಿಷ್ಯದ ಕ್ರಿಕೆಟ್ ಚಟುವಟಿಕೆಗಳಿಗೆ ದಿಕ್ಸೂಚಿ ಆಗುವದಂತೂ ಖಚಿತ.

ಏಕೆಂದರೆ, ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಕೊರೊನಾ ವೈರಸ್‌ ಹಾವಳಿ ಇನ್ನೂ ನಿಂತಿಲ್ಲ. ಅದರಲ್ಲೂ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಬೇಕಾಗಿರುವ ಆಸ್ಟ್ರೇಲಿಯಾ ಕೂಡ ಈ ಪಂದ್ಯದ ಮೇಲೆಯೇ ಕಣ್ಣಿಟ್ಟು ಕೂತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸ್ವದೇಶ ಅಥವಾ ವಿದೇಶದಲ್ಲಿ ನಡೆಸಬೇಕೆಂಬ ಗೊಂದಲದಲ್ಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಈ ಟೆಸ್ಟ್‌ನತ್ತ ಚಿತ್ತ ನೆಟ್ಟಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆಯು ಮೂರು ಪಂದ್ಯಗಳ ಸರಣಿಯನ್ನು ಯಶಸ್ವಿಯಾಗಿ ನಡೆಸುವ ವಿಶ್ವಾಸದಲ್ಲಿದೆ.  ಒಂದು ತಿಂಗಳ ಹಿಂದೆಯೇ ವಿಂಡೀಸ್ ತಂಡವು ಇಂಗ್ಲೆಂಡ್‌ಗೆ ಬಂದಿಳಿದಿದೆ. 14 ದಿನಗಳ ಕ್ವಾರಂಟೈನ್ ಪೂರೈಸಿದೆ. ಆರೋಗ್ಯ ತಪಾಸಣೆಯಲ್ಲಿಯೂ  ಉತ್ತೀರ್ಣವಾಗಿದೆ. ಮ್ಯಾಂಚೆಸ್ಟರ್ ಮತ್ತು ಸೌತಾಂಪ್ಟನ್‌ನಲ್ಲಿ ಪಂದ್ಯಗಳು ನಡೆಯುವ ಕ್ರೀಡಾಂಗಕ್ಕೆ ಹೊಂದಿಕೊಂಡಂತೆಯೇ ವಸತಿ, ಆಸ್ಪತ್ರೆ ಮತ್ತಿತರ ವ್ಯವಸ್ಥೆಗಳನ್ನು ಇಸಿಬಿ ನಿರ್ವಹಿಸಿದೆ.

ಹೋದ ವರ್ಷ  ಏಕದಿನ ವಿಶ್ವಕಪ್ ಸಂಘಟಿಸಿ ಯಶಸ್ವಿಯಾಗಿತ್ತು.  ಆಗ ಇಂಗ್ಲೆಂಡ್‌ ಚಾಂಪಿಯನ್ ಆಗಲು ಕಾರಣರಾಗಿದ್ದ ಬೆನ್ ಸ್ಟೋಕ್ಸ್‌ ಹಂಗಾಮಿ ನಾಯಕನಾಗಿ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವರು.  ನಾಯಕ ಜೋ ರೂಟ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಪತ್ನಿಯು ಹೆರಿಗೆಗಾಗಿ ಆಸ್ಪತ್ರೆಯಲ್ಲಿರುವುದರಿಂದ ರೂಟ್ ಕೂಡ ಅಲ್ಲಿದ್ದಾರೆ.  ಈ ಐತಿಹಾಸಿಕ ಟೆಸ್ಟ್‌ನಲ್ಲಿ ಗೆಲುವಿನ ಶ್ರೇಯ ಗಳಿಸುವ ಹುಮ್ಮಸ್ಸಿನಲ್ಲಿರುವ ಉಭಯ ತಂಡಗಳ ಹಣಾಹಣಿಯನ್ನು ನೋಡುವ ತವಕದಲ್ಲಿ ಕ್ರಿಕೆಟ್‌ ಪ್ರೇಮಿಗಳಿದ್ದಾರೆ.

ತಂಡಗಳು

ಇಂಗ್ಲೆಂಡ್:  ಬೆನ್ ಸ್ಟೋಕ್ಸ್ (ನಾಯಕ), ರೋರಿ ಬರ್ನ್ಸ್, ಡಾಮ್ ಸಿಬ್ಲೆ, ಝ್ಯಾಕ್ ಕ್ರಾಲಿ, ಜೋ ಡೆನ್ಲಿ, ಒಲೀ ಪೋಪ್, ಬೆನ್ ಸ್ಟೋಕ್ಸ್‌, ಜಾಸ್ ಬಟ್ಲರ್, ಜೇಮ್ಸ್  ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಡಾಮ್ ಬೆಸ್.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್‌ವೇಟ್, ಜಾನ್ ಕ್ಯಾಂಪ್‌ಬೆಲ್, ಶಾಮರ್ ಬ್ರೂಕ್ಸ್‌, ಶಾಯ್ ಹೋಪ್, ರೋಸ್ಟನ್ ಚೇಸ್, ಶೇನ್ ಡೋರಿಚ್, ಶಾನನ್ ಗ್ಯಾಬ್ರಿಯಲ್, ರಹಕೀಂ್ ಕಾರ್ನವೆಲ್, ಅಲ್ಜರಿ ಜೋಸೆಫ್, ಕೆಮರ್ ರೋಚ್.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸಿಕ್ಸ್

ಏನಿದೆ?

* ಜೀವ ರಕ್ಷಾ ವಾತಾವರಣ

* ಪಂದ್ಯದ ಮಧ್ಯದಲ್ಲಿ ಆಟಗಾರ ಕೊರೊನಾ ಸೋಂಕಿಗೆ ಒಳಗಾದರೆ ಬದಲೀ ಆಟಗಾರ

* ಕ್ರೀಡಾಂಗಣ ಪ್ರವೇಶ ಮತ್ತು ನಿರ್ಗಮನದಲ್ಲಿ ಆಟಗಾರರು, ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್

* ಚೆಂಡುಗಳಿಗೆ ಸ್ಯಾನಿಟೈಸೇಷನ್

ಏನಿಲ್ಲ?

* ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ

* ಚೆಂಡುಗಳಿಗೆ ಎಂಜಲು ಬಳಕೆ

* ಸಂಭ್ರಮಾಚರಣೆಗೆ ಕೈಕುಲುಕುವುದು, ಅಪ್ಪಿಕೊಳ್ಳುವುದು 

* ಆಟಗಾರರು ಪರಿಕರಗಳನ್ನು ಪರಸ್ಪರ ಹಂಚಿಕೊಳ್ಳುವುದು

ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ ಲೋಗೊ

ಅಮೆರಿಕದಲ್ಲಿ ಈಚೆಗೆ  ಆಫ್ರೊ–ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸ್ ದೌರ್ಜನ್ಯದಲ್ಲಿ ಸಾವಿಗೀಡಾಗಿದ್ದರು. ಆಗ ಜನಾಂಗೀಯ ತಾರತಮ್ಯದ ವಿರುದ್ಧದ ಹೋರಾಟ ಭುಗಿಲೆದ್ದಿದೆ. ಕ್ರಿಕೆಟ್‌ನಲ್ಲಿಯೂ ಇರುವ ವರ್ಣದ್ವೇಷವನ್ನು ವಿರೋಧಿಸಿ ಈ ಪಂದ್ಯದಲ್ಲಿ ವಿಂಡೀಸ್ ತಂಡದ ಆಟಗಾರರು ’ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌‘ ಲೋಗೊ ಧರಿಸಿ ಆಡಲಿದ್ದಾರೆ.  ಅವರಿಗೆ ಬೆಂಬಲವಾಗಿ ಇಂಗ್ಲೆಂಡ್ ಆಟಗಾರರೂ ಈ ಲೋಗೊ ಧರಿಸುವರು. ಐಸಿಸಿಯು ಇದಕ್ಕೆ ಅನುಮತಿ ನೀಡಿದೆ.

ಬಲಾಬಲ (ಕಳೆದ 5 ಪಂದ್ಯಗಳಲ್ಲಿ)

ವೆಸ್ಟ್‌ ಇಂಡೀಸ್‌ ಜಯ: 3

ಇಂಗ್ಲೆಂಡ್‌ ಜಯ: 2

ಪ್ರಜಾವಾಣಿ Podcast: ಕೊರೊನಾ ಕಾಲದ ‘ಟೆಸ್ಟ್’: ಕೇಳಲು ಇಲ್ಲಿ ಕ್ಲಿಕ್‌ ಮಾಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು