ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೀಂ ಇಂಡಿಯಾ ಕೋಚ್ ಆಗಲು ಇಷ್ಟ: ಗೌತಮ್ ಗಂಭೀರ್

Published 3 ಜೂನ್ 2024, 0:09 IST
Last Updated 3 ಜೂನ್ 2024, 0:09 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಲು ಇಷ್ಟ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. ಕೋಚ್ ಹುದ್ದೆಗೆ ಅವರು ಮುಂಚೂಣಿಯಲ್ಲಿದ್ದಾರೆ ಎಂಬ ಉಹಾಪೋಹಗಳ ನಡುವೆಯೇ ಈ ಹೇಳಿಕೆ ಮಹತ್ವ ಪಡೆದಿದೆ. 

‌ಈ ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಅವರು ಭಾರತ ತಂಡದ ಕೋಚ್ ಹುದ್ದೆ ಆಕಾಂಕ್ಷಿಯಾಗಿದ್ದಾರೆಂಬ ಮಾತುಗಳೂ ಕೇಳಿಬಂದಿದ್ದವು. ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಅವಧಿ ಟಿ20 ವಿಶ್ವಕಪ್ ಬಳಿಕ ಮುಗಿಯಲಿದೆ. 

ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆ ದಿನವಾಗಿತ್ತು. ಆದರೆ, ಗಂಭೀರ್ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

‘ನಾನು ಭಾರತ ತಂಡಕ್ಕೆ ತರಬೇತುದಾರನಾಗಲು ಇಷ್ಟಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನೀವು 140 ಕೋಟಿ ಭಾರತೀಯರನ್ನು ಮತ್ತು ವಿಶ್ವದಾದ್ಯಂತ ಇರುವವರನ್ನು ಪ್ರತಿನಿಧಿಸುತ್ತಿತ್ತೀರಿ’ ಎಂದು ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 42 ವರ್ಷದ ಗಂಭೀರ್ ಹೇಳಿದರು.

ಮುಖ್ಯ ಕೋಚ್ ಹುದ್ದೆಗೆ ಗಂಭೀರ್ ಉತ್ತಮ ಆಯ್ಕೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದರು.

ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗಂಭೀರ್ ಮಾತನಾಡಿದರು. 

ಭಾರತ ಕ್ರಿಕೆಟ್ ತಂಡಕ್ಕೆ ಕೋಚಿಂಗ್ ನೀಡುವ ಕುರಿತು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ‘ಬಹಳಷ್ಟು ಜನರು ನನ್ನನ್ನು ಕೇಳಿದ್ದರೂ ಈ ಪ್ರಶ್ನೆಗೆ ಉತ್ತರಿಸಿಲ್ಲ. ಆದರೆ ಈಗ ನಿಮಗೆ ಉತ್ತರಿಸಬೇಕಾಗಿದೆ’ ಎಂದರು.

‘140 ಕೋಟಿ ಭಾರತೀಯರು ವಿಶ್ವಕಪ್ ಗೆಲ್ಲಲು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರೆ ಮತ್ತು ನಾವು ಆಡಲು ಮತ್ತು ಅವರನ್ನು ಪ್ರತಿನಿಧಿಸಲು ಪ್ರಾರಂಭಿಸಿದರೆ ಭಾರತ ವಿಶ್ವಕಪ್ ಗೆಲ್ಲುತ್ತದೆ. ನಿರ್ಭೀತಿಯಿಂದ ಇರಬೇಕಾದುದು ಅತ್ಯಂತ ಮುಖ್ಯವಾದ ವಿಷಯ’ ಎಂದು ಗಂಭೀರ್ ಹೇಳಿದರು.

‘ಸುರಕ್ಷಿತ ಡ್ರೆಸ್ಸಿಂಗ್ ರೂಮ್ ಸಂತೋಷದ ಡ್ರೆಸ್ಸಿಂಗ್ ರೂಮ್ ಆಗಿದೆ ಮತ್ತು ಸಂತೋಷದ ಡ್ರೆಸ್ಸಿಂಗ್ ರೂಮ್ ವಿಜೇತ ಡ್ರೆಸ್ಸಿಂಗ್ ಕೋಣೆಯಲ್ಲಿ ಕೊನೆಗೊಳ್ಳುತ್ತದೆ. ಕೆಕೆಆರ್‌ನಲ್ಲಿ ನಾನು ಮಾಡಿದ ಏಕೈಕ ಕೆಲಸವೆಂದರೆ ಈ ಮಂತ್ರವನ್ನು ಅನುಸರಿಸುವುದು. ದೇವರ ದಯೆಯಿಂದ ಅದು ನಿಜವಾಗಿಯೂ ಕೆಲಸ ಮಾಡಿತು’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT