ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ಶರ್ಮಾಗೆ ಆರಂಭಿಕ ‘ಟೆಸ್ಟ್’

ಮಹಾತ್ಮಾ ಗಾಂಧಿ–ನೆಲ್ಸನ್ ಮಂಡೇಲಾ ಟೆಸ್ಟ್ ಸರಣಿ ಇಂದಿನಿಂದ; ಬೂಮ್ರಾ ಇಲ್ಲದೇ ಕಣಕ್ಕಿಳಿಯಲಿದೆ ಭಾರತ
Last Updated 1 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ರೋಹಿತ್ ಶರ್ಮಾ ಟೆಸ್ಟ್‌ನಲ್ಲಿಯೂ ಅದೇ ಸಾಧನೆ ಮಾಡುವರೇ ಎಂಬ ಕುತೂಹಲ ಈಗ ಗರಿಗೆದರಿದೆ. ಜೊತೆಗೆ, ವಿಫಲರಾಗಿರುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಕೈಬಿಟ್ಟು ವೃದ್ಧಿಮಾನ‌ ಸಹ ಅವರನ್ನು ಕರೆದುಕೊಳ್ಳುವ ಮೂಲಕ ತಂಡ ಪ್ರಯೋಗಕ್ಕೆ ಮುಂದಾಗಿದೆ.

ಬುಧವಾರ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್‌ನಲ್ಲಿ ರೋಹಿತ್, ಮಯಂಕ್ ಅಗರವಾಲ್ ಜೊತೆಗೆ ಇನಿಂಗ್ಸ್‌ ಆರಂಭಿಸಲಿದ್ದಾರೆ. ಟೆಸ್ಟ್ ತಂಡದಿಂದ ಸ್ಥಾನ ಕಳೆದುಕೊಂಡಿರುವ ಕೆ.ಎಲ್. ರಾಹುಲ್ ಬದಲಿಗೆ ಅವರು ಆರಂಭ ಆಟಗಾರನಾಗಿ ಕಣಕ್ಕಿಳಿಯುವರು.

ಈಚೆಗೆ ನಡೆದ ಅಭ್ಯಾಸ ಪಂದ್ಯದಲ್ಲಿ ಅವರು ವಿಫಲರಾಗಿದ್ದರು. ಆದರೆ ಇಲ್ಲಿ ಮಿಂಚುವ ನಿರೀಕ್ಷೆಯಲ್ಲಿ ತಂಡವಿದೆ. 27 ಟೆಸ್ಟ್‌ಗಳನ್ನು ಆಡಿರುವ ‘ಮುಂಬೈಕರ್’ 1,585 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಅವರು ತಾವು ಆಡಿರುವ ಬಹುತೇಕ ಟೆಸ್ಟ್‌ಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

‘ರೋಹಿತ್ ಟೆಸ್ಟ್‌ಗೆ ಕಾಲಿಟ್ಟಾಗಿನಿಂದಾಗಲೇ ಆರಂಭ ಆಟಗಾರನ ಸ್ಥಾನ ನೀಡಬೇಕಿತ್ತು. ಕೊನೆ ಪಕ್ಷ ಹೋದ 10 ಟೆಸ್ಟ್‌ಗಳಿಂದಲಾದರೂ ಅವರನ್ನು ಸಿದ್ಧಗೊಳಿಸಬೇಕಿತ್ತು. ಈ ಸರಣಿಯಲ್ಲಿ ಅವರು ಬಹಳಷ್ಟು ರನ್‌ ಗಳಿಸಬೇಕು ಎಂದು ನಿರೀಕ್ಷೆ ಮಾಡುವುದು ತಪ್ಪು’ ಎಂದು ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಈಚೆಗೆ ಹೇಳಿದ್ದರು.

ಸತತ ವೈಫಲ್ಯ ಅನುಭವಿಸಿರುವ ಯುವ ಆಟಗಾರ ರಿಷಭ್ ಪಂತ್ ಬದಲಿಗೆ ‘ಬಂಗಾಳಿ ಬಾಬು’ ವೃದ್ಧಿಮಾನ್ ಸಹಾ ಕಣಕ್ಕಿಳಿಯುವುದು ಖಚಿತವಾಗಿದೆ. ಇಬ್ಬರು ಮಧ್ಯಮವೇಗಿಗಳು ಮತ್ತು ಮೂವರು ಸ್ಪಿನ್ನರ್‌ಗಳು ಅವಕಾಶ ಪಡೆಯಬಹುದು. ಅದರಲ್ಲೂ ಹನುಮವಿಹಾರಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.

ಬೂಮ್ರಾ ಕೊರತೆ: ಬೆನ್ನುನೋವಿನ ಚಿಕಿತ್ಸೆಗೆ ತೆರಳಿರುವ ಜಸ್‌ಪ್ರೀತ್ ಬೂಮ್ರಾ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅದರಿಂದಾಗಿ ಅನುಭವಿ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳು ಇವೆ.

ಸದ್ಯ ಎಲ್ಲ ಲೆಕ್ಕಾಚಾರಗಳ ಪ್ರಕಾರ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಏಕೆಂದರೆ, ನಾಲ್ಕು ವರ್ಷಗಳ ಹಿಂದೆ ಇಲ್ಲಿ ಉಭಯ ತಂಡಗಳ ನಡುವೆ ಸರಣಿ ನಡೆದಾಗ ಭಾರತ 3–0ಯಿಂದ ಗೆದ್ದಿತ್ತು. ಆಗ ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದ ಫಾಫ್ ಡು ಪ್ಲೆಸಿ ಈಗ ತಂಡವನ್ನು ಮುನ್ಡಡೆಸುತ್ತಿದ್ದಾರೆ. ಕ್ವಿಂಟನ್ ಡಿಕಾಕ್ ಆಗ ಕೂಡ ಇದ್ದರು. ಈಚೆಗೆ ಟ್ವೆಂಟಿ–20 ಸರಣಿಯನ್ನು ಸಮ ಮಾಡಿಕೊಳ್ಳುವಲ್ಲಿ ಅವರ ಆಟವೇ ಮಹತ್ವದ್ದಾಗಿತ್ತು. ಆದ್ದರಿಂದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಟೆಸ್ಟ್ ಸರಣಿಯಲ್ಲಿಯೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ತೆಂಬಾ ಬವುಮಾ ಮತ್ತು ಏಡನ್ ಮರ್ಕರಮ್ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಬೌಲಿಂಗ್‌ನಲ್ಲಿ ಕಗಿಸೊ ರಬಾಡ, ವೆರ್ನಾನ್ ಫಿಲ್ಯಾಂಡರ್ ಮತ್ತು ಲುಂಗಿ ಗಿಡಿ ಅವರ ಮೇಲೆ ತಂಡವು ಅವಲಂಬಿತವಾಗಿದೆ.

ತವರಿನ ಅಂಗಳದಲ್ಲಿ ಸತತ 11ನೇ ಟೆಸ್ಟ್ ಸರಣಿ ಜಯಿಸುವ ತವಕದಲ್ಲಿರುವ ಭಾರತ ತಂಡವನ್ನು ಎದುರಿಸಲು ಫಾಫ್ ಬಳಗವು ವಿಶೇಷ ಯೋಜನೆ ಯೊಂದಿಗೆ ಕಣಕ್ಕಿಳಿಯುವುದ ಖಚಿತ.

ಆದರೆ, ಮಳೆ ಬರುವ ನಿರೀಕ್ಷೆ ಇರುವುದರಿಂದ ಪಂದ್ಯಕ್ಕೆ ಅಡಚಣೆ ಉಂಟಾಗಬಹುದು.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮವಿಹಾರಿ, ರಿಷಭ್ ಪಂತ್, ವೃದ್ಧಿಮನ್ ಸಹಾ, ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಭಮನ್ ಗಿಲ್.

ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿ (ನಾಯಕ), ತೆಂಬಾ ಬವುಮಾ, ತೀನಸ್ ಡಿ ಬ್ರಯನ್, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಜುಬೇರ್ ಹಮ್ಜಾ, ಕೇಶವ್ ಮಹಾರಾಜ್, ಏಡನ್ ಮಾರ್ಕರಂ, ಸೆನುರನ್ ಮುತ್ತುಸಾಮಿ, ಲುಂಗಿ ಗಿಡಿ, ಎನ್ರಿಚ್ ನೊರ್ಜೆ, ವೆರ್ನಾನ್ ಫಿಲ್ಯಾಂಡರ್, ಡೇನ್ ಪೀಡ್ತ್, ಕಗಿಸೊ ರಬಾಡ, ರೂಡಿ ಸೆಕಂಡ್.

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT