ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಫೈನಲ್ ನಂತರ ಏಷ್ಯಾಕಪ್ ಭವಿಷ್ಯ ನಿರ್ಧಾರ

Published 25 ಮೇ 2023, 19:35 IST
Last Updated 25 ಮೇ 2023, 19:35 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ನಂತರ ಏಷ್ಯಾ ಕಪ್ ಟೂರ್ನಿಯ ಭವಿಷ್ಯ ನಿರ್ಧಾರವಾಗಲಿದೆ.

ಈ ಬಾರಿಯ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಪಾಕಿಸ್ತಾನ ಪಡೆದುಕೊಂಡಿದೆ. ಆದರೆ ಭಾರತ ಸರ್ಕಾರದ ಅನುಮತಿಯಿಲ್ಲದೇ ತಂಡವನ್ನು ಪಾಕಿಸ್ತಾನದಲ್ಲಿ  ಆಡಲು ಕಳಿಸಲಾಗದು ಎಂದು ಈಗಾಗಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದೆ.

ಅದರಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಾಂ ಸೇಥಿ ಅವರು ’ಹೈಬ್ರಿಡ್‌ ಮಾದರಿ‘ಯ ಪ್ರಸ್ತಾವ ಇಟ್ಟಿದ್ದಾರೆ. ಅದರನ್ವಯ ಭಾರತ ತಂಡವು ತನ್ನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡುವ ಪ್ರಸ್ತಾವ ಇದೆ. ಆದರೆ ಇದುವರೆಗೆ ಯಾವುದೇ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿಲ್ಲ.

’ಇಲ್ಲಿಯವರೆಗೂ ಏಷ್ಯಾ ಕಪ್ ಆಯೋಜನೆಯ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಐಪಿಎಲ್ ಟೂರ್ನಿಯ ಆಯೋಜನೆಯಲ್ಲಿ ವ್ಯಸ್ತರಾಗಿದ್ದೇವೆ. ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ), ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಗಳ ಉನ್ನತಾಧಿಕಾರಿಗಳನ್ನು ಐಪಿಎಲ್ ಫೈನಲ್‌ ಪಂದ್ಯದ ವೀಕ್ಷಣೆಗೆ ಆಹ್ವಾನಿಸಲಾಗಿದೆ. ನಂತರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು‘ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. 

ಭಾರತ ಹಾಗೂ ಪಾಕಿಸ್ತಾನ ನಡುವಣದ ಎರಡು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಪಿಸಿಬಿಯು ಈ ಪಂದ್ಯಗಳನ್ನು ದುಬೈನಲ್ಲಿ ನಡೆಸಲು ಉತ್ಸುಕವಾಗಿದೆ. ಆದರೆ ಟೂರ್ನಿ ನಡೆಯುವ ಸೆಪ್ಟೆಂಬರ್ ತಿಂಗಳಲ್ಲಿ ಯುಎಇನಲ್ಲಿರುವ ತಾಪಮಾನದಲ್ಲಿ  ಏಕದಿನ ಮಾದರಿಯ ಕ್ರಿಕೆಟ್ ಆಯೋಜಿಸುವುದು ಕಷ್ಟದ ಕಾರ್ಯವಾಗಿದೆ. ಆದರೆ, ಪ್ರಯಾಣ ಹಾಗೂ ಸರಂಜಾಮು ಸಾಗಣೆ ದೃಷ್ಟಿಯಿಂದ ದುಬೈ ಸೂಕ್ತ ಎನ್ನಲಾಗಿದೆ. ಈ ಕುರಿತು ಎಸಿಸಿ ಚಿಂತಿಸುತ್ತಿದೆ.

ಏಷ್ಯಾ ಕಪ್ ಟೂರ್ನಿಯು ಸೆ. 1 ರಿಂದ 17ರವರೆಗೆ ಆಯೋಜನೆಗೊಂಡಿದೆ. ಇದರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಗಾನಿಸ್ತಾನ ಹಾಗೂ ನೇಪಾಳ ತಂಡಗಳು ಆಡಲಿವೆ.

’ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್ ಶಾ ಅವರು ಸದಸ್ಯ ರಾಷ್ಟ್ರಗಳ ಸಭೆಯನ್ನು ಕರೆಯಲಿದ್ದಾರೆ. ಅದರಲ್ಲಿ ತೀರ್ಮಾನ ತೆಗೆದುಕೊಂಡ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ‘ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT